ಕಾಫಿ ಡೇ ಮಾಲಿಕ ಸಿದ್ಧಾರ್ಥ ಅವರ ಕಾರು ಚಾಲಕನ ಬಸವರಾಜು ಅವರ ವಿಚಾರಣೆ ನಡೆಸಿದ್ದು, ಅವರ ಕೊನೆಯ ಕ್ಷಣಗಳ ಬಗ್ಗೆ ಹಲವು ಮಾಹಿತಿಯನ್ನು ಅವರು ಬಿಚ್ಚಿಟ್ಟಿದ್ದಾರೆ.
ಮಂಗಳೂರು [ಆ.02] : ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದ ‘ಕಾಫಿ ಕಿಂಗ್’ ಸಿದ್ಧಾರ್ಥ ಅವರು ಉಳ್ಳಾಲ ನೇತ್ರಾವತಿ ಸೇತುವೆ ಬಳಿಯಿಂದ ನಾಪತ್ತೆಯಾಗುವ ಮುನ್ನ ಸುಮಾರು ಹೊತ್ತು ಎಲ್ಲಿಗೆ ಹೋಗಿದ್ದರು ಎಂಬ ಊಹಾಪೋಹಗಳಿಗೆ ಈಗ ಉತ್ತರ ದೊರೆತಿದೆ. ಸಿದ್ಧಾರ್ಥ ಅವರು ಕಾರನ್ನು ಒಂದು ಕಡೆ ನಿಲ್ಲಿಸಿ ಸುಮಾರು ಅರ್ಧ ತಾಸಿಗೂ ಅಧಿಕ ಹೊತ್ತು ಫೋನ್‌ನಲ್ಲಿ ಮಾತನಾಡುತ್ತಿದ್ದರು ಎಂಬ ಮಾಹಿತಿ ಗೊತ್ತಾಗಿದೆ.
ಕಂಕನಾಡಿ ನಗರ ಪೊಲೀಸರು ನಡೆಸಿದ ವಿಚಾರಣೆಯಲ್ಲಿ ಸಿದ್ಧಾರ್ಥ ಅವರ ಕಾರು ಚಾಲಕ ಬಸವರಾಜ ಪಾಟೀಲ್ ವಿಚಾರಣೆ ವೇಳೆ ಈ ಮಾಹಿತಿಯನ್ನು ನೀಡಿದ್ದಾಗಿ ಮೂಲಗಳು ತಿಳಿಸಿವೆ.
undefined
ಕುಳಿತಲ್ಲೇ ಮಾತು: ಬೆಂಗಳೂರಿನಿಂದ ಸೋಮವಾರ ಮಧ್ಯಾಹ್ನ ಹೊರಟ ಸಿದ್ಧಾರ್ಥ ಅವರು ಸಂಜೆ 5.28ಕ್ಕೆ ಬಂಟ್ವಾಳದ ಬ್ರಹ್ಮರಕೂಟ್ಲು ಟೋಲ್‌ಗೇಟ್‌ನ್ನು ಹಾದು ಹೋಗಿದ್ದಾರೆ. ಇದು ಟೋಲ್‌ಗೇಟ್‌ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಲ್ಲಿಂದ ಸಂಜೆ 6 ಗಂಟೆ ವೇಳೆಗೆ ಮಂಗಳೂರು ನಗರದ ಪಂಪ್‌ವೆಲ್ ತಲುಪಿದ್ದಾರೆ. ಪಂಪ್‌ವೆಲ್‌ನಿಂದ ಎಡಕ್ಕೆ ತಿರುಗಿ ಉಳ್ಳಾಲ ಕಡೆಗೆ ಕೇರಳಕ್ಕೆ ಸಾಗುವ ಹೆದ್ದಾರಿಯಲ್ಲಿ ಸಾಗಿದ್ದಾರೆ. ಸುಮಾರು 5 ಕಿ.ಮೀ. ದೂರದಲ್ಲಿರುವ ನೇತ್ರಾವತಿ ಸೇತುವೆ ಹತ್ತಿರ ತಲುಪಿದಾಗ ಕಾರು ನಿಲ್ಲಿಸುವಂತೆ ಸೂಚಿಸಿದ್ದಾರೆ. ಸುಮಾರು ಅರ್ಧ ಗಂಟೆ ಕಾಲ ಫೋನ್‌ನಲ್ಲಿ ಮಾತನಾಡುತ್ತಿದ್ದರು ಎಂದು ಚಾಲಕ ಹೇಳಿದ್ದಾನೆ ಎನ್ನಲಾಗಿದೆ. ಪಂಪ್‌ವೆಲ್‌ನಿಂದ ಉಳ್ಳಾಲ ಕಡೆಗೆ ಬರುವಾಗ ಇಂಗ್ಲಿಷ್‌ನಲ್ಲಿ ಮಾತನಾಡುತ್ತಿದುದರಿಂದ ಅರ್ಥವಾಗಿಲ್ಲ ಎಂದು ಚಾಲಕ ಹೇಳಿದ್ದು, ಯಾರೊಂದಿಗೆ ಮಾತನಾಡುತ್ತಿದ್ದರೂ ಎಂಬುದು ತಿಳಿಯಲಿಲ್ಲ ಎಂದಿದ್ದಾನೆ ಎನ್ನಲಾಗಿದೆ.
ದಾರಿ ಮಧ್ಯೆ ಪತ್ರ ಪೋಸ್ಟ್? : ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸುವ ಸಂದರ್ಭದಲ್ಲಿ ಮಾರ್ಗ ಮಧ್ಯದಲ್ಲಿ ಸಿದ್ಧಾರ್ಥ ಪತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ ಎಂದು ಚಾಲಕ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ. ಆದರೆ ಯಾರಿಗೆ ಪೋಸ್ಟ್ ಮಾಡಿದ್ದಾರೆ? ಎಂಬ ಮಾಹಿತಿ ತಿಳಿದುಬಂದಿಲ್ಲ.
ಆತ್ಮಹತ್ಯೆ ಸಾಧ್ಯತೆಯೇ ಹೆಚ್ಚು
ಸಿದ್ಧಾರ್ಥ ಮೃತದೇಹ ಪತ್ತೆಯಾದುದನ್ನು ಗಮನಿಸಿದರೆ, ಅವರು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಅಧಿಕವಾಗಿದೆ ಎಂದು ವಿಧಿವಿಜ್ಞಾನ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ‘ಕನ್ನಡಪ್ರಭ’ದೊಂದಿಗೆ ಮಾತನಾಡಿರುವ ದೇರಳಕಟ್ಟೆಕೆ.ಎಸ್.ಹೆಗ್ಡೆ ವಿಧಿ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಮಹಾಬಲ ಶೆಟ್ಟಿ, ಮೃತದೇಹ ಸಿಕ್ಕಿರುವುದನ್ನು ಗಮನಿಸಿದರೆ, ಅದು ಕೊಲೆಯಾಗಿರಲು ಸಾಧ್ಯವಿಲ್ಲ. ಅಂತಹ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಇನ್ನು ನೀರಿನ ಸೆಳೆತಕ್ಕೆ ಸಿಕ್ಕಿ ಅವರ ಟೀ-ಶರ್ಟ್ ಕಳಚಿರಬಹುದು. ಆತ್ಮಹತ್ಯೆಗೂ ಮುನ್ನ ಕೆಲವರು ಶರ್ಟ್, ಚಪ್ಪಲಿ ಕಳಚುತ್ತಾರೆ. ಸಿದ್ಧಾರ್ಥ ಅದೇ ರೀತಿ ಟೀ-ಶರ್ಟ್ ತೆಗೆದಿರಬಹುದು. ಆದರೆ, ಮೇಲಿಂದ ನೂಕಿದ್ದರೆ ಪತ್ತೆ ಮಾಡುವುದು ಸುಲಭವಲ್ಲ ಎಂದಿದ್ದಾರೆ.
ರಕ್ತದ ಕಲೆಯಲ್ಲ: ಸಿದ್ಧಾರ್ಥ ಅವರ ಮೃತದೇಹದ ಮುಖದಲ್ಲಿ ಕಂಡುಬಂದಿರುವುದು ರಕ್ತದ ಕಲೆಯಲ್ಲ. ದೇಹದೊಳಗಿನ ಶ್ವಾಸಕೋಶದ ನಾಳ ಒಡೆದು ತುಸು ರಕ್ತ ಹೊರಗೆ ಬರುತ್ತದೆ. ಅದು ನದಿ ನೀರಿನಲ್ಲಿ ಬೆರೆತು ಅಂಟಿಕೊಂಡು ಹಾಗೆ ಕಂಡಿದೆ. ಶ್ವಾಸಕೋಶದಲ್ಲಿ ಗ್ಯಾಸ್ ಉತ್ಪತ್ತಿಯಾದಾಗ ಸಹಜವಾಗಿಯೇ ಮೃತಶರೀರ ನೀರಿನಲ್ಲಿ ಮೇಲಕ್ಕೆ ಬಂದು ಕೊಳೆಯಲು ಆರಂಭವಾಗುತ್ತದೆ. ನೀರು ತಂಪಾಗಿದ್ದ ಕಾರಣ ಬೇಗನೆ ಮೃತದೇಹ ಹೊರಗೆ ಬಂದಿಲ್ಲ. ಹಾಗಾಗಿ ದೇಹ ಕೊಳೆತಿಲ್ಲ ಎಂದಿದ್ದಾರೆ.