ಕೆಪಿಸಿಸಿ ಅಧ್ಯಕ್ಷ ಹುದ್ದೆ ರೇಸ್‌ಗೆ ಕೃಷ್ಣ ಬೈರೇಗೌಡ

First Published Jun 2, 2018, 9:52 AM IST
Highlights

ಕಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಡಿಸಿಎಂ ಆಗಿ ಆಯ್ಕೆಯಾದ ಹಿನ್ನೆಲೆಯಲ್ಲಿ, ತೆರವಾದ ಸ್ಥಾನಕ್ಕಾಗಿ ಇದೀಗ ಸಿಕ್ಕಾಪಟ್ಟೆ ಪೈಪೋಟಿ ನಡೆಯುತ್ತಿದೆ. ಮಾಜಿ ಸಚಿವ ಕೃಷ್ಣ ಭೈರೇಗೌಡ ಸಹ ರೇಸ್‌ನಲ್ಲಿದ್ದು, ಯಾರಾಗ್ತಾರೆ ಕೆಪಿಸಿಸಿ ಅಧ್ಯಕ್ಷರೆಂಬುದನ್ನು ಕಾದು ನೋಡಬೇಕು.

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸ್ಥಾನದ ರೇಸ್‌ಗೆ ಮಾಜಿ ಸಚಿವ ಕೃಷ್ಣ ಬೈರೇಗೌಡ ಕಾಲಿಟ್ಟಿದ್ದಾರೆ. ಕೃಷ್ಣ ಬೈರೇಗೌಡ ಅವರ ಪರ ಹೈಕಮಾಂಡ್‌ನಲ್ಲಿ ಪ್ರಬಲ ಲಾಬಿ ನಡೆಸಲು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರ ನೇತೃತ್ವದ ಸಿಂಡಿಕೇಟ್‌ ರೂಪುಗೊಂಡಿದೆ.

ಈ ಬಗ್ಗೆ ಶುಕ್ರವಾರ ಸಂಜೆ ನಗರದ ಶಾಂಘ್ರಿಲಾ ಹೋಟೆಲ್‌ನಲ್ಲಿ ಸಭೆ ನಡೆಸಿದ ಕೃಷ್ಣ ಬೈರೇಗೌಡರ ಪರ ತಂಡ ಹೈಕಮಾಂಡ್‌ ಮೇಲೆ ಒತ್ತಡ ಹೇರುವ ಬಗ್ಗೆ ರಣತಂತ್ರ ರೂಪಿಸಿತು. ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ವಿಧಾನಪರಿಷತ್‌ ಸದಸ್ಯರಾದ ರಿಜ್ವಾನ್‌ ಅರ್ಷದ್‌, ಶ್ರೀನಿವಾಸ ಮಾನೆ, ಬೋಸ್‌ರಾಜು ಪುತ್ರ ರವಿ ಬೋಸ್‌ರಾಜು ಸೇರಿದಂತೆ ಹಲವರು ಸಭೆಯಲ್ಲಿ ಭಾಗವಹಿಸಿದ್ದರು.

ಪ್ರಸ್ತುತ ಕೆಪಿಸಿಸಿ ಅಧ್ಯಕ್ಷ ಗಾದಿಯ ರೇಸ್‌ನಲ್ಲಿ ಡಿ.ಕೆ. ಶಿವಕುಮಾರ್‌, ಎಂ.ಬಿ. ಪಾಟೀಲ್‌, ಮಾಜಿ ಸಿಎಂ ಸಿದ್ದರಾಮಯ್ಯ ಇದ್ದಾರೆ. ಅಲ್ಲದೆ, ಬಿ.ಕೆ. ಹರಿಪ್ರಸಾದ್‌, ಎಸ್‌.ಆರ್‌. ಪಾಟೀಲ್‌, ಕೆ.ಎಚ್‌. ಮುನಿಯಪ್ಪ ಹೆಸರೂ ಕೇಳಿಬಂದಿತ್ತು.

ಹೀಗಾಗಿ ಒಕ್ಕಲಿಗ ಅಥವಾ ಲಿಂಗಾಯತ ಅಭ್ಯರ್ಥಿಯ ಹುಡುಕಾಟದಲ್ಲಿರುವ ಪಕ್ಷಕ್ಕೆ ಒಕ್ಕಲಿಗ ಸಮುದಾಯದಿಂದ ಡಿ.ಕೆ.ಶಿವಕುಮಾರ್‌ ಮೊದಲ ಆಯ್ಕೆ. ಆದರೆ, ಐಟಿ-ಸಿಬಿಐ ಕೆಂಗಣ್ಣಿಗೆ ಗುರಿಯಾಗಿರುವ ಅವರನ್ನು ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿ ಅಧ್ಯಕ್ಷ ಸ್ಥಾನದಲ್ಲಿ ಕೂರಿಸುವುದು ಒಳಿತಲ್ಲ ಎಂದು ಬಿಂಬಿಸಲು ಹಾಗೂ ಅವರ ಬದಲಿಗೆ ಕೃಷ್ಣ ಬೈರೇಗೌಡ ಅವರ ಹೆಸರನ್ನು ಚಾಲ್ತಿಗೆ ತರಲು ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ರಾಹುಲ್‌ ಗಾಂಧಿ ಆಪ್ತರಲ್ಲೊಬ್ಬರಾಗಿರುವ ಕೃಷ್ಣ ಬೈರೇಗೌಡ ಕೆಪಿಸಿಸಿ ಅಧ್ಯಕ್ಷ ಗಾದಿಗೆ ಬಂದರೆ ಪಕ್ಷದಲ್ಲಿ ಯುವಕರ ಹಿಡಿತ ಹೆಚ್ಚುತ್ತದೆ. ಭವಿಷ್ಯದ ದೃಷ್ಟಿಯಿಂದ ಕೃಷ್ಣ ಬೈರೇಗೌಡ ಅವರಿಗೆ ಅಧಿಕಾರ ನೀಡುವಂತೆ ಹೈಮಾಂಡ್‌ ಮೇಲೆ ಒತ್ತಡ ಹೇರಲು ಶುಕ್ರವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಮೂಲಗಳು ತಿಳಿಸಿವೆ.

click me!