ಬ್ಯಾಂಕ್’ಗಳ ವಿರುದ್ಧ ಆರ್‌ಬಿಐನಿಂದ ಕಠಿಣ ಕ್ರಮ

By Suvarna Web DeskFirst Published Mar 14, 2018, 2:54 PM IST
Highlights

ನಕಲಿ ಎಲ್‌ಒಯು (ಲೆಟರ್‌ ಆಫ್‌ ಅಂಡರ್‌ಟೇಕಿಂಗ್‌)ಗಳನ್ನು ಸೃಷ್ಟಿಸುವ ಮೂಲಕ, ಉದ್ಯಮಿಗಳಾದ ನೀರವ್‌ ಮೋದಿ ಮತ್ತು ಮೆಹುಲ್‌ ಚೋಕ್ಸಿ, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ 13000 ಕೋಟಿ ರೂ.ಗೂ ಹೆಚ್ಚಿನ ವಂಚನೆ ನಡೆಸಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಆರ್‌ಬಿಐ, ತಕ್ಷಣದಿಂದಲೇ ಜಾರಿಗೆ ಬರುವಂತೆ ಬ್ಯಾಂಕ್‌ಗಳು ಎಲ್‌ಒಯುಗಳನ್ನು ವಿತರಿಸುವುದನ್ನು ನಿಷೇಧಿಸಿದೆ.

ಮುಂಬೈ: ನಕಲಿ ಎಲ್‌ಒಯು (ಲೆಟರ್‌ ಆಫ್‌ ಅಂಡರ್‌ಟೇಕಿಂಗ್‌)ಗಳನ್ನು ಸೃಷ್ಟಿಸುವ ಮೂಲಕ, ಉದ್ಯಮಿಗಳಾದ ನೀರವ್‌ ಮೋದಿ ಮತ್ತು ಮೆಹುಲ್‌ ಚೋಕ್ಸಿ, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ 13000 ಕೋಟಿ ರೂ.ಗೂ ಹೆಚ್ಚಿನ ವಂಚನೆ ನಡೆಸಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಆರ್‌ಬಿಐ, ತಕ್ಷಣದಿಂದಲೇ ಜಾರಿಗೆ ಬರುವಂತೆ ಬ್ಯಾಂಕ್‌ಗಳು ಎಲ್‌ಒಯುಗಳನ್ನು ವಿತರಿಸುವುದನ್ನು ನಿಷೇಧಿಸಿದೆ. ಆದರೆ ಕೆಲವೊಂದು ನಿಯಮಗಳನ್ನು ಪಾಲಿಸಿದ ಬಳಿಕ ಇಂಥ ಎಲ್‌ಒಯುಗಳನ್ನು ಬ್ಯಾಂಕ್‌ಗಳು ವಿತರಿಸಬಹುದಾಗಿದೆ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.

ಭಾರತದಲ್ಲಿನ ಯಾವುದೇ ಬ್ಯಾಂಕ್‌, ವಿದೇಶದಲ್ಲಿನ ಇತರೆ ಬ್ಯಾಂಕ್‌ನ ಶಾಖೆಗಳಿಗೆ, ತನ್ನ ಖಾತೆದಾರನೊಬ್ಬನ ಪರವಾಗಿ ಸಾಲದ ಖಾತರಿಯನ್ನು ನೀಡುತ್ತದೆ. ಇಂಥ ಖಾತರಿ ಪತ್ರವನ್ನು ಎಲ್‌ಒಯು ಎಂದು ಹೇಳಲಾಗುತ್ತದೆ. ಇಂಥ ಪತ್ರ ಬಳಸಿಕೊಂಡು ಉದ್ಯಮಿಗಳು ವಿದೇಶದಲ್ಲಿನ ಬ್ಯಾಂಕ್‌ಗಳ ಶಾಖೆಗಳಿಂದ ಸಾಲ ಪಡೆದುಕೊಂಡು ಆ ಹಣದ ಮೂಲಕ ಅಗತ್ಯ ವಸ್ತುಗಳನ್ನು ಖರೀದಿಸಿ ಅದನ್ನು ಭಾರತಕ್ಕೆ ರಫ್ತು ಮಾಡುತ್ತಾರೆ.

ಬಳಿಕ ಖಾತರಿ ನೀಡಿದ ಬ್ಯಾಂಕ್‌, ವಿದೇಶದಲ್ಲಿನ ಬೇರೆ ಬ್ಯಾಂಕ್‌ನ ಶಾಖೆಗಳಿಗೆ ಹಣ ಪಾವತಿ ಮಾಡುತ್ತದೆ. ಇದಕ್ಕೆ ಬ್ಯಾಂಕ್‌ಗಳು ಕಮೀಷನ್‌ ಪಡೆಯುತ್ತವೆ. ಉದ್ಯಮಿ ನೀರವ್‌ ಮೋದಿ ಪಿಎನ್‌ಬಿ ಬ್ಯಾಂಕ್‌ನಿಂದ ಇದೇ ರೀತಿಯಲ್ಲಿ ನಕಲಿ ಎಲ್‌ಒಯುಗಳನ್ನು ಪಡೆದು, ಅದನ್ನು ವಿದೇಶಗಳಲ್ಲಿನ ಇತರೆ ಬ್ಯಾಂಕ್‌ಗಳಿಗೆ ಸಲ್ಲಿಸುವ ಮೂಲಕ ಭಾರೀ ಸಾಲ ಪಡೆದಿದ್ದರು.

click me!