ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ವಿದೇಶದ ನೆಲದಲ್ಲಿ ಯಾವ ಕಾರಣದಿಂದಾಗಿ ನಿಧನ ಹೊಂದಿದರು ಎಂಬ ಬಗ್ಗೆ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ನವದೆಹಲಿ: ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ವಿದೇಶದ ನೆಲದಲ್ಲಿ ಯಾವ ಕಾರಣದಿಂದಾಗಿ ನಿಧನ ಹೊಂದಿದರು ಎಂಬ ಬಗ್ಗೆ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ನಿರ್ದಿಷ್ಟ ರೀತಿಯಾದ ಹೃದಯಾಘಾತದಿಂದಾಗಿ ಶಾಸ್ತ್ರಿ ಅವರು ತಾಷ್ಕೆಂಟ್‌ನಲ್ಲಿ ಅಸುನೀಗಿದರು ಎಂದು ವರದಿಯಲ್ಲಿ ತಿಳಿಸಲಾಗಿದೆ. ‘ತಾಷ್ಕೆಂಟ್‌ನಲ್ಲಿ 1966 ರ ಜ.11ರಂದು ಶಾಸ್ತ್ರಿ ಅವರು ಹೃದಯಘಾತಕ್ಕೊಳಗಾದ ಪರಿಣಾಮ, ಹೃದಯಕ್ಕೆ ರಕ್ತದ ಪೂರೈಕೆ ಸ್ಥಗಿತವಾಯಿತು.
ಈ ಹಿನ್ನೆಲೆಯಲ್ಲಿ ಅವರು ಮೃತರಾದರು’ ಎಂದು ಮಾಹಿತಿ ಹಕ್ಕು ಅಡಿ ರೋಹಿತ್ ಚೌಧರಿ ಎಂಬುವರು ಸಲ್ಲಿಸಿದ್ದ ಅರ್ಜಿಗೆ ಉತ್ತರ ರೂಪದಲ್ಲಿ ತಿಳಿಸಲಾಗಿದೆ. ಅಲ್ಲದೆ, ಜ.11ರ ರಾತ್ರಿ ತಾಷ್ಕೆಂಟ್‌ನಲ್ಲಿ ನಡೆದ ಘಟನಾವಳಿಗಳ ಸಮಗ್ರ ಮಾಹಿತಿ ಉಳ್ಳ ವೈದ್ಯಕೀಯ ವರದಿಯನ್ನು ಸರ್ಕಾರ ಬಿಡುಗಡೆ ಮಾಡಿದೆ ಎಂದು ಎಂದು ಆಂಗ್ಲ ಮಾಧ್ಯಮ ‘ರಿಪಬ್ಲಿಕ್ ಟೀವಿ’ ವರದಿ ಮಾಡಿದೆ. ‘ಆರೋಗ್ಯವಾಗಿಯೇ ಇದ್ದ ಅವರಿಗೆ ಏಕಾಏಕಿ ಕೆಮ್ಮು, ಎದೆನೋವು ಹಾಗೂ ಉಸಿರಾಟದ ತೊಂದರೆ ಕಾಣಿಸಿತು. ಅವರನ್ನು ಬದುಕಿಸುವ ವೈದ್ಯರ ಯಾವುದೇ ಯತ್ನ ಫಲಿಸಲಿಲ್ಲ’ ಎಂದು ವರದಿಯಲ್ಲಿ ತಿಳಿಸಲಾಗಿದೆ ಎಂದು ಪ್ರಧಾನಿ ಕಚೇರಿ ಉತ್ತರಿಸಿದೆ.
ತಾಷ್ಕೆಂಟ್ ಒಪ್ಪಂದಕ್ಕೆ ಸಹಿ ಹಾಕುವ ಸಲುವಾಗಿ ಉಜ್ಬೇಕಿಸ್ತಾನದ ತಾಷ್ಕೆಂಟ್‌ಗೆ ಹೋಗಿದ್ದ ಲಾಲ್ ಬಹುದ್ದೂರ್ ಶಾಸ್ತ್ರಿ ಅವರು ಅಲ್ಲಿಯೇ ನಿಗೂಢವಾಗಿ ಸಾವಿಗೀಡಾಗಿದ್ದರು.ಶಾಸ್ತ್ರಿ ಅವರು ವಿದೇಶಿ ನೆಲದಲ್ಲಿ ಸಾವಿಗೀಡಾದ ಭಾರತದ ಮೊದಲ ಪ್ರಧಾನಿಯಾಗಿದ್ದರು. ಈ ಹಿಂದೆಯೂ ಶಾಸ್ತ್ರಿ ಅವರ ಸಾವಿಗೆ ಕಾರಣವೇನು ಎಂಬುದರ ಬಗ್ಗೆ ಈ ಹಿಂದೆ 7 ಬಾರಿ ಮಾಹಿತಿ ಪಡೆಯಲಾಗಿತ್ತು. ಆದರೆ, ಈ ಹಿಂದಿನ ಯಾವ ವರದಿಗಳಲ್ಲಿಯೂ ಶಾಸ್ತ್ರಿ ಅವರ ಸಾವಿಗೆ ಕಾರಣವೇನು ಎಂಬುದರ ಬಗ್ಗೆ ಉಲ್ಲೇಖವಿರಲಿಲ್ಲ ಎಂದು ಹೇಳಲಾಗಿದೆ.