
ಬಳ್ಳಾರಿ : ‘ಡಿ.ಕೆ.ಶಿವಕುಮಾರ್ ಕಾಂಗ್ರೆಸ್‌ನಲ್ಲಿ ನಾಯಿ ಬಾಲ ತರ ಮುದುರಿ ಬಿಟ್ಟಿದ್ದಾರೆ. ಪಕ್ಷದಲ್ಲಿ ಅವರದು ಏನೂ ನಡೆಯುವುದಿಲ್ಲ. ಇನ್ನು ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಾಲ ಹಿಡಿದುಕೊಂಡು ಓಡಾಡುವ ಸ್ಥಿತಿ ಬಂದಿದೆ. ರಾಜಕೀಯದಲ್ಲಿ ಇಂತಹ ಭಂಡತನದ ಬದುಕು ಯಾರಿಗೂ ಬರಬಾರದು.’
- ಹೀಗೆಂದು ವ್ಯಂಗ್ಯವಾಡಿದವರು ಬಿಜೆಪಿಯ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ. ಶುಕ್ರವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ವಿರುದ್ಧ ತಮ್ಮದೇ ಶೈಲಿಯಲ್ಲಿ ವಾಗ್ದಾಳಿ ನಡೆಸಿದರು.
ನನಗೂ ಬಳ್ಳಾರಿಗೆ ಅವಿನಾಭಾವ ಸಂಬಂಧವಿದೆ. ನಾನು ಚಿಕ್ಕವನಿದ್ದಾಗ ಬಳ್ಳಾರಿಗೆ ಬರುತ್ತಿದ್ದೆ. ಆಗ ತೆಲುಗು ಸಿನಿಮಾ ನೋಡುತ್ತಿದ್ದೆ. ಆ ಸಿನಿಮಾದ ರೌಡಿ (ವಿಲನ್) ದಂಗೆ ಎಬ್ಬಿಸಿ ಎಂದು ಕರೆ ಕೊಡುತ್ತಿದ್ದ. ಅದೇ ರೀತಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕೂಡ ಬಿಜೆಪಿ ವಿರುದ್ಧ ದಂಗೆ ಏಳುವಂತೆ ಕರೆ ಕೊಟ್ಟಿದ್ದರು. ಅವರ ಹೇಳಿಕೆ ನೋಡಿದರೆ ತೆಲುಗು ಸಿನಿಮಾದ ರೌಡಿಯ ವರ್ತನೆ ನೆನಪಾಗುತ್ತದೆ ಎಂದು ಈಶ್ವರಪ್ಪ ಹೇಳಿದರು.
ಸಂಸದೆ ಶೋಭಾ ಕರಂದ್ಲಾಜೆ ಕುರಿತು ಸಿದ್ದರಾಮಯ್ಯ ಮಾಡಿದ ಟೀಕೆಗೂ ಈಶ್ವರಪ್ಪ ತೀವ್ರ ಕಿಡಿಕಾರಿದರು. ಸಿದ್ದರಾಮಯ್ಯ ಅವರನ್ನು ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡ ಅವರು, ‘ಹೆಣ್ಣು ಮಗಳು ಎನ್ನದೆ ಶೋಭಾ ಕರಂದ್ಲಾಜೆ ಬಗ್ಗೆ ಸಿದ್ದರಾಮಯ್ಯ ಹಗುರವಾಗಿ ಮಾತನಾಡಿದ್ದಾರೆ. ಪ್ರಧಾನಿ ಮೋದಿ ಅವರನ್ನೂ ಏಕವಚನದಲ್ಲಿ ಮಾತನಾಡುತ್ತಾನೆ. ನಿಜಕ್ಕೂ ಆತನಿಗೆ ಸಂಸ್ಕಾರ, ಸಂಸ್ಕೃತಿ ಇದೆಯಾ’ ಎಂದು ಪ್ರಶ್ನಿಸಿದರು.
ಪೇಪರ್ ಟೈಗರ್: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪೇಪರ್ ಟೈಗರ್ ಇದ್ದಂತೆ. ಆತನದು ಬರೀ ಪೇಪರ್ ಸ್ಟೇಟ್‌ಮೆಂಟ್ ಅಷ್ಟೆ. ಪಕ್ಷದ ಯಾರ ಮೇಲೂ ಅವರು ಕ್ರಮ ಕೈಗೊಂಡಿಲ್ಲ. ಉಪ ಚುನಾವಣೆ ಬಳಿಕ ಕಾಂಗ್ರೆಸ್-ಜಡಿಎಸ್‌ನ ಮೈತ್ರಿ ಸರ್ಕಾರದ ಅತಂತ್ರ ರಾಜಕಾರಣ ಅಂತ್ಯವಾಗಲಿದೆ ಎಂದು ಹೇಳಿದರು.
ಸಿಎಂ ರೌಡಿ ವರ್ತನೆ: ಕುಮಾರಸ್ವಾಮಿ ಅವರಪ್ಪನಾಣೆಗೂ ಮುಖ್ಯಮಂತ್ರಿಯಾಗಲ್ಲ ಎಂದು ಪದೇ ಪದೆ ಹೇಳುತ್ತಿದ್ದ ಸಿದ್ದರಾಮಯ್ಯಇದೀಗ ಕುಮಾರಸ್ವಾಮಿ ಬಾಲ ಹಿಡಿದು ಓಡಾಡುತ್ತಿದ್ದಾರೆ. ಸಿದ್ದರಾಮಯ್ಯ ತಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದು ಬೀಗುತ್ತಿದ್ದರು. ಅಧಿಕಾರ ಕಳೆದುಕೊಂಡರೂ ಬುದ್ಧಿ ಬಂದಿಲ್ಲ. ಚುನಾವಣೆಗೂ ಮುನ್ನ ಹಾವು-ಮುಂಗುಸಿಯಂತೆ ಜಗಳವಾಡುತ್ತಿದ್ದ ದೇವೇಗೌಡರು ಹಾಗೂ ಸಿದ್ದರಾಮಯ್ಯ ಪರಸ್ಪರ ಟೀಕೆಯಲ್ಲಿ ತೊಡಗಿದ್ದರು. ಜೆಡಿಎಸ್‌ಗೆ ಬಹುಮತ ಸಿಗದಿದ್ದರೆ ಪ್ರತಿಪಕ್ಷ ಸ್ಥಾನದಲ್ಲಿ ಕೂರುವುದಾಗಿ ಉತ್ತರ ಕುಮಾರನ ಪೌರುಷ ತೋರಿಸಿದ್ದ ಗೌಡರು, ಕೊನೆಗೆ ಕಾಂಗ್ರೆಸ್ ಜೊತೆ ಒಂದಾಗಿ ಸರ್ಕಾರ ರಚನೆ ಮಾಡಿದರು ಎಂದು ಟೀಕಿಸಿದರು.
ಡಿಕೆಶಿ ಪ್ರಾಮಾಣಿಕ: ಈಶ್ವರಪ್ಪ
ವೀರಶೈವ-ಲಿಂಗಾಯತ ಎಂದು ಪ್ರತ್ಯೇಕ ಧರ್ಮದ ಮಾಡಲು ಹೊರಟ ಕಾಂಗ್ರೆಸ್ ಸರಿಯಾದ ಪಾಠ ಕಲಿತಿದೆ. ಈ ವಿಚಾರದಲ್ಲಿ ಜಲಸಂಪನ್ಮನೂಲ ಸಚಿವ ಡಿ.ಕೆ.ಶಿವಕುಮಾರ್ ಅಭಿನಂದನಾರ್ಹರು. ತಾವು ಮಾಡಿದ ತಪ್ಪನ್ನು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.