
ಬೆಂಗಳೂರು(ಸೆ.03): ನಗರದಲ್ಲಿ ಬಿದ್ದ ಬಾರಿ ಮಳೆಯಿಂದಾಗಿ 10 ವರ್ಷಗಳ ಬಳಿಕ ಲಾಲ್'ಬಾಗ್ ಕೆರೆ ಕೋಡಿ ಹರಿದಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ತೋಟಗಾರಿಕೆ ಇಲಾಖೆ ಮತ್ತು ಲಾಲ್ ಬಾಗ್ ನಡಿಗೆದಾರರ ಒಕ್ಕೂಟ ಸಾಂಪ್ರದಾಯಕವಾಗಿ ಶನಿವಾರ ಮುಂಜಾನೆ ಕೆರೆಗೆ ಬಾಗೀನ ಅರ್ಪಿಸುವ ಮೂಲಕ ಸಂಭ್ರಮಪಟ್ಟರು.
ಸುಮಾರು 30 ಎಕರೆ ವ್ಯಾಪ್ತಿಯಲ್ಲಿ ವಿಸ್ತರಿಸಿರುವ ಲಾಲ್ ಬಾಗ್ ಕೆರೆ 2007ರಲ್ಲಿ ಒಮ್ಮೆ ಕೋಡಿ ಹರಿದಿತ್ತು. ಆದರೆ ಆಗ ವ್ಯವಸ್ಥಿತವಾಗಿ ನಿರ್ವಹಣೆ ಇಲ್ಲದ್ದರಿಂದ ನೀರು ಊರ್ವಶಿ ಮಾರ್ಗವಾಗಿ ಸಿದ್ದಯ್ಯರಸ್ತೆ, ಸುಧಾಮನಗರ, ಶಾಂತಿನಗರದವರೆಗೆ ನುಗ್ಗಿತ್ತು. ಇದೀಗ ಅಂತಹ ಅನಾಹುತಗಳಾಗಿಲ್ಲ. ಉದ್ಯಾನಕ್ಕಾಗಲಿ ಅಥವಾ ಉದ್ಯಾನದಲ್ಲಿನ ಗಿಡ-ಮರಗಳಿಗಾಗಲಿ ಯಾವುದೇ ಹಾನಿಯುಂಟಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆರೆಯು ತೋಟಗಾರಿಕೆ ತರಬೇತಿ ಕೇಂದ್ರ ಭಾಗದಲ್ಲಿ ಸುಮಾರು 26-30 ಅಡಿಯಷ್ಟು ಆಳವಿದ್ದರೆ ಸುತ್ತಲೂ 15-20 ಅಡಿಯಷ್ಟು ಆಳವನ್ನು ಹೊಂದಿದೆ. ಕೆರೆಗೆ ಜಯನಗರ 1ನೇ ಬ್ಲಾಕ್, ಕನಕನಪಾಳ್ಯ, ಸೌತ್ ಎಂಡ್ ವೃತ್ತ ಮತ್ತಿತರ ಭಾಗಗಳಿಂದ ಲಾಲ್ ಬಾಗ್ ಕೆರೆಗೆ ನೀರು ಬರುತ್ತದೆ. ಕೆರೆಗೆ ಇದೀಗ ಕಾಂಕ್ರೀಟ್ ಗೋಡೆ ನಿರ್ಮಿಸಲಾಗಿದೆ. ಹೀಗಾಗಿ ಕೆರೆ ಒಡೆಯುವುದಿಲ್ಲ. ಕೆರೆ ತುಂಬಿದಾಗ ನೀರು ಆಚೆ ಬರಲು ತೂಬಿನ ವ್ಯವಸ್ಥೆ ಮಾಡಲಾಗಿದೆ ಎಂದು ರಾಜ್ಯ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಂ. ಚಂದ್ರಶೇಖರ್ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.