
ಬೆಂಗಳೂರು : ಮೈತ್ರಿಕೂಟ ಸರ್ಕಾರದ ಪ್ರಥಮ ಬಜೆಟ್‌ಗೆ ಸಿದ್ದರಾಮಯ್ಯ ಅಪಸ್ವರವೆತ್ತಿರುವ ಬಗ್ಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಹೊಸ ಸರ್ಕಾರದ ಗುರಿಗಳ ಬಗ್ಗೆ ಜನರಿಗೆ ಮಾಹಿತಿ ನೀಡಲು ಬಜೆಟ್ ಮಂಡಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಶನಿವಾರ ದೆಹಲಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಪೂರಕ ಬಜೆಟ್ ಮಂಡಿಸಿದರಷ್ಟೇ ಸಾಕು ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, ಪೂರಕ ಬಜೆಟ್‌ನಿಂದ ಸರ್ಕಾರದ ಧೋರಣೆಯನ್ನು ಜನರಿಗೆ ತಿಳಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ಹೊಸ ಸರ್ಕಾರ ರಚನೆಯಾದ ಬಳಿಕ ಅದರ ಗುರಿಗಳೇನು? ಜನರಿಗೆ ನೀಡುವ ಕೊಡುಗೆಗಳೇನು ಎಂಬುದರ ಕುರಿತು ಮಾಹಿತಿ ನೀಡಬೇಕಾಗುತ್ತದೆ. ಚುನಾವಣಾ ಪೂರ್ವ ಪ್ರಚಾರದ ವೇಳೆ ರಾಜ್ಯದ ಜನತೆಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಹಲವು ಭರವಸೆಗಳನ್ನು ನೀಡಿವೆ. ಅವುಗಳನ್ನು ಈಡೇರಿಸಲು ಸರ್ಕಾರ ಏನು ಮಾಡಲಿದೆ ಎಂಬುದನ್ನು ಹೇಳಲು ಪೂರಕ ಬಜೆಟ್‌ನಿಂದ ಸಾಧ್ಯವಾಗುವುದಿಲ್ಲ. ಪೂರಕ ಬಜೆಟ್‌ಗೆ ಸೀಮಿತವಾದರೆ ಕೆಲವೊಂದು ಸಮಸ್ಯೆಗಳು ಎದುರಾಗಲಿವೆ ಎಂದು ಹೇಳಿದರು.
ಬಜೆಟ್ ಮಂಡನೆ ಕುರಿತು ಸಚಿವ ಸಂಪುಟ ಸಭೆ ಕರೆದು ಚರ್ಚೆ ನಡೆಸಲಾಗುವುದು. ಒಂದು ವೇಳೆ ಪೂರಕ ಬಜೆಟ್ ಮಂಡಿಸಿದರೆ ಈಗಾಗಲೇ ನೀಡಿರುವ ಆಶ್ವಾಸನೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಿಲ್ಲ. ಹೀಗಾಗಿ ಹೊಸದಾಗಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಬೇಕಾಗುತ್ತದೆ ಎಂದರು.
ಕಾಂಗ್ರೆಸ್ ಆಡಳಿತಾವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರೇ ಚುನಾವಣೆ ಬಳಿಕ ಮತ್ತೊಂದು ಬಜೆಟ್ ಮಂಡನೆ ಕುರಿತು ಹೇಳಿಕೆ ನೀಡಿದ್ದರು. ಈಗ ಬಜೆಟ್ ಮಂಡನೆ ಮಾಡಿದರೂ ಚುನಾವಣೆ ಬಳಿಕ ಮತ್ತೊಂದು ಬಜೆಟ್ ಮಂಡಿಸಬೇಕಾಗುತ್ತದೆ ಎಂದು ಹೇಳಿರುವ ಬಗ್ಗೆ ನನ್ನ ಬಳಿ ಮಾಹಿತಿ ಇದೆ ಎಂದು ಸೂಚ್ಯವಾಗಿ ತಿರುಗೇಟು ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.