ಬೆಳಗಾವಿ ಪಾಲಿಟಿಕ್ಸ್, ಏನು ಫಿಕ್ಸ್, ಏನು ಮಿಕ್ಸ್?: ಇಲ್ಲಿದೆ ಡಿಟೇಲ್ಸ್!

By nikhil vkFirst Published 6, Sep 2018, 6:10 PM IST
Highlights

ಎತ್ತ ಸಾಗುತ್ತಿದೆ ಬೆಳಗಾವಿ ರಾಜಕಾರಣದ ದಿಕ್ಕು?! ಜಾರಕಿಹೋಳಿ ಸಹೋದರರು, ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಕದನ! ಅಂತಿಮವಾಗಿ ಗೆಲ್ಲೋದ್ಯಾರು ಜಾರಕಿಹೋಳಿ ಅಥವಾ ಹೆಬ್ಬಾಳ್ಕರ್?! ವೈಮನಸ್ಸಿಗೆ ಕೇವಲ ಪಿಎಲ್ ಡಿ ಬ್ಯಾಂಕ್ ಚುನಾವಣೆ ಕಾರಣವೇ?! ವೈಮನಸ್ಸು ಶುರುವಾಗಿದ್ದೆಲ್ಲಿಂದ, ಮುಕ್ಕಾಯವಾಗೋದು ಎಲ್ಲಿಗೆ?

 

ಬೆಳಗಾವಿ(ಸೆ.6): ಬೆಳಗಾವಿ ಪಾಲಿಟಿಕ್ಸ್ ಇಡೀ ರಾಜ್ಯ ರಾಜಕಾರಣವನ್ನೇ ತುದಿಗಾಲ ಮೇಲೆ ನಿಲ್ಲಿಸಿದೆ. ಬೆಳಗಾವಿಯಲ್ಲಾಗುತ್ತಿರುವ ರಾಜಕೀಯ ಬೆಳವಣಿಗೆಗಳು ರಾಜ್ಯ ಸಮ್ಮಿಶ್ರ ಸರ್ಕಾರದ ಮೇಲೂ ಕಾರ್ಮೋಡ ಕವಿಯುವಂತೆ ಮಾಡಿದೆ. ಜಾರಕಿಹೋಳಿ ಸಹೋದರರು ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ವೈಮನಸ್ಸು ಇಷ್ಟೊಂದು ರಾಜಕೀಯ ರಾದ್ದಾಂತ ಸೃಷ್ಟಿಸುತ್ತೆ ಅಂತಾ ಖುದ್ದು ಕಾಂಗ್ರೆಸ್ ನಾಯಕರಿಗೇ ಅರಿವಿರಲಿಲ್ಲ ಎಂಬುದು ಕೂಡ ಅಷ್ಟೇ ಸತ್ಯ.

ಅಷ್ಟಕ್ಕೂ ಜಾರಕಿಹೋಳಿ ಸಹೋದರರು ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಏಕಿಷ್ಟು ವೈಮನಸ್ಸು?. ಒಂದೇ ಪಕ್ಷದಲ್ಲಿದ್ದುಕೊಂಡೂ ಈ ನಾಯಕರು ಏಕಿಷ್ಟು ಕಿತ್ತಾಡುತ್ತಿದ್ದಾರೆ?. ಕೇವಲ ಒಂದು ಪಿಎಲ್ ಡಿ ಬ್ಯಾಂಕ್ ಚುನಾವಣೆ ಜಾರಕಿಹೋಳಿ ಸಹೋದರರು ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಕಲಹಕ್ಕೆ ಕಾರಣವಾಗಿದೆಯಾ?. ಬೆಳಗಾವಿ ರಾಜಕಾರಣವನ್ನು ಅತ್ಯಂತ ಹತ್ತಿರದಿಂದ ಬಲ್ಲವರು ಇದಕ್ಕೆ ಇಲ್ಲ ಎಂದೇ ಉತ್ತರ ಕೊಡುತ್ತಾರೆ. ಕಾರಣ ಕೇವಲ ಒಂದು ಪಿಎಲ್ ಡಿ ಬ್ಯಾಂಕ್ ಚುನಾವಣೆ ಈ ನಾಯಕರ ನಡುವೆ ಇಷ್ಟು ದೊಡ್ಡ ಕಂದಕ ಸೃಷ್ಟಿಸಲು ಸಾಧ್ಯವಿಲ್ಲ ಎಂಬುದೇ ಹಲವರ ಅನಿಸಿಕೆ.

ಹಾಗಿದ್ದರೆ ಬೆಳಗಾವಿ ರಾಜಕಾರಣದ ಬುಡವನ್ನೇ ಅಲ್ಲಾಡಿಸುತ್ತಿರುವ ಜಾರಕಿಹೋಳಿ ಸಹೋದರರು ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಮಧ್ಯದ ವೈಮನಸ್ಸಿಗೆ ಅಸಲಿ ಕಾರಣ ಏನು?. ಈ ಪ್ರಶ್ನೆಗೆ ಕೆದಕಿದಷ್ಟೂ ಕುತೂಹಲಕಾರಿ ಉತ್ತರಗಳು ಸಿಗುತ್ತಾ ಹೋಗುತ್ತವೆ.

"

ವಿಧಾನಸಭೆ ಚುನಾವಣೆ:

ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲೇ ಜಾರಕಿಹೋಳಿ ಮತ್ತು ಹೆಬ್ಬಾಳ್ಕರ್ ನಡುವೆ ಮಹಾಯದ್ದಕ್ಕೆ ವೇದಿಕೆ ಸಜ್ಜಾಗಿತ್ತು. ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧೆಗೆ ಮುಂದಾದ ಲಕ್ಷ್ಮೀ ಹೆಬ್ಬಾಳ್ಕರ್, ಆಗಲೇ ಬೆಳಗಾವಿ ರಾಜಕಾರಣದ ಕೇಂದ್ರ ಬಿಂದುವಾಗಿ ಹೊರಹೊಮ್ಮಿದರು. ಇದರಿಂದ ದೂರದ ಗೋಕಾಕ್ ಕ್ಷೇತ್ರದಲ್ಲಿ ಸಣ್ಣದೊಂದು ಕಂಪನ ಶುರುವಾಗಿದ್ದು.

ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಪ್ರದೇಶ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ಹುದ್ದೆ ಒಲಿದು ಬಂದಾಗ, ಮಹಿಳಾ ರಾಜಕಾರಣಕ್ಕಷ್ಟೇ ಲಕ್ಷ್ಮೀ ಹೆಬ್ಬಾಳ್ಕರ್ ಸೀಮಿತವಾಗಲಿದ್ದಾರೆ ಎಂಬ ಜಾರಕಿಹೋಳಿ ಸಹೋದರರ ನಿರೀಕ್ಷೆ ಹುಸಿಯಾಗತೊಡಗಿತು, ಕಾರಣ ಲಕ್ಷ್ಮೀ ಹಂತ ಹಂತವಾಗಿ ಜಿಲ್ಲಾ ರಾಜಕಾರಣದಲ್ಲಿ ತಮ್ಮ ಪ್ರಭಾವ ಬೀರಲು ಪ್ರಾರಂಭಿಸಿದರು.

"

ಪಂಚಾಯ್ತಿ ಚುನಾವಣೆಗಳಿಂದ ಹಿಡಿದು ಪಿಎಲ್ ಡಿ ಬ್ಯಾಂಕ್ ಚುನಾವಣೆವರೆಗೂ ತಮ್ಮದೇ ಅಭ್ಯರ್ಥಿಗಳ ದಂಡನ್ನೇ ಲಕ್ಷ್ಮೀ ಸೃಷ್ಟಿಸುವಲ್ಲಿ ಸಫಲರಾದರು. ಅಲ್ಲಿಯವರೆಗೆ ತಳಮಟ್ಟದಿಂದ ಹಿಡಿದು ಜಿಲ್ಲಾ ಮಟ್ಟದವರೆಗೆ ಇಡೀ ರಾಜಕಾರಣವನ್ನು ತಮ್ಮ ಹತೋಟಿಯಲ್ಲಿಟ್ಟುಕೊಂಡಿದ್ದ ಜಾರಕಿಹೋಳಿ ಕುಟುಂಬಕ್ಕೆ ಲಕ್ಷ್ಮೀ ಕಂಟಕವಾಗತೊಡಗಿದರು. ಇದೇ ಕಾರಣಕ್ಕೆ ಚುನಾವಣೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಸೋಲಿಸಲು ಜಾರಕಿಹೋಳಿ ಸಹೋದರರು ಪ್ಲ್ಯಾನ್ ಮಾಡಿದ್ದಾರೆ ಎಂಬ ಮಾತುಗಳೂ ಕೇಳಿ ಬಂದಿದ್ದವು.

"

ಆಫ್ಟರ್ ಎಲೆಕ್ಷನ್:

ವಿಧಾನಸಭೆ ಚುನಾವಣೆಗಳು ಮುಗಿದ ಮೇಲೆ ಅತ್ತ ಗೋಕಾಕ್ ನಿಂದ ಸತೀಶ್ ಮತ್ತು ರಮೇಶ್ ಜಾರಕಿಹೋಳಿ ಆಯ್ಕೆಯಾದರೆ, ಇತ್ತ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಲಕ್ಷ್ಮೀ ಹೆಬ್ಬಾಳ್ಕರ್ ಆಯ್ಕೆಯಾದರು. ಆನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಕ್ಷ ಜೆಡಿಎಸ್ ಪಕ್ಷದ ಎದುರು ಮಂಡಿಯೂರಿ ಸಮ್ಮಿಶ್ರ ಸರ್ಕಾರ ರಚಿಸಿತು. ಆದರೆ ಈ ಬೆಳವಣಿಗೆ ಬೆಳಗಾವಿ ರಾಜಕಾರಣದಲ್ಲಿ ಕೆಲವು ಬದಲಾವಣೆಗಳಾಗಲು ಕಾರಣವಾಯಿತು. ಎಲ್ಲರ ನಿರೀಕ್ಷೆಯಂತೆ ಸತೀಶ್ ಜಾರಕಿಹೋಳಿ ಅವರಿಗೆ ಈ ಬಾರಿ ಮಂತ್ರಿ ಸ್ಥಾನ ಸಿಗಲಿಲ್ಲ. ಅದರು ಒಲಿದಿದ್ದು ಸಹೋದರ ರಮೇಶ್ ಜಾರಕಿಹೋಲಿ ಅವರಿಗೆ.

ಇದೇ ರೀತಿ ಮಹಿಳಾ ಕೋಟಾದಲ್ಲಿ ತಮಗೆ ಮಂತ್ರಿ ಸ್ಥಾನ ಗ್ಯಾರಂಟೀ ಎಂದುಕೊಂಡಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಆಸೆಗೂ ತಣ್ಣೀರೆರಚಲಾಯಿತು. ಲಕ್ಷ್ಮೀಗೆ ಸಚಿವ ಸ್ಥಾನ ಸಿಗದಿರುವಲ್ಲೂ ಜಾರಕಿಹೋಳಿ ಸಹೋದರರ ಕೈವಾಡ ಇದೆ ಎಂಬ ಅನುಮಾನ ಇಲ್ಲದಿಲ್ಲ. ಹೀಗೆ ಹಂತ ಹಂತವಾಗಿ ಪರಸ್ಪರ ವೈಷಮ್ಯವನ್ನೇ ಉಸಿರಾಗಿಸಿಕೊಂಡ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಜಾರಕಿಹೋಳಿ ಕುಟುಂಬ, ಜಿಲ್ಲಾ ರಾಜಕಾರಣದಲ್ಲಿ ವಿಜೃಂಭಿಸಲು ಸಾಧ್ಯವದ ಎಲ್ಲಾ ಕಸರತ್ತೂ ನಡೆಸಿವೆ.

"

ಪಿಎಲ್ ಡಿ ನೆಪ:

ಈ ಮಧ್ಯೆ ಬೆಳಗಾವಿ ಜಿಲ್ಲಾ ಪಿಎಲ್ ಡಿ ಬ್ಯಾಂಕ್ ಚುನಾವಣೆ ಇವರಿಬ್ಬರ ರಾಜಕೀಯ ಬಲಾಬಲ ಪ್ರದರ್ಶನಕ್ಕೆ ಮತ್ತೊಂದು ವೇದಿಕೆ ಕಲ್ಪಿಸಿತು. ಶಾಸಕಿಯಾದ ಮೇಲೆ ಜಿಲ್ಲಾ ರಾಜಕೀಯದಲ್ಲಿ ತಮ್ಮ ಪ್ರಭಾವ ಬೆಳೆಸಿಕೊಂಡಿರುವ ಲಕ್ಷ್ಮೀ, ಪಿಎಲ್ ಡಿ ಚುನಾವಣೆ ಮೂಲಕ ಜಾರಕಿಹೋಲಿ ಸಹೋದರರಿಗೆ ಗುದ್ದು ನೀಡಲು ಮುಂದಾದರು.

ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಗೆ ತಮ್ಮ ಬೆಂಬಲಿತ ಅಭ್ಯರ್ಥಿಗಳೇ ನಿಲ್ಲುವಂತೆ ನೋಡಿಕೊಂಡರು. ಇದರಿಂದ ಕೆರಳಿದ ಜಾರಕಿಹೋಳಿ ಸಹೋದರರು ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಕಟ್ಟಿ ಹಾಕಲು ನಿರ್ಧರಿಸಿ ಬಿಟ್ಟಿದ್ದಾರೆ. ಅದರಂತೆ ಪಿಎಲ್ ಡಿ ಬ್ಯಾಂಕ್ ಚುನಾವಣೆಯನ್ನು ಮುಂದೂಡಲು ಜಾರಕಿಹೋಳಿ ಸಹೋದರರು ಶತ ಪ್ರಯತ್ನ ಕೂಡ ನಡೆಸಿದರು. ಆದರೆ ಕೂಡಲೇ ತಮ್ಮೆಲ್ಲಾ ಬೆಂಬಲಿಗರೊಂದಿಗೆ ತಹಶೀಲ್ದಾರ ಕಚೇರಿ ಎದುರು ಧರಣಿ ನಡೆಸಿದ ಲಕ್ಷ್ಮೀ, ಈ ಕುರಿತು ಧಾರವಾಡ ಹೈಕೋರ್ಟ್ ಪೀಠದ ಮೆಟ್ಟಿಲೇರಿ ಕಾನೂನು ಹೋರಾಟದಲ್ಲೂ ಜಯ ಗಳಿಸಿದರು. ಅದರಂತೆ ಶೀಘ್ರದಲ್ಲೇ ಪಿಎಲ್ ಡಿ ಬ್ಯಾಂಕ್ ಚುನಾವಣೆ ನಡೆಯಲಿದೆ.

ಈ ಚುನಾವಣೆಯೊಂದೇ ಈ ನಾಯಕರ ನಡುವೆ ತೀವ್ರ ತಿಕ್ಕಾಟಕ್ಕೆ ಕಾರಣವಾಗಿದ್ದು, ಪರಸ್ಪರರ ವೈಯಕ್ತಿಕ ವಿಷಯಗಳನ್ನೂ ಎರಡೂ ಬಣದ ನಾಯಕರು ಕೆದಕುತ್ತಾ ಜಿಲ್ಲಾ ರಾಜಕಾರಣವನ್ನು ಮತ್ತಷ್ಟು ರಂಗೇರುವಂತೆ ಮಾಡಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಕಾಲ ಕಸಕ್ಕೆ ಸಮಾನ ಎಂದು ಹೇಳಿಕೆ ನೀಡುವಷ್ಟರ ಮಟ್ಟಿಗೆ ಹೋಗಿದೆ ಈ ಜಿದ್ದಾಜಿದ್ದಿ.

"

ಜಾತಿ ಲೆಕ್ಕಾಚಾರ:

ಇನ್ನು ರಾಜ್ಯ ಸರ್ಕಾರದ ಬುಡ ಅಲುಗಾಡಿಸುವಂತೆ ನಡೆದಿರುವ ಬೆಳಗಾವಿ ಕಾಂಗ್ರೆಸ್‌ ನಾಯಕರ ಮೇಲಾಟ ಕೇವಲ ತಾಲೂಕು ಮಟ್ಟದ ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್‌ನ ಚುನಾವಣೆಯಲ್ಲಿ ಅಧಿಕಾರ ಹಿಡಿಯುವ ಕಾರಣಕ್ಕಷ್ಟೇ ನಡೆದ ಸಂಘರ್ಷವಲ್ಲ. ಯಾವುದೇ ಸರ್ಕಾರವಿದ್ದರೂ ಬೆಳಗಾವಿ ಜಿಲ್ಲಾ ರಾಜಕಾರಣವನ್ನು ಹತೋಟಿಗೆ ತೆಗೆದುಕೊಳ್ಳುವ ನಾಯಕ ಸಮುದಾಯದ ಜಾರಕಿಹೊಳಿ ಸಹೋದರರ ಪ್ರಾಬಲ್ಯ ಮಣಿಸಲು ಪಕ್ಷಭೇದ ಮರೆತ ಬೆಳಗಾವಿ ಲಿಂಗಾಯತ ಹಾಗೂ ಮರಾಠ ಸಮುದಾಯಗಳ ನಾಯಕರು ಒಗ್ಗೂಡಿರುವುದರ ಸಂಕೇತ ಎಂದೂ ವ್ಯಾಖ್ಯಾನಿಸಲಾಗುತ್ತಿದೆ.

 

ಚದುರಂಗದಾಟದ ರಿಮೋಟ್ ಯೂರೋಪ್‌ನಲ್ಲಿದೆ?:

ಇನ್ನು ಜಾರಕಿಹೋಳಿ ಸಹೋದರರು ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಜಿದ್ದಾಜಿದ್ದಿ ಸ್ಕ್ರಿಪ್ಟ್ ಬರೆದಿದ್ದು ಮಾಜಿ ಸಿಎಂ ಸಿದ್ದರಾಮಯ್ಯ ಎಂದು ಹೇಳಲಾಗುತ್ತಿದೆ. ಸದ್ಯ ಕುಟುಂಬದ ಜೊತೆ ಯೂರೋಪ್ ಪ್ರವಾಸದಲ್ಲಿರುವ ಸಿದ್ದರಾಮಯ್ಯ, ತಾವು ಮರಳಿ ಬರುವವರೆಗೂ ಸಮ್ಮಿಶ್ರ ಸರ್ಕಾರ ನೆಮ್ಮದಿಯಾಗಿ ಇರದಿರಲಿ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಈ ರಾಜಕೀಯ ದಾಳ ಉರುಳಿಸಿದ್ದಾರೆ ಎಂಬ ಮಾತುಗಳಿಗೇನೂ ಬರವಿಲ್ಲ.

"

ಕುಂದಾ ತಿನ್ನೋದ್ಯಾರು, ಕರದಂಟು ಯಾರ ಪಾಲಿಗೆ?:

ಸದ್ಯ ಬೆಳಗಾವಿ ಪಿಎಲ್ ಡಿ ಚುನಾವಣೆ ಇಡೀ ರಾಜ್ಯದ ಗಮನ ಸೆಳೆದಿದ್ದು, ಬೆಳಗಾವಿ ಎಂಬ 'ಸಂಪದ್ಬರಿತ' ಜಿಲ್ಲೆಯನ್ನು ಯಾರು ತಮ್ಮ ಹತೋಟಿಗೆ ತೆಗೆದುಕೊಳ್ಳಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿದೆ. ಪಿಎಲ್ ಡಿ ಚುನಾವಣೆ ಬಳಿಕ ಕೇವಲ ಬೆಳಗಾವಿ ಮಾತ್ರವಲ್ಲ ರಾಜ್ಯ ರಾಜಕಾರಣದಲ್ಲೂ ಬದಲಾವಣೆಗಳಾಗಲಿವೆಯಾ ಎಂದು ಎಲ್ಲರೂ ಕೇಳುತ್ತಿರುವ ಪ್ರಶ್ನೆ.

ಈ ಜಾರಕಿಹೋಳಿ ಸಹೋದರರು ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಫೈಟ್ ರಾಜ್ಯ ರಾಜಕಾರಣದ ದಿಕ್ಕನ್ನು ಬದಲಿಸುತ್ತಾ?. ಬೆಳಗಾವಿ ಜಿಲ್ಲೆಯ ರಾಜಕೀಯ ಚಹರೆಯನ್ನೇ ಬದಲಿಸಿ ಬಿಡ್ತಾರಾ ಈ ನಾಯಕರು? ಅಥವಾ ಕೇವಲ ಪಿಎಲ್ ಡಿ ಬ್ಯಾಂಕ್ ಚುನಾವಣೆಗಷ್ಟೇ ಈ ಜಿದ್ದಾಜಿದ್ದಿ ಸೀಮಿತವಾಗಲಿದೆಯಾ?. ಇಂತಹ ನೂರಾರು ಪ್ರಶ್ನೆಗಳಿಗೆ ಶೀಘ್ರದಲ್ಲೇ ನಡೆಯುವ ಪಿಎಲ್ ಡಿ ಬ್ಯಾಂಕ್ ಚುನಾವಣೆಯೇ ಉತ್ತರ ನೀಡಬೇಕಿದೆ. ಅದುವರೆಗೂ ರಾಜ್ಯದ ಜನ ಬೆಳಗಾವಿಯತ್ತ ದೃಷ್ಟಿ ನೆಟ್ಟು, ಕುಂದಾ, ಕರದಂಟು ಆಸೆ ಬಿಟ್ಡು ಈ ನಾಯಕರ ರೋಮಾಂಚನಕಾರಿ ಕದನವನ್ನು ಎಂಜಾಯ್ ಮಾಡಬೇಕಿದೆ.

"

ವಿಶೇಷ ಸೂಚನೆ:

ಈ ಕುರಿತು ಇಂದು ಸಂಜೆ 7 ಗಂಟೆಗೆ ನಿಮ್ಮ ಸುವರ್ಣನ್ಯೂಸ್ ನಲ್ಲಿ ಎಕ್ಸಕ್ಲೂಸಿವ್ ವರದಿ ಪ್ರಸಾರವಾಗಲಿದೆ.

Last Updated 9, Sep 2018, 10:25 PM IST