
ಬೆಂಗಳೂರು (ಫೆ.08): ಯುವತಿಯರು ಹಾಗೂ ಮಹಿಳೆಯರ ಮೊಬೈಲ್ ಸಂಖ್ಯೆಗಳನ್ನು ಉತ್ತರಪ್ರದೇಶದ ಮೊಬೈಲ್ ರೀಚಾರ್ಜ್ ಅಂಗಡಿಗಳ ಮಾಲೀಕರು ಹಣದಾಸೆಗೆ ಅಕ್ರಮವಾಗಿ ಮಾರಾಟ ಮಾಡಿಕೊಳ್ಳುತ್ತಿರುವ ವಿಷಯ ಇದೀಗ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ರೀಚಾರ್ಜ್ ಮಾಡಿಸಿಕೊಳ್ಳಲೆಂದು ಬರುವ ಯುವತಿಯರು, ಮಹಿಳೆಯರ ಸಂಖ್ಯೆಗಳನ್ನು ಬರೆದಿಟ್ಟುಕೊಂಡು ಕಾಮುಕ ವ್ಯಕ್ತಿಗಳಿಗೆ ಮಾರುವ ಈ ದಂಧೆ, ಜನಸಂಖ್ಯೆಯಲ್ಲಿ ದೇಶದಲ್ಲೇ ಅತಿದೊಡ್ಡ ರಾಜ್ಯವಾಗಿರುವ ಉತ್ತರ ಪ್ರದೇಶವೊಂದಕ್ಕೇ ಸೀಮಿತವಾಗಿಲ್ಲ. ಕರುನಾಡಿನಲ್ಲೂ ಅವ್ಯಾಹತವಾಗಿ ನಡೆಯುತ್ತಿದೆ ಎಂಬ ಕಳವಳಕಾರಿ ಮಾಹಿತಿ ಬೆಳಕಿಗೆ ಬಂದಿದೆ.
ರಾಜ್ಯದ ಹಲವು ಮೊಬೈಲ್ ರೀಚಾರ್ಜ್ ಮಳಿಗೆಗಳ ಸಿಬ್ಬಂದಿ ಕೂಡ ಯುವತಿಯರು, ಅದರಲ್ಲೂ ಸುಂದರವಾಗಿರುವ ಹುಡುಗಿಯರ ಮೊಬೈಲ್ ಸಂಖ್ಯೆಯನ್ನು ಅವರಿಗೆ ಗೊತ್ತಾಗದಂತೆ ಕಾಮಣ್ಣರಿಗೆ ಮಾರಾಟ ಮಾಡಿ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಆದರೆ ಈ ಬಗ್ಗೆ ಹೆಚ್ಚಿನ ಸುದ್ದಿಯಾಗಿಲ್ಲ. ಇಂತಹದ್ದೊಂದು ದಂಧೆಯನ್ನು ಖಾಸಗಿ ಹಾಗೂ ಸರ್ಕಾರಿ ಸೈಬರ್ ಸಂಸ್ಥೆಗಳು ತಮ್ಮ ವರದಿಗಳಲ್ಲಿ ಹೇಳಿದ್ದರೂ, ಗಮನಹರಿದಿಲ್ಲ.
ಭಾರತದ ‘ಸಿಲಿಕಾನ್ ವ್ಯಾಲಿ’ ಎಂದೇ ಜಾಗತಿಕವಾಗಿ ಗುರುತಿಸಿಕೊಂಡಿರುವ ಕರ್ನಾಟಕದ ರಾಜಧಾನಿ ಬೆಂಗಳೂರಿನ ಉತ್ತರ ಹಾಗೂ ಪಶ್ಚಿಮ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊಬೈಲ್ ಮಾರಾಟ ಅಂಗಡಿಗಳು ಹಾಗೂ ಕರೆನ್ಸಿ ರೀಚಾರ್ಜ್ ಮಳಿಗೆಗಳು ನಂಬಿಕೆಗೆ ಅರ್ಹವಲ್ಲ ಎಂದು ಖಾಸಗಿ ಸೈಬರ್ ಸಂಸ್ಥೆಯೊಂದು ತನ್ನ ಅಧ್ಯಯನ ವರದಿಯಲ್ಲೇ ಹೇಳಿದೆ. ಯುವತಿಯರ ಮೊಬೈಲ್ ಸಂಖ್ಯೆಯನ್ನು ರೀಚಾರ್ಜ್ ಅಂಗಡಿ ಸಿಬ್ಬಂದಿ ಹೇಗೆ ಸಂಗ್ರಹಿಸುತ್ತಾರೆ? ಅದರಲ್ಲೂ ಸುಂದರ ಯುವತಿಯರ ಮೊಬೈಲ್ ಸಂಖ್ಯೆಗೆ ಯಾವ ರೀತಿ ‘ಕೋಡ್’ ನೀಡಿ ಪ್ರಾಮುಖ್ಯತೆ ನೀಡುತ್ತಾರೆ? ಹೀಗೆ ಸಂಗ್ರಹಿಸಲಾದ ಮೊಬೈಲ್ ಸಂಖ್ಯೆಯನ್ನು ಎಷ್ಟು ಮೊತ್ತಕ್ಕೆ ಬಿಕರಿ ಮಾಡಿಕೊಳ್ಳುತ್ತಾರೆ ಎಂಬೆಲ್ಲಾ ವಿಚಾರಗಳು ಈ ವರದಿಯಲ್ಲಿ ಬಹಿರಂಗವಾಗಿವೆ.
ನೀಲಿ, ಕೆಂಪು ಇಂಕಿನ ಪೆನ್ ರಹಸ್ಯ
ಮಹಿಳೆ ಅಥವಾ ಯುವತಿಯರು ಕರೆನ್ಸಿ ರೀಚಾರ್ಜ್ ಸೆಂಟರ್‌ಗಳಿಗೆ ಹೋದಾಗ ಅಲ್ಲಿನ ನೋಟ್‌ಬುಕ್‌ನಲ್ಲಿ ಮೊಬೈಲ್ ನಂಬರ್ ಬರೆಯಬೇಕು. ಇದನ್ನೇ ಬಹುದೊಡ್ಡ ಲಾಭ ಮಾಡಿಕೊಳ್ಳುವ ಕೆಲವು ರೀಚಾರ್ಜ್ ಅಂಗಡಿಯ ಮಾಲೀಕ ಹಾಗೂ ಸಿಬ್ಬಂದಿ, ಯುವತಿಯರ ನಂಬರ್‌ಗೆ ನೀಲಿ ಇಂಕ್‌ನ ಪೆನ್‌ನಲ್ಲಿ ಹಾಗೂ ಮಹಿಳೆಯರ ನಂಬರ್‌ಗೆ ಕೆಂಪು ಇಂಕಿನ ಪೆನ್‌ಗಳಲ್ಲಿ ತಮ್ಮದೇ ಆದ ಸಂಜ್ಞೆಯ ಮೂಲಕ ಗುರುತು ಮಾಡಿಕೊಳ್ಳುತ್ತಾರೆ. ಇನ್ನೂ ಕೆಲವು ಫಟಿಂಗರು ಯುವತಿಯರ ಸಂಖ್ಯೆ ಮುಂದೆ ‘ಜಿ’ (ಗರ್ಲ್), ಮಹಿಳೆಯರ ಸಂಖ್ಯೆ ಎದುರು ‘ಎಲ್’ (ಲೇಡಿ) ಹಾಗೂ ಸುಂದರ ಯುವತಿಯರು- ಮಹಿಳೆಯರ ಸಂಖ್ಯೆ ಮುಂದೆ ‘ಬಿ’ (ಬ್ಯೂಟಿಫುಲ್) ಸಂಬ ಸಂಕೇತಾಕ್ಷರಗಳನ್ನು ನಮೂದಿಸುವ ದಾರಿಯನ್ನು ಹುಡುಕಿಕೊಂಡಿದ್ದಾರೆ. ಈ ರೀತಿ ಸಂಗ್ರಹಿಸಿದ ಸಂಖ್ಯೆಯನ್ನು ಸೌಂದರ‌್ಯಕ್ಕೆ ಅನುಗುಣವಾಗಿ ತಾವೇ ದರ ನಿಗದಿಪಡಿಸಿ ಮಾರಾಟ ಮಾಡಿಕೊಳ್ಳುತ್ತಾರೆ. 50,100,200, 300,400,500 ರೂಗಳಿಗೆಲ್ಲಾ ಸಂಖ್ಯೆಗಳು ಬಿಕರಿಯಾಗುತ್ತವೆ.
ನಂಬರ್ ಸಿಗುತ್ತಿದ್ದಂತೆ ಕರೆಗಳ ಹಾವಳಿ
ಹಣ ಕೊಟ್ಟು ಸುಂದರಿಯರ ಮೊಬೈಲ್ ಸಂಖ್ಯೆ ಖರೀದಿಸಿದ ವ್ಯಕ್ತಿ ಕೂಡಲೇ ಕಾರ್ಯಾಚರಣೆಗೆ ಇಳಿಯುತ್ತಾನೆ. ಯುವತಿಯರು/ಮಹಿಳೆಯರಿಗೆ ಕರೆ ಮಾಡಿ, ‘ನಿಮ್ಮ ಫ್ರೆಂಡ್‌ಶಿಪ್ ಮಾಡುವ ಆಸೆ ಇದೆ’ ಎಂದು ಅಂಗಲಾಚುತ್ತಾನೆ. ಇದಕ್ಕೆ ನಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾದರೂ ಬಿಡುವುದಿಲ್ಲ. ಪದೇ ಪದೇ ಕರೆ ಮಾಡುತ್ತಾನೆ. ಸ್ವೀಕರಿಸದೇ ಇದ್ದಾಗ ಸಂದೇಶ, ವಿಡಿಯೋ ಕಳುಹಿಸುತ್ತಾನೆ. ಇನ್ನೂ ಕೆಲವರು ಕರೆ ಮಾಡಿ ಮಾಡಿ ನೇರವಾಗಿ ಅಶ್ಲೀಲ ಸಂಭಾಷಣೆಗೆ ಇಳಿಯುತ್ತಾರೆ ಅಥವಾ ಪೋಲಿ ಚಿತ್ರ/ವಿಡಿಯೋಗಳನ್ನು ರವಾನಿಸುತ್ತಾರೆ. ಕೆಲವು ಮಹಿಳೆಯರು ಇದರ ವಿರುದ್ಧ ದನಿ ಎತ್ತುತ್ತಾರೆ, ಮತ್ತೆ ಕೆಲವರು ‘ಬ್ಲಾಕ್ ಲಿಸ್ಟ್’ಗೆ ಸೇರಿಸಿ ಸುಮ್ಮನಾಗುತ್ತಾರೆ. ಆಗಲೂ ಬಗೆಹರಿಯದಿದ್ದ ಪಕ್ಷದಲ್ಲಿ ಬೇರೆ ದಾರಿ ಹುಡುಕುತ್ತಾರೆ.
ಸಹಾಯವಾಣಿಗೆ ಮಹಿಳೆಯರ ದುಂಬಾಲು
ಮೊಬೈಲ್ ಸಂಖ್ಯೆಯನ್ನು ಖರೀದಿಸಿ, ಕರೆ ಮಾಡಿ ಹಿಂಸಿಸುವವರ ಸಮಸ್ಯೆ ಯಾವ ಮಟ್ಟ ತಲುಪಿದೆ ಎಂಬುದು ವನಿತಾ ಸಹಾಯವಾಣಿಯ ಅಂಕಿ-ಅಂಶ ನೋಡಿದರೆ ಗೊತ್ತಾಗುತ್ತದೆ. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಲಕ್ಷಾಂತರ ದೂರುಗಳು ವನಿತಾ ಸಹಾಯವಾಣಿಗೆ ಬಂದಿವೆ. ಅದರಲ್ಲಿ ಶೇ.90 ರಷ್ಟು ದೂರುಗಳು ಮಹಿಳೆಯರ ಮೊಬೈಲ್‌ಗೆ ಪುರುಷರು ಕರೆ ಮಾಡಿ ಕಿರುಕುಳ ನೀಡಿದ ಪ್ರಕರಣಗಳೇ ಆಗಿವೆ. ಹೊರ ರಾಜ್ಯಗಳಿಂದಲೂ ಯುವಕರು ರಾಜ್ಯ ಹಾಗೂ ಬೆಂಗಳೂರಿನ ಯುವತಿಯರಿಗೆ ಕರೆ ಮಾಡಿ ತೊಂದರೆ ನೀಡುತ್ತಿರುವುದು ವನಿತಾ ಸಹಾಯವಾಣಿಯ ಅಧಿಕಾರಿಗಳಿಂದ ತಿಳಿದು ಬಂದಿದೆ. ಆದರೆ, ವನಿತಾ ಸಹಾಯವಾಣಿಯ ಸಿಬ್ಬಂದಿ ಮಾತ್ರ ಮಹಿಳೆಯರಿಂದ ದೂರು ಬರುತ್ತಿದ್ದಂತೆ ಸಂಬಂಧಿಸಿದ ವ್ಯಕ್ತಿಗೆ ಕರೆ ಮಾಡಿ ಎಚ್ಚರಿಕೆ ನೀಡುತ್ತಿದ್ದಾರೆ. ಆ ವೇಳೆ, ‘ಆಕೆ ನನ್ನ ಗರ್ಲ್‌ಫ್ರೆಂಡ್/ಲವರ್, ಮುನಿಸಿಕೊಂಡಿದ್ದಾಳೆ. ಅದಕ್ಕೆ ಕರೆ ಮಾಡಿದ್ದೆ’ ಎಂದು ಹೇಳುವವರೂ ಇದ್ದಾರೆ. ನಿತ್ಯ ೨೫೦ಕ್ಕೂ ಅಧಿಕ ಪ್ರಕರಣಗಳನ್ನು ಸಿಬ್ಬಂದಿಯೇ ಇತ್ಯರ್ಥಪಡಿಸುತ್ತಿದ್ದಾರೆ. ಆದರೂ ಕೆಲ ದುಷ್ಕರ್ಮಿಗಳು ಇದಕ್ಕೆ ಹೆದರದೆ ತಮ್ಮ ದುಷ್ಕೃತ್ಯವನ್ನು ಮುಂದುವರಿಸುತ್ತಾರೆ.
ಮಾರಾಟ ಆಗೋದು ಎಲ್ಲಿ?
ಸುಲಭವಾಗಿ ಹಣ ಮಾಡುವ ದುರುದ್ದೇಶ ಹೊಂದಿರುವ ಕೆಲ ಮೊಬೈಲ್ ರೀಚಾರ್ಜ್ ಸೆಂಟರ್‌ಗಳು, ಹೆಚ್ಚು ಜನಜಂಗುಳಿ ಸ್ಥಳಗಳಲ್ಲಿರುವ (ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಇತರೆ) ಅಂಗಡಿಗಳು, ಶಾಪಿಂಗ್ ಮಾಲ್‌ಗಳು, ಇಂಟರ್ನೆಟ್ ಬ್ರೌಸಿಂಗ್ ಸೆಂಟರ್‌ಗಳು, ಕೊರಿಯರ್ ಸಂಸ್ಥೆಗಳು, ಸೈಬರ್ ಸೆಂಟರ್‌ಗಳು ಈ ದಂಧೆಗೆ ತೊಡಗಿವೆ. ಅದರಲ್ಲೂ ಕರೆನ್ಸಿ ರೀಚಾರ್ಜ್ ಸೆಂಟರ್‌ಗಳು ಈ ವ್ಯವಹಾರವನ್ನು ಅವ್ಯಾಹತವಾಗಿ ನಡೆಸುತ್ತಿದ್ದು, ಇಲ್ಲಿಗೆ ಬರುವ ಮಹಿಳೆಯರು ಹಾಗೂ ಯುವತಿಯರ ನಂಬರ್‌ಗಳನ್ನು ಅಪರಿಚಿತ ವ್ಯಕ್ತಿಗಳಿಗೆ ಮಾರಾಟ ಮಾಡುತ್ತಿವೆ ಎಂದು ಮಹಿಳಾ ಸೈಬರ್ ಸೆಕ್ಯೂರಿಟಿ ಸೆಲ್ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಿದೆ.
ಇನ್ನು ಇಂಟರ್ನೆಟ್ ಬಳಕೆ ಸಂದರ್ಭದಲ್ಲಿ ಗಿಫ್ಟ್ ಹಾಗೂ ರಿಯಾಯಿತಿ ದರದಲ್ಲಿ ಬಟ್ಟೆ, ಇತರೆ ವಸ್ತುಗಳ ಮಾರಾಟದ ಕುರಿತ ಕೆಲ ಜಾಹೀರಾತುಗಳು ಏಕಾಏಕಿ ಸ್ಕ್ರೀನ್ ಮೇಲೆ ಬರುತ್ತವೆ. ಇದನ್ನು ಕ್ಲಿಕ್ ಮಾಡಿದ ನಂತರ ಮೊಬೈಲ್ ಸಂಖ್ಯೆ ಹಾಗೂ ಸಂಪೂರ್ಣ ವಿಳಾಸವನ್ನು ಪಡೆಯಲಾಗುತ್ತದೆ. ಶಾಪಿಂಗ್ ಮಾಲ್‌ಗಳು ಹಾಗೂ ಸರ್ವೀಸ್ ಸೆಂಟರ್‌ಗಳಲ್ಲಿ ಬರೆದಿಟ್ಟು ಬರುವ ನಂಬರ್‌ಗಳಿಗೆ ಕೆಲ ಕಿಡಿಗೇಡಿಗಳು ಆಗಾಗ್ಗೆ ಕರೆ ಮಾಡಿ ತೊಂದರೆ ಕೊಡುವುದು ಹಾಗೂ ಅಶ್ಲೀಲ ಸಂದೇಶ ಕಳುಹಿಸಿ ಲೈಂಗಿಕ ಕ್ರಿಯೆಗೆ ಆಹ್ವಾನಿಸುವುದು ಮಾಡುತ್ತಾರೆ.
ಎಲ್ಲೆಲ್ಲಿ ಸಿಗುತ್ತೆ?
-ಕರೆನ್ಸಿ ರೀಚಾರ್ಜ್ ಸೆಂಟರ್, ಮೊಬೈಲ್ ಮಾರಾಟ ಸಂಸ್ಥೆಗಳು
-ಆನ್‌ಲೈನ್ ಶಾಪಿಂಗ್ ಸೆಂಟರ್‌ಗಳು
-ಮಾರುಕಟ್ಟೆಯಲ್ಲಿರುವ ಸಣ್ಣ ಪುಟ್ಟ ರೀಚಾರ್ಜ್ ಅಂಗಡಿಗಳು
-ಹೆಚ್ಚು ಜನಜಂಗುಳಿ ಇರುವ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಇತರೆ
-ಆನ್‌ಲೈನ್ ಜಾಹಿರಾತುಗಳು
ಸರ್ಕಾರ ಏನು ಮಾಡಬೇಕು?
-ನಿರ್ವಹಣಾ ಕೇಂದ್ರಗಳನ್ನು ತೆರೆಯಬೇಕು(ನಕಲಿ ಅಥವಾ ಅಸಲಿ ವೆಬ್‌ಸೈಟ್‌ಗಳ ನಿರ್ವಹಣೆ)
-ಗ್ರಾಮೀಣ, ನಗರ ಪ್ರದೇಶದ ಹೆಣ್ಣು ಮಕ್ಕಳಿಗೆ ಆನ್‌ಲೈನ್ ರೀಚಾರ್ಜ್ ಬಗ್ಗೆ ಅರಿವು ಮೂಡಿಸಬೇಕು
-ಮೊಬೈಲ್ ಆ್ಯಪ್‌ಗಳ ಮೂಲಕ ರೀಚಾರ್ಜ್ ಮಾಡುವ ಬಗ್ಗೆ ಮಾಹಿತಿ ನೀಡಬೇಕು
-ಸೈಬರ್ ಕ್ರೈಂ ವಿರುದ್ಧ ಕಟ್ಟುನಿಟ್ಟಿನ ಕಾನೂನು ಜಾರಿಗೆ ತರಬೇಕು
ಮಹಿಳೆಯರು ಏನು ಮಾಡಬೇಕು?
-ಮಹಿಳಾ ದೌರ್ಜನ್ಯಗಳ ಬಗ್ಗೆ ಧ್ವನಿ ಎತ್ತಬೇಕು
-ತಮ್ಮ ಸುರಕ್ಷತೆ ಕುರಿತ ಅರಿವು ಕಾರ್ಯಕ್ರಮಗಳಿಗೆ ಹೋಗಬೇಕು
-ಮೊಬೈಲ್ ನಂಬರ್ ಕೊಡುವ ಮೊದಲು ಸಾಕಷ್ಟು ಬಾರಿ ಯೋಚಿಸಬೇಕು
-ಪ್ರಮುಖವಾಗಿ ಫೇಸ್‌ಬುಕ್‌ನಲ್ಲಿ ನಂಬರ್‌ಗಳನ್ನು ಪ್ರಕಟಿಸಬಾರದು.
-ದೌರ್ಜನ್ಯ ಆದ ಸಂದರ್ಭದಲ್ಲಿ ಕೂಡಲೇ ಠಾಣೆ ಅಥವಾ ಮಹಿಳಾ ಸೈಬರ್ ಕ್ರೈಂಗೆ ದೂರು ನೀಡಬೇಕು.
- ಮಹಿಳೆಯರೇ ರಿಚಾರ್ಜ್‌ಗೆ ತೆರಳುವ ಬದಲು ಮೊದಲಿನಂತೆ ಬೇರೆಯವರಿಂದ ಕರೆನ್ಸಿ ಕಾರ್ಡ್ ತರಿಸಿಕೊಂಡು ಅಥವಾ ಮನೆಯ ಪುರುಷರನ್ನು ಕಳುಹಿಸಿ ರಿಚಾರ್ಜ್ ಮಾಡಿಸಬೇಕು.
- ಮೊಬೈಲ್ ಆ್ಯಪ್‌ಗಳ ಮೂಲಕ ರೀಚಾರ್ಜ್ ಮಾಡಿಕೊಳ್ಳಬಹುದು.
ಮೊಬೈಲ್ ಸಂಖ್ಯೆ ಮಾರಿದರೆ 7 ವರ್ಷ ಜೈಲು ಶಿಕ್ಷೆ
ಮಹಿಳೆಯರ ಮೊಬೈಲ್ ಸಂಖ್ಯೆಗಳನ್ನು ರೀಚಾರ್ಜ್ ಅಂಗಡಿಗಳು ಮಾರಾಟ ಮಾಡಿಕೊಳ್ಳುತ್ತಿರುವುದು ನಂಬಿಕೆ ದ್ರೋಹ ಎನ್ನುತ್ತಾರೆ ಕಾನೂನು ತಜ್ಞರು. ರೀಚಾರ್ಜ್ ಅಂಗಡಿಯವನ ಮೇಲೆ ನಂಬಿಕೆ ಇಟ್ಟು ಮಹಿಳೆ ತನ್ನ ಸಂಖ್ಯೆಯನ್ನು ಆತನಲ್ಲಿ ಹಂಚಿಕೊಳ್ಳುತ್ತಾಳೆ. ಆಕೆ ನೀಡಿದ ಮಾಹಿತಿಯನ್ನು ಅಂಗಡಿಯಾತ ಮಾರಾಟ ಮಾಡಿದರೆ, ಆರ್ಥಿಕ ಲಾಭಕ್ಕಾಗಿ ಸಂಖ್ಯೆ ಮಾರಿದ ಅಪವಾದ ಆತನ ಮೇಲೆ ಬರುತ್ತದೆ. ಅದೊಂದು ಕ್ರಿಮಿನಲ್ ಅಪರಾಧ. ಏಳು ವರ್ಷದವರೆಗೂ ಜೈಲು ಶಿಕ್ಷೆ ವಿಧಿಸಬಹುದಾಗಿದೆ ಎಂದು ದೆಹಲಿ ಮೂಲದ ಕ್ರಿಮಿನಲ್ ವಕೀಲ ಅವನೀಂದರ್ ಸಿಂಗ್ ತಿಳಿಸುತ್ತಾರೆ.
ಅಂಗಡಿಗಳಲ್ಲಿ ಮೊಬೈಲ್ ರೀಚಾರ್ಜ್ ಮಾಡಿಸುವ ಸಂದರ್ಭದಲ್ಲಿ ಹೆಣ್ಣು ಮಕ್ಕಳು ಎಚ್ಚರಿಕೆಯಿಂದಿರಬೇಕು. ರೀಚಾರ್ಜ್ ಸೆಂಟರ್‌ಗಳ ಬದಲು ಆನ್‌ಲೈನ್‌ನಲ್ಲಿ ಕರೆನ್ಸಿ ಹಾಕಿಸಿಕೊಳ್ಳಬೇಕು. ಜತೆಗೆ ಸರ್ಕಾರ ಕೂಡ ಸೈಬರ್ ಕ್ರೈಂಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಮಾನಿಟರಿಂಗ್ ಸೆಂಟರ್‌ಗಳನ್ನು ತರೆದು ನಕಲಿ ವೆಬ್‌ಸೈಟ್‌ಗಳ ಕುರಿತು ನಿಗಾವಹಿಸಬೇಕು.
- ಶುಭಮಂಗಳ ಸುನೀಲ್, ಖಾಸಗಿ ಮಹಿಳಾ ಸೈಬರ್ ಸೆಕ್ಯೂರಿಟಿ ಸೆಲ್ ಸದಸ್ಯೆ
ಮಹಿಳೆಯರು ತಮ್ಮ ನಂಬರ್‌ಗಳಿಗೆ ಅಪರಿಚಿತ ವ್ಯಕ್ತಿಗಳಿಂದ ಕರೆ ಅಥವಾ ಸಂದೇಶ ಬರುತ್ತಿದ್ದರೆ ಕೂಡಲೇ ಹತ್ತಿರದ ಠಾಣೆಗೆ ದೂರು ನೀಡಬೇಕು. ಜತೆಗೆ ಮಹಿಳಾ ಸಾಂತ್ವನ ಕೇಂದ್ರಗಳ ಮೊರೆ ಹೋಗಬುಹುದು. ಇಂತಹ ದೂರುಗಳನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬಹುದು.
-ನಾಗರಾಜ್, ಸಿಐಡಿ ಡಿಐಜಿ
ವರದಿ: ಮೋಹನ್ ಭದ್ರಾ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.