ಕೆ.ಆರ್ ಮಾರ್ಕೆಟ್ ಇಂದಿರಾ ಕ್ಯಾಂಟೀನ್ ನಂ.1

Published : Nov 15, 2017, 10:47 AM ISTUpdated : Apr 11, 2018, 01:08 PM IST
ಕೆ.ಆರ್ ಮಾರ್ಕೆಟ್ ಇಂದಿರಾ ಕ್ಯಾಂಟೀನ್ ನಂ.1

ಸಾರಾಂಶ

ಬಿಬಿಎಂಪಿಯ ಎಲ್ಲಾ 198 ವಾರ್ಡುಗಳಲ್ಲೂ ಇಂದಿರಾ ಕ್ಯಾಂಟೀನ್ ಆರಂಭಿಸುವುದಾಗಿ ಹೇಳಿದ್ದ ಸರ್ಕಾರ, ಈವರೆಗೆ 165 ವಾರ್ಡುಗಳಲ್ಲಿ ಕ್ಯಾಂಟೀನ್‌'ಗಳನ್ನು ಆರಂಭಿಸಿದೆ. 18 ವಾರ್ಡುಗಳಲ್ಲಿ ಸ್ಥಳಾವಕಾಶದ ಕೊರತೆಯಿಂದ ಮೊಬೈಲ್ ಕ್ಯಾಂಟೀನ್ ಆರಂಭಿಸಲು ನಿರ್ಧರಿಸಿದೆ.

ಬೆಂಗಳೂರು(ನ.15): ಮಹತ್ವಾಕಾಂಕ್ಷಿ ಯೋಜನೆ ‘ಇಂದಿರಾ ಕ್ಯಾಂಟೀನ್‌'ಗೆ ದಿನಕಳೆದಂತೆ ಬೇಡಿಕೆ ಹೆಚ್ಚಾಗತೊಡಗಿದೆ. ಅದರಲ್ಲೂ ನಗರದ ಪ್ರಮುಖ ಜನನಿಬಿಡ ಪ್ರದೇಶಗಳಲ್ಲಿ ಆರಂಭಿಸಲಾಗಿರುವ ಇಂದಿರಾ ಕ್ಯಾಂಟೀನ್‌'ಗಳಲ್ಲಿ ನಗರದ ಇತರೆ ಭಾಗದ ಕ್ಯಾಂಟೀನ್‌'ಗಳಿಗಿಂತ ದುಪ್ಪಟ್ಟು ಬೇಡಿಕೆ ಕಂಡುಬರುತ್ತಿದೆ.

ನಗರದ ಬಹುತೇಕ ಇಂದಿರಾ ಕ್ಯಾಂಟೀನ್‌'ಗಳಲ್ಲಿ ನಿತ್ಯ ಸರಾಸರಿ 1500 ಜನರಿಗೆ ತಿಂಡಿ, ಊಟ ನೀಡಲಾಗುತ್ತಿದೆ. ಆದರೆ, ಪ್ರಮುಖ ವಾಣಿಜ್ಯ ಚಟುವಟಿಕೆ ತಾಣವಾದ ಕೆ.ಆರ್.ಮಾರುಕಟ್ಟೆಯಲ್ಲಿರುವ ಧರ್ಮರಾಯಸ್ವಾಮಿ ದೇವಾಲಯ ವಾಡ್'ನ ಕ್ಯಾಂಟೀನ್‌'ನಲ್ಲಿ ನಿತ್ಯ 3500ಕ್ಕೂ ಹೆಚ್ಚು ಜನರಿಗೆ ತಿಂಡಿ, ಊಟ ನೀಡಲಾಗುತ್ತಿದೆ. ಅದೇ ರೀತಿ ಮೆಜೆಸ್ಟಿಕ್‌'ನಲ್ಲಿ ಇತ್ತೀಚೆಗಷ್ಟೆ ಆರಂಭಿಸಲಾಗಿರುವ ಗಾಂಧಿನಗರ ವಾರ್ಡ್ ಇಂದಿರಾ ಕ್ಯಾಂಟೀನ್, ಅಲ್ಲದೆ ಗರುಡಾಚಾರ್ ಪಾಳ್ಯ, ದೊಡ್ಡನೆಕ್ಕುಂದಿ, ಮಾರತ್ತಹಳ್ಳಿ ವಾರ್ಡುಗಳಲ್ಲಿನ ಇಂದಿರಾ ಕ್ಯಾಂಟೀನ್‌'ಗಳಲ್ಲೂ ನಿತ್ಯ

ತಲಾ 2000ಕ್ಕೂ ಹೆಚ್ಚು ಜನರಿಗೆ ಊಟ, ಉಪಾಹಾರ ನೀಡಲಾಗುತ್ತಿದೆ. ಆದರೂ, ಈ ಕ್ಯಾಂಟೀನ್‌'ಗಳಲ್ಲಿ ದಿನ ಕಳೆದಂತೆ ಬೇಡಿಕೆ ಇನ್ನೂ ಹೆಚ್ಚುತ್ತಿದೆ. ಇದು, ಬಿಬಿಎಂಪಿಯೇ ನೀಡಿರುವ ಅಧಿಕೃತ ಮಾಹಿತಿ. ಕೆ.ಆರ್.ಮಾರುಕಟ್ಟೆಯ ಸಿಗ್ನಲ್ ಬಳಿಯೇ ನಿರ್ಮಿಸಲಾಗಿರುವ ಈ ಇಂದಿರಾ ಕ್ಯಾಂಟೀನ್ ಆರಂಭಿಸಿ ತಿಂಗಳಷ್ಟೇ ಕಳೆದಿದೆ. ತೀವ್ರ ಬೇಡಿಕೆ ಹಿನ್ನೆಲೆಯಲ್ಲಿ ಒಂದೇ ತಿಂಗಳಲ್ಲಿ ತಿಂಡಿ, ಊಟದ ಸಂಖ್ಯೆಯನ್ನು 3500ಕ್ಕೆ ಹೆಚ್ಚಿಸಲಾಗಿದೆ. ಬೆಳಗ್ಗೆ ಮತ್ತು ಮಧ್ಯಾಹ್ನ ತಲಾ 1,200 ಜನರಿಗೆ ತಿಂಡಿ, ಊಟ, ರಾತ್ರಿ 1000ಕ್ಕೂ ಹೆಚ್ಚು ಜನರಿಗೆ ಊಟ ವಿತರಣೆ ಮಾಡಲಾಗುತ್ತಿದೆ. ಮಾರುಕಟ್ಟೆಯಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು, ಬಡ ವ್ಯಾಪಾರಿಗಳು, ಗ್ರಾಹಕರು ಹಾಗೂ ಈ ಭಾಗದಲ್ಲಿರುವ ವಾಣಿವಿಲಾಸ, ವಿಕ್ಟೋರಿಯಾ ಆಸ್ಪತ್ರೆಗಳಿಗೆ ಬರುವ ಜನರು ಇಲ್ಲಿಗೆ ಬರುತ್ತಾರೆ. ಹಾಗಾಗಿ ಬೇಡಿಕೆ ಹೆಚ್ಚು ಎನ್ನುತ್ತಾರೆ ಸಿಬ್ಬಂದಿ.

ಅದೇ ರೀತಿ ಮೆಜೆಸ್ಟಿಕ್‌'ನ ಗಾಂಧಿನಗರ ವಾರ್ಡ್ ಇಂದಿರಾ ಕ್ಯಾಂಟೀನ್, ಗರುಡಾಚಾರ್ ಪಾಳ್ಯ, ದೊಡ್ಡನೆಕ್ಕುಂದಿ ಮತ್ತು ಮಾರತ್ತಹಳ್ಳಿ ವಾರ್ಡುಗಳ ಕ್ಯಾಂಟೀನ್‌ಗಳಲ್ಲಿ ಬೆಳಗ್ಗೆ ಮತ್ತು ಮಧ್ಯಾಹ್ನ ತಲಾ 700 ಜನರಿಗೆ ತಿಂಡಿ, ಊಟ ಹಾಗೂ ರಾತ್ರಿ 500ಕ್ಕೂ ಹೆಚ್ಚು ಜನರಿಗೆ ಊಟ ನೀಡಲಾಗುತ್ತಿದೆ. ಒಟ್ಟು ನಾಲ್ಕು ಕ್ಯಾಂಟೀನ್‌'ಗಳಲ್ಲಿ ನಿತ್ಯ ತಲಾ 2000ಕ್ಕೂ ಹೆಚ್ಚು ಜನರಿಗೆ ತಿಂಡಿ, ಊಟ ನೀಡಲಾಗುತ್ತಿದೆ. ಆದರೂ, ನೂರಾರು ಜನ ನಿತ್ಯ ಬಂದು ವಾಪಸ್ ಹೋಗುತ್ತಾರೆ ಎನ್ನುತ್ತಾರೆ ಕ್ಯಾಂಟೀನ್‌'ಗಳ ಸಿಬ್ಬಂದಿ.

ಊಟ, ಉಪಾಹಾರ ಮತ್ತೆ ಹೆಚ್ಚಳ: ಬಿಬಿಎಂಪಿಯ ಎಲ್ಲಾ 198 ವಾರ್ಡುಗಳಲ್ಲೂ ಇಂದಿರಾ ಕ್ಯಾಂಟೀನ್ ಆರಂಭಿಸುವುದಾಗಿ ಹೇಳಿದ್ದ ಸರ್ಕಾರ, ಈವರೆಗೆ 165 ವಾರ್ಡುಗಳಲ್ಲಿ ಕ್ಯಾಂಟೀನ್‌'ಗಳನ್ನು ಆರಂಭಿಸಿದೆ. 18 ವಾರ್ಡುಗಳಲ್ಲಿ ಸ್ಥಳಾವಕಾಶದ ಕೊರತೆಯಿಂದ ಮೊಬೈಲ್ ಕ್ಯಾಂಟೀನ್ ಆರಂಭಿಸಲು ನಿರ್ಧರಿಸಿದೆ. ಆ ಪ್ರಕಾರ, ಆರಂಭದಲ್ಲಿ ಪ್ರತೀ ಕ್ಯಾಂಟೀನ್‌'ನಲ್ಲಿ ನಿತ್ಯ 900 ಜನರಿಗೆ ನೀಡುತ್ತಿದ್ದ ತಿಂಡಿ, ಊಟದ ಸಂಖ್ಯೆಯನ್ನು ಸೆಪ್ಟೆಂಬರ್‌ನಲ್ಲಿ ತಲಾ 1200ರಿಂದ 1500ರ ವರೆಗೆ ಹೆಚ್ಚಳ ಮಾಡಿ ಬಿಬಿಎಂಪಿ ಆದೇಶ ಮಾಡಿತ್ತು. ಇದೀಗ ಮತ್ತಷ್ಟು ಬೇಡಿಕೆ ಕಂಡುಬಂದ ಹಿನ್ನೆಲೆಯಲ್ಲಿ ಅಲ್ಲಿ ನಿತ್ಯ 1800 ಜನರ ವರೆಗೆ ಊಟ ತಿಂಡಿ ವಿತರಣೆಗೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಆದೇಶ ಮಾಡಿದ್ದಾರೆ.

ವರದಿ: ಲಿಂಗರಾಜು ಕೋರಾ, ಕನ್ನಡಪ್ರಭ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕೆಸು ಧ್ವನಿಯಲ್ಲಿ ಮಾತಾಡಿದ್ದರು ಎನ್ನುವ ಆರೋಪ.. 'ಬಂಗಾರಿ' ಕೇಸ್‌ನಲ್ಲಿ ನಟ ಧರ್ಮಗೆ ಧ್ವನಿ ಪರೀಕ್ಷೆ?
Vande Mataram ಎರಡು ಪದಗಳ ಅರ್ಥ ವಿವರಿಸಿದ ಇಕ್ರಾ ಹಸನ್: ಸಂಸದೆಯ ಮಾತು ವೈರಲ್