ಎಚ್ಚರ! ರಾಜ್ಯದಲ್ಲಿ ಬೀಸಲಿದೆ ಬಿಸಿ ಗಾಳಿ : ಯಾವ ಜಿಲ್ಲೆಗಳಿಗೆ ತಟ್ಟಲಿದೆ ಎಫೆಕ್ಟ್

By Web DeskFirst Published Apr 28, 2019, 8:19 AM IST
Highlights

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲ ಧಗೆ ಏರಿಕೆಯಾಗುತ್ತಲೇ ಸಾಗಿದ್ದು, ಇದೀಗ ರಾಜ್ಯಕ್ಕೆ ಹವಾಮಾಣ ಇಲಾಖೆ ಆತಂಕಕಾರಿ ಎಚ್ಚರಿಕೆಯೊಂದನ್ನು ನೀಡಿದೆ. 

ಬೆಂಗಳೂರು :  ಉತ್ತರ ಭಾರತ ಸೇರಿ ರಾಯಲಸೀಮಾ ಪ್ರದೇಶದಲ್ಲಿ ಬಿಸಿಲಿನ ತಾಪ ವಾಡಿಕೆಗಿಂತ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಉತ್ತರ ಒಳನಾಡಿನಲ್ಲಿ ಮುಂದಿನ 3 ದಿನ ಬಿಸಿಗಾಳಿ ಬೀಸಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್ ಎನ್‌ಡಿಎಂಸಿ) ತಿಳಿಸಿದೆ. ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ ಸರಾಸರಿ43 ರಿಂದ 44 ಡಿಗ್ರಿ ಸೆಲ್ಸಿಯಸ್  ತಲುಪಿದೆ. 

ಹಾಗಾಗಿ, ಈ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಏ.30 ವರೆಗೆ ಬಿಸಿಗಾಳಿ ಬೀಸಲಿದೆ ಎಂದು ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ ಸುನೀಲ್ ಗವಾಸ್ಕರ್  ಮಾಹಿತಿ ನೀಡಿದ್ದಾರೆ.  ಈಗಾಗಲೇ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದಂತೆ ವರ್ಷದಿಂದ ವರ್ಷಕ್ಕೆ ಬಿಸಿಲಿನ ತಾಪ ಹೆಚ್ಚಾಗಲಿದೆ. ಅದರಂತೆ ಗರಿಷ್ಠ ಉಷ್ಣಾಂಶದ ಪ್ರಮಾಣ ವಾಡಿಕೆಗಿಂತ 2 ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಹಾಗಾಗಿ ಮಧ್ಯಪ್ರದೇಶ, ಮಹಾರಾಷ್ಟ್ರ, ತೆಲಗಾಣ, ಆಂಧ್ರ ಸೇರಿದಂತೆ ಉತ್ತರ ಭಾರತ ಹಾಗೂ ರಾಯಲಸೀಮಾ ಪ್ರದೇಶದ ರಾಜ್ಯಗಳಲ್ಲಿ ಉಷ್ಣಾಂಶದ ಪ್ರಮಾಣ 45 ಡಿಗ್ರಿ ಸೆಲ್ಸಿಯಸ್ ದಾಟಿದೆ.

ದೇಶಾದ್ಯಂತ ಬಿಸಿಗಾಳಿ ಪ್ರಭಾವ ಹೆಚ್ಚಾಗಿದೆ ಎಂದು ವಿವರಿಸಿದರು. ಬಿಸಿಗಾಳಿ ಎಂದರೆ ಚಂಡಮಾರುತದ ಮಾದರಿಯಲ್ಲಿ ವೇಗವಾಗಿ ಬೀಸುವುದಿಲ್ಲ. ಬೀಸುವ ಗಾಳಿಯಲ್ಲಿ ಉಷ್ಣಾಂಶ ಹೆಚ್ಚಿದ್ದು, ತೀವ್ರ ಸೆಖೆಯ ಅನುಭವವಾಗಲಿದೆ. ಹಾಗಾಗಿ, ವಯೋವೃದ್ಧರು ಮತ್ತು ಮಕ್ಕಳು ಹಗಲಿನ ವೇಳೆಯಲ್ಲಿ ಹೊರಗೆ ಸುತ್ತಾಡುವುದನ್ನು ನಿಯಂತ್ರಿಸಿದರೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಹೆಚ್ಚಿನ ಪ್ರಮಾಣದಲ್ಲಿ ದ್ರವ ರೂಪದ ಆಹಾರ ಮತ್ತು ನೀರು ಕುಡಿಯುವುದು ಉತ್ತಮ ಎಂದು ಸುನೀಲ್ ಸಲಹೆ ನೀಡಿದ್ದಾರೆ.

ತಿಂಗಳಾಂತ್ಯಕ್ಕೆ ಬಿಸಿಗಾಳಿ ಕಡಿಮೆ ಸಾಧ್ಯತೆ: ಹಿಂದೂ ಮಹಾಸಾಗರ ಮತ್ತು ಆಗ್ನೇಯ ಬಂಗಾಳ ಕೊಲ್ಲಿ ಪಕ್ಕದಲ್ಲಿರುವ ಕಡಿಮೆ ಒತ್ತಡ ಪ್ರದೇಶದಲ್ಲಿ ಫನಿ ಚಂಡಮಾರುತ ಶಕ್ತಿ ಗಳಿಸಿದೆ. ಇದರ ಪ್ರಭಾವದಿಂದ ಏ. 29 ಮತ್ತು 30 ರಂದು ದಕ್ಷಿಣ ಒಳನಾಡು, ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ. ಉತ್ತರ ಒಳನಾಡು ಭಾಗದಲ್ಲಿ ಏ.30 ರಿಂದ ಸ್ವಲ್ಪ ಪ್ರಮಾಣದ ಮೋಡ ಕವಿದ ವಾತಾವರಣವಿರಲಿದ್ದು, ಮಳೆ ಆಗುವ ಸಾಧ್ಯತೆ ಇದರಿಂದ ಬಿಸಿಗಾಳಿಯ ಪ್ರಮಾಣ ಕಡಿಮೆ ಆಗುವ ಸಾಧ್ಯತೆಗಳು ಇವೆ ಎಂದು ಮಾಹಿತಿ ನೀಡಿದ್ದಾರೆ.

click me!