
-ಶ್ರೀಶೈಲ ಮಠದ, ಬೆಳಗಾವಿ
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆಯ ಅಕ್ಕಿ ತಮಿಳುನಾಡು, ಕೇರಳ ಸೇರಿ ನೆರೆರಾಜ್ಯಗಳಿಗೆ ಅಕ್ರಮವಾಗಿ ಸಾಗಣೆಯಾದ ಘಟನೆಗಳಾಯ್ತು, ಈಗ ಕ್ಷೀರಭಾಗ್ಯದ ಹಾಲುಪುಡಿಯ ಸರದಿ. ಅಪೌಷ್ಟಿಕತೆಯಿಂದ ಬಳುತ್ತಿರುವ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಕ್ಷೀರಭಾಗ್ಯ ಯೋಜನೆಯಡಿ ಶಾಲಾ ಮಕ್ಕಳಿಗೆ ಉಚಿತವಾಗಿ ನೀಡುವ ಹಾಲಿನ ಪುಡಿ ಈಗ ಕಾಳಸಂತೆ ಪಾಲಾಗಿದೆ.
ಕಳೆದ ಎರಡು ದಿನಗಳ ಹಿಂದಷ್ಟೇ ಅಕ್ರಮವಾಗಿ ಕೆನೆಭರಿತ ಹಾಲಿನ ಪ್ಯಾಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದ ವೇಳೆ ಬೆಳಗಾವಿ ಸಿಸಿಐಬಿ ಪೊಲೀಸರಿಗೆ ಸಿಕ್ಕಿಬಿದ್ದ ಐವರು ಆರೋಪಿಗಳೇ ಈ ಸಂಗತಿಯನ್ನು ಪೊಲೀಸರ ಎದುರು ಬಿಚ್ಚಿಟ್ಟಿದ್ದಾರೆ.
ಯೋಜನೆಯಡಿ ನೀಡಲಾಗುವ ನಂದಿನಿ ಮಿಲ್ಕ್ ಪೌಡರ್ ಕೆನೆಭರಿತ ಹಾಲಿನ ಪ್ಯಾಕೆಟ್‌ಗಳನ್ನು ಕಳ್ಳತನ ಮಾಡಿ, ಅವುಗಳನ್ನು ನೆರೆಯ ಮಹಾರಾಷ್ಟ್ರ, ತಮಿಳುನಾಡು ಹಾಗೂ ದೆಹಲಿಗೆ ಅಕ್ರಮವಾಗಿ ಸಾಗಿಸಲಾಗುತ್ತಿದೆ. ಅಂಗನವಾಡಿ ಮಕ್ಕಳಿಗೂ ಇದೇ ಹಾಲಿನ ಪುಡಿಯಿಂದ ತಯಾರಿಸಿದ ಹಾಲನ್ನು ನೀಡಲಾಗುತ್ತಿದೆ. ಈ ಹಿಂದೆಯೂ ಹಾಲಿನ ಪುಡಿಯನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಆದರೆ ಇಂಥಹದೊಂದು ಬೃಹತ್ ಜಾಲ ಇರುವುದು ಕಳ್ಳರಿಂದಲೇ ಬಯಲಾಗಿದೆ.
ಕ್ಷೀರಭಾಗ್ಯದ ಹಾಲಿನ ಪುಡಿಯನ್ನು ಮಾರಾಟ ಮಾಡುವುದರ ಹಿಂದೆ ದೊಡ್ಡ ಜಾಲವೇ ಇದೆ ಎಂಬ ಅನುಮಾನ ಪೊಲೀಸರದ್ದು. ಗಡಿ ಜಿಲ್ಲೆ ಬೆಳಗಾವಿಯಲ್ಲಿ ಅಷ್ಟೇ ಅಲ್ಲದೇ ಈ ದಂಧೆ ನೆರೆಯ ಜಿಲ್ಲೆಗಳಲ್ಲಿಯೂ ಅವ್ಯಾಹತವಾಗಿ ನಡೆಯುತ್ತಿದೆ.
ಕುಂದಾ, ಐಸ್‌ಕ್ರಿಮ್‌ಗೆ ಬಳಕೆ
ಶಾಲಾ ಮಕ್ಕಳಿಗೆ ಪೂರೈಸಬೇಕಾದ ಕ್ಷೀರಭಾಗ್ಯ ಯೋಜನೆಯ ನಂದಿನಿ ಮಿಲ್ಕ್ ಪೌಡರ್ ಕೆನೆ ಭರಿತವಾಗಿದೆ. ಹಾಗಾಗಿ, ಇದು ಐಸ್‌ಕ್ರೀಮ್ ಹಾಗೂ ಕುಂದಾ ಮಾಡಲು ಯೋಗ್ಯವಾಗಿದೆ. ಹಾಗಾಗಿ, ಕ್ಷೀರಭಾಗ್ಯ ಯೋಜನೆಯತ್ತ ಕಳ್ಳರ ವಕ್ರದೃಷ್ಟಿಬಿದ್ದಿದೆ. ಈ ಹಾಲಿನ ಪುಡಿ ಕಳ್ಳರ ಪಾಲಾಗುತ್ತಿರುವುದರಿಂದ ಶಾಲಾ ಮಕ್ಕಳು ಪೌಷ್ಟಿಕಾಂಶ ದ್ರವಾಹಾರದಿಂದ ವಂಚಿತಗೊಳ್ಳುವಂತಾಗಿದೆ. ಸಣ್ಣಪುಟ್ಟಪ್ಯಾಕೆಟ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತದೆ. ದೊಡ್ಡ ಪ್ರಮಾಣದಲ್ಲಿ ಮಹಾರಾಷ್ಟ್ರ, ತಮಿಳುನಾಡು ಹಾಗೂ ಸ್ಥಳೀಯ ಐಸ್‌ಕ್ರಿಮ್ ಫ್ಯಾಕ್ಟರಿಗಳಿಗೆ ನೇರವಾಗಿ ರವಾನಿಸಲಾಗುತ್ತದೆ.
ಬೆಳಗಾವಿ ನಗರ, ಹಿರೇಬಾಗೇವಾಡಿ, ಕಿತ್ತೂರು ಸೇರಿ ಮತ್ತಿತರ ಗ್ರಾಮಗಳಲ್ಲಿ ಕ್ಷೀರಭಾಗ್ಯ ಯೋಜನೆಯ ಹಾಲಿನ ಪುಡಿಯನ್ನು ಬಳಕೆ ಮಾಡಿಕೊಂಡು ಖೋವಾ ತಯಾರಿಸಲಾಗುತ್ತಿದೆ. ಇದನ್ನು ಬೆಳಗಾವಿಯ ಕೆಲ ಸ್ವೀಟ್ ಅಂಗಡಿಗೆ ಮಾರುವುದು ಸಾಮಾನ್ಯವಾಗಿದೆ.
(ಕನ್ನಡಪ್ರಭ ವಾರ್ತೆ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.