'ವರ್ಗಾವಣೆ ದಂಧೆಯಿಂದ ಅನಿತಾಗೆ ಕೋಟಿ ಹಣ'

By Web DeskFirst Published Oct 27, 2018, 12:59 PM IST
Highlights

ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರು ಸರ್ಕಾರಿ ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ನೇರವಾಗಿ ಭಾಗಿಯಾಗಿದ್ದಾರೆ. ನೂರಾರು ಕೋಟಿ ಹಣ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಗಂಭೀರ ಆರೋಪ ಮಾಡಿದ್ದಾರೆ.

ರಾಮನಗರ :  ರಾಮನಗರ ಉಪ ಚುನಾವಣೆಯ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರು ಸರ್ಕಾರಿ ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ನೇರವಾಗಿ ಭಾಗಿಯಾಗಿದ್ದಾರೆ. ನೂರಾರು ಕೋಟಿ ಹಣ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಗಂಭೀರ ಆರೋಪ ಮಾಡಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಿತಾ ಅವರು ಹಣ ಪಡೆದು ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ಇತರೆ ಅಧಿಕಾರಿಗಳನ್ನು ವರ್ಗ ಮಾಡುತ್ತಿದ್ದಾರೆಂದು ಜನ ಹಾಗೂ ಜೆಡಿಎಸ್‌ ಕಾರ್ಯಕರ್ತರೇ ಮಾತನಾಡಿಕೊಳ್ಳುತ್ತಿದ್ದಾರೆ. ಈಗ ಅವರ ಪತಿ ಎಚ್‌.ಡಿ. ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ಹೀಗಾಗಿ ಅಧಿಕಾರಿಗಳ ವರ್ಗಾವಣೆಯಲ್ಲಿ ತೊಡಗಿಕೊಂಡು ಅನಿತಾ ಕುಮಾರಸ್ವಾಮಿ ನೂರಾರು ಕೋಟಿ ರುಪಾಯಿ ಮಾಡುತ್ತಿದ್ದಾರೆ ಎಂದು ದೂರಿದರು.

ಡಿಕೆ ಸಹೋದರರಿಗೂ ಟಾಂಗ್‌:  ಏತನ್ಮಧ್ಯೆ, ದೇವೇಗೌಡರ ಕುಟುಂಬವನ್ನು ವಿರೋಧಿಸುತ್ತಲೇ ಬಂದಿರುವ ಡಿಕೆ ಸಹೋದರರ ಕುರಿತೂ ಯೋಗೇಶ್ವರ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕನಕಪುರದ ಸಹೋದರರು ರಾಜಕೀಯವಾಗಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಕುಟುಂಬವನ್ನು ವಿರೋಧಿಸಿಕೊಂಡೇ ಬಂದವರು. ಈಗ ಅಧಿಕಾರ ಮತ್ತು ಸ್ವಾರ್ಥಕ್ಕಾಗಿ ಮೈತ್ರಿ ಅಭ್ಯರ್ಥಿ ಅನಿತಾ ಅವರನ್ನು ರಾಮನಗರ ಉಪ ಚುನಾವಣೆಯಲ್ಲಿ ಗೆಲ್ಲಿಸಲು ಟೊಂಕ ಕಟ್ಟಿನಿಂತಿದ್ದಾರೆ. ಇವರೆಲ್ಲರ ದೊಂಬರಾಟವನ್ನು ಕ್ಷೇತ್ರದ ಜನ ಅರಿತಿದ್ದಾರೆ ಎಂದರು.

ಈ ಹಿಂದೆ ಅನಿತಾರವರು ಮಧುಗಿರಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಆ ಕ್ಷೇತ್ರಕ್ಕೆ ಅವರು ಯಾವತ್ತೂ ಭೇಟಿ ಕೊಟ್ಟಿಲ್ಲ ಎಂದು ಅಲ್ಲಿನ ಜನ ನಂತರ ವಾಪಸ್‌ ಕಳುಹಿಸಿದರು. ಚನ್ನಪಟ್ಟಣಕ್ಕೆ ವಲಸೆ ಬಂದಾಗಲೂ ಜನ ತಿರಸ್ಕರಿಸಿದರು. ಈಗ ಹಠಕ್ಕೆ ಬಿದ್ದು ಕುಮಾರಸ್ವಾಮಿಯಿಂದ ರಾಮನಗರ ಕ್ಷೇತ್ರ ಖಾಲಿ ಮಾಡಿಸಿ ಸ್ವಯಂ ಘೋಷಿತ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ ಎಂದು ಆರೋಪಿಸಿದರು.

ಯೋಗೇಶ್ವರ್‌ ತಾವು ಮಾಡಿದ್ದನ್ನು ನಾನು ಮಾಡಿದೆ ಅಂತಿದ್ದಾರೆ: ಅನಿತಾ

ರಾಮನಗರ: ಚನ್ನಪಟ್ಟಣ ಕ್ಷೇತ್ರದಲ್ಲಿನ ಸೋಲು ಅರಗಿಸಿಕೊಳ್ಳಲಾಗದೆ ಹತಾಶೆಗೊಂಡು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ನನ್ನ ವಿರುದ್ಧ ವರ್ಗಾವಣೆ ದಂಧೆಯ ಆರೋಪ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಯಾವುದೇ ದುಡ್ಡು ಮಾಡಿಲ್ಲ. ಅವರು ಮಾಡುವ ಕೆಲಸವನ್ನು ನಾನು ಮಾಡುತ್ತಿದ್ದೇನೆ ಎಂದು ಹೇಳುತ್ತಿದ್ದಾರೆ. ಈ ರೀತಿ ಇಲ್ಲಸಲ್ಲದ ಹೇಳಿಕೆ ನೀಡುವುದನ್ನು ಯೋಗೇಶ್ವರ್‌ ಕೈಬಿಡಬೇಕು ಎಂದರು.

ಮಧುಗಿರಿಯಲ್ಲಿ ನಾನು ಮಾಡಿರುವ ಕೆಲಸವನ್ನು ಮುಂದೆ ಸುದ್ದಿಗೋಷ್ಠಿ ನಡೆಸಿ ತಿಳಿಸುತ್ತೇನೆ. ಯೋಗೇಶ್ವರ್‌ ಯಾರ ಬಗ್ಗೆ ಹೇಗೆ ಮಾತನಾಡಬೇಕು ಎಂಬುದನ್ನು ಮೊದಲು ಕಲಿಯಲಿ. ಸುಳ್ಳು ಆರೋಪ ಮಾಡುವುದು ಅವರಿಗೆ ಶೋಭೆ ತರುವುದಿಲ್ಲ. ಗೌರವದಿಂದ ಬದುಕುವುದನ್ನು ಆ ಮನುಷ್ಯ ಕಲಿಯಲಿ ಎಂದು ಯೋಗೇಶ್ವರ್‌ ವಿರುದ್ಧ ಅನಿತಾ ಗುಡುಗಿದರು.

ಪಕ್ಷ ನಿಷ್ಠೆ ಬಗ್ಗೆ ಯೋಗಿ ನಮಗೆ ಹೇಳಬೇಕಾಗಿಲ್ಲ: ಡಿಕೆಸು

ನಾವು ಯಾರಿಗೂ ಶರಣಾಗಿಲ್ಲ. ಪಕ್ಷದ ಹೈಕಮಾಂಡ್‌ ಹೇಳಿದಂತೆ ಕೆಲಸ ಮಾಡುತ್ತಿದ್ದೇವೆ. ಯೋಗೇಶ್ವರ್‌ ಏನು ಬೇಕಾದರೂ ಹೇಳಲಿ ಎಂದು ಸಂಸದ ಡಿ.ಕೆ. ಸುರೇಶ್‌ ಕಿಡಿಕಾರಿದ್ದಾರೆ.

ಡಿ.ಕೆ.ಸಹೋದರರು ದೇವೇಗೌಡರ ಕುಟುಂಬಕ್ಕೆ ಶರಣಾಗಿದ್ದಾರೆಂದು ಯೋಗೇಶ್ವರ್‌ ಪತ್ರಿಕಾಗೋಷ್ಠಿಯಲ್ಲಿ ಮಾಡಿದ ಆರೋಪಕ್ಕೆ ಡಿ.ಕೆ.ಸುರೇಶ್‌ ಪ್ರತಿಕ್ರಿಯಿಸಿದರು. ಏಕವಚನದಲ್ಲೇ ಯೋಗೇಶ್ವರ್‌ ವಿರುದ್ಧ ಕಿಡಿಕಾರಿದರು. ಯೋಗೇಶ್ವರ್‌ ಬೇಕಿದ್ದರೆ ನಮ್ಮ ಬಳಿ ಬಂದು ಕೇಳಲಿ, ನಾವು ಹೇಳುತ್ತೇವೆ ಎಂದು ತಿರುಗೇಟು ನೀಡಿದರು.

ನಾವು ಯಾರಿಗೂ ಶರಣಾಗುವ ಅವಶ್ಯಕತೆ ಇಲ್ಲ. ಕಾಂಗ್ರೆಸ್‌ ವರಿಷ್ಠರು ವಿಶ್ವಾಸವಿಟ್ಟು ಜವಾಬ್ದಾರಿ ವಹಿಸಿದ್ದಾರೆ. ಅದನ್ನು ನಿಷ್ಠೆಯಿಂದ ನಿಭಾಯಿಸುತ್ತಿದ್ದೇವೆ. ನಮ್ಮ ನಿಷ್ಠೆ ಪ್ರಶ್ನೆ ಮಾಡುವ ರೀತಿ ಯಾವತ್ತೂ ನಡೆದುಕೊಂಡಿಲ್ಲ. ಪಕ್ಷ ನಿಷ್ಠೆಯನ್ನು ಯೋಗೇಶ್ವರ್‌ ಬಳಿ ಕಲಿಯುವ ಪ್ರಮೇಯವೂ ಬಂದಿಲ್ಲ ಎಂದರು.

click me!