ಸಂಪುಟ ವಿಸ್ತರಣೆ ಬೆನ್ನಲ್ಲೇ ದಿನೇಶ್‌ ಗುಂಡೂರಾವ್ ಎಚ್ಚರಿಕೆ

By Web DeskFirst Published Dec 23, 2018, 9:46 AM IST
Highlights

ಕರ್ನಾಟಕ ಸಂಪುಟ ವಿಸ್ತರಣೆಯಾಗಿದ್ದು,  ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಖಡಕ್ ಎಚ್ಚರಿಕೆಯೊಂದನ್ನು ನೀಡಿದ್ದಾರೆ. 

ಬೆಂಗಳೂರು :  ಇಲ್ಲಿಯವರೆಗೆ ಪಕ್ಷವಿರೋಧಿ ಚಟುವಟಿಕೆಗಳನ್ನು ಸಹಿಸಿಕೊಂಡು ಸಾಕಾಗಿದೆ. ಸಚಿವ ಸ್ಥಾನ, ನಿಗಮ ಮಂಡಳಿಯ ಆಕಾಂಕ್ಷಿಗಳು ಇನ್ನೇನಾದರೂ ಅಂತಹ ಚಟುವಟಿಕೆಗೆ ಮುಂದಾದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಮುಲಾಜಿಲ್ಲದೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರ ಇರುವುದು ಕೆಲವರನ್ನು ಮಾತ್ರ ತೃಪ್ತಿಪಡಿಸೋಕೆ ಅಲ್ಲ. ಹೈಕಮಾಂಡ್‌ ಸೂಚನೆಯಂತೆ ಮಂತ್ರಿಮಂಡಲದಲ್ಲಿ ಕಾಂಗ್ರೆಸ್‌ ಪಾಲಿಗೆ ಇದ್ದ ಮಿತಿ ನೋಡಿಕೊಂಡು ಪ್ರದೇಶ, ಜಾತಿವಾರು ಪ್ರಾಧಾನ್ಯತೆ ನೀಡಿ ಸಂಪುಟ ವಿಸ್ತರಣೆ ಮಾಡಲಾಗಿದೆ. ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚಿನ ಸ್ಥಾನ ನೀಡಿ ಹಿಂದೆ ಆ ಭಾಗಕ್ಕೆ ಆಗಿದ್ದ ಅನ್ಯಾಯ ಸರಿಪಡಿಸಲಾಗಿದೆ. ಎಲ್ಲರಿಗೂ ಒಮ್ಮೆಲೇ ಸಚಿವ ಸ್ಥಾನ ನೀಡಲು ಸಾಧ್ಯವಾಗುವುದಿಲ್ಲ. ಇದನ್ನು ಅರ್ಥಮಾಡಿಕೊಳ್ಳಬೇಕು ಎಂದರು.

ಎಲ್ಲರಿಗೂ ಸಚಿವ ಸ್ಥಾನ ನೀಡಲು ಸಾಧ್ಯವಾಗುವುದಿಲ್ಲ ಎನ್ನುವ ಕಾರಣಕ್ಕೆ ಕೆಲವರಿಗೆ ರಾಜಕೀಯ ಕಾರ್ಯದರ್ಶಿ, ಇನ್ನು ಕೆಲವರಿಗೆ ಸಂಸದೀಯ ಕಾರ್ಯದರ್ಶಿ, ನಿಗಮ ಮಂಡಳಿಯಲ್ಲಿ ಅವಕಾಶ ನೀಡಿದ್ದೇವೆ. ಸುಮಾರು 40 ಜನರಿಗೆ ಸರ್ಕಾರದ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಅವಕಾಶ ನೀಡಲಾಗಿದೆ. ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕು. ಅದನ್ನು ಬಿಟ್ಟು ಪಕ್ಷಕ್ಕೆ ಧಕ್ಕೆಯಾಗುವಂತಹ ಹೇಳಿಕೆಗಳನ್ನು ನೀಡುವುದಾಗಲಿ, ಪಕ್ಷದ ಶಿಸ್ತು ಮೀರಿ ಪಕ್ಷಾಂತರದಂತಹ ಕೆಟ್ಟನಿರ್ಧಾರಗಳನ್ನು ತೆಗೆದುಕೊಳ್ಳುವುದಾಗಲೀ ಮಾಡಿದರೆ ಮುಲಾಜಿಲ್ಲದೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮೇನಲ್ಲಿ ಸಚಿವರ ಮೌಲ್ಯಮಾಪನ

ಸಚಿವ ಸ್ಥಾನ ಸಿಗದವರು ಆತಂಕ ಪಡಬೇಕಾಗಿಲ್ಲ. ಲೋಕಸಭೆ ಚುನಾವಣೆ ಬಳಿಕ ಪಕ್ಷ ಸಚಿವರ ಮೌಲ್ಯಮಾಪನ ನಡೆಸಲಿದ್ದು, ಸಚಿವರು ತಮ್ಮ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ವಿಫಲವಾಗಿರುವುದು ಕಂಡುಬಂದರೆ ಪಕ್ಷ ಅಂತಹವರ ಬದಲಾವಣೆ ಮಾಡಲಿದೆ. ಸಚಿವ ಸ್ಥಾನಕ್ಕೆ ಅರ್ಹರಾದ ಸಾಕಷ್ಟುಜನ ಶಾಸಕರು ಪಕ್ಷದಲ್ಲಿದ್ದಾರೆ. ಅಂತಹವರಿಗೆ ಆಗ ಪಕ್ಷ ಜವಾಬ್ದಾರಿ ನೀಡಲಿದೆ ಎಂದರು.

ಸಚಿವ ರಮೇಶ್‌ ಜಾರಕಿಹೊಳಿ ಅವರು ತಮ್ಮ ಇತರೆ ಕಾರ್ಯದೊತ್ತಡದ ನಡುವೆ ಸಮರ್ಥವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿಲ್ಲ ಎಂದಿದ್ದರು. ಜಿಲ್ಲೆಯ ಅಭಿವೃದ್ಧಿ ಕೂಡ ಪ್ರಮುಖ, ಪಕ್ಷದಲ್ಲಿ ಶಿಸ್ತು ಇರಬೇಕು. ಹೈಕಮಾಂಡ್‌ ನಿರ್ಧಾರದಂತೆ ಅವರನ್ನು ಸಂಪುಟದಿಂದ ಕೈಬಿಡಲಾಗಿದೆ. ಇದರಲ್ಲಿ ಸಚಿವ ಡಿ.ಕೆ.ಶಿವಕುಮಾರ್‌ ಅವರ ಪಾತ್ರ ಏನೂ ಇಲ್ಲ. ಇನ್ನು ಆರ್‌.ಶಂಕರ್‌ ಪಕ್ಷದ ಸದಸ್ಯತ್ವ ಪಡೆದಿರಲಿಲ್ಲ. ಸಾಕಷ್ಟುಒತ್ತಡ ಬಂದ ಹಿನ್ನೆಲೆಯಲ್ಲಿ ಅವ​ರನ್ನು ಕೈಬಿಡಲಾಗಿದೆ. ಸಂಪುಟ ವಿಸ್ತರಣೆಯಿಂದ ಸರ್ಕಾರಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ. ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧವಾಗಿರಬೇಕು ಎಂದರು.

ಪಕ್ಷದ ಹಿರಿಯ ನಾಯಕ ಎಚ್‌.ಕೆ. ಪಾಟೀಲ್‌ ಅವರನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಪಕ್ಷ ನೇಮಿಸಿದೆ. ಇದರಿಂದ ಕೆಪಿಸಿಸಿ ತಂಡಕ್ಕೆ ಹೆಚ್ಚು ಶಕ್ತಿ ಬಂದಿದೆ ಎಂದು ದಿನೇಶ್‌ ಗುಂಡೂರಾವ್‌ ಇದೇ ವೇಳೆ ಹೇಳಿದರು.

ಮೇನಲ್ಲಿ ಮತ್ತೆ ಪುನಾರಚನೆ

ಸಚಿವ ಸ್ಥಾನ ಸಿಗದವರು ಆತಂಕ ಪಡಬೇಕಾಗಿಲ್ಲ. ಲೋಕಸಭೆ ಚುನಾವಣೆ ಬಳಿಕ ಪಕ್ಷ ಸಚಿವರ ಮೌಲ್ಯಮಾಪನ ನಡೆಸಲಿದ್ದು, ಅಸಮರ್ಥ ಸಚಿವರನ್ನು ಬದಲಾವಣೆ ಮಾಡಲಾಗುವುದು. ಸಚಿವ ಸ್ಥಾನಕ್ಕೆ ಅರ್ಹರಾದ ಸಾಕಷ್ಟುಜನ ಶಾಸಕರು ಪಕ್ಷದಲ್ಲಿದ್ದಾರೆ. ಅಂತಹವರಿಗೆ ಆಗ ಪಕ್ಷ ಜವಾಬ್ದಾರಿ ನೀಡಲಿದೆ.

- ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

click me!