
ರೈಲ್ವೆ ಟಿಕೆಟ್ ದರವನ್ನು ಸರ್ಕಾರ ಆಗಾಗ ಹೆಚ್ಚಿಸುತ್ತಲೇ ಇರುತ್ತದೆ. ಆದರೆ, ರೈಲ್ವೇ ಪ್ಲಾಟ್‌ಫಾರ್ಮ್ ಟಿಕೆಟ್ ದರವನ್ನೂ ಶೇ.7ರಷ್ಟು ಹೆಚ್ಚಿಸಲಾಗಿದೆ. ಕೇವಲ 3 ರು.ಗೆ ಸಿಗುತ್ತಿದ್ದ ರೈಲ್ವೆ ಟಿಕೆಟ್ ದರವನ್ನು ಕೇಂದ್ರದ ಮೋದಿ ಸರ್ಕಾರ 20 ರು.ಗೆ ಏರಿಸಿದೆ ಎಂಬ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ದಸರಾ, ದುರ್ಗಾ ಪೂಜಾ ಮತ್ತು ದೀಪಾವಳಿಗೂ ಮುನ್ನ ಪ್ಲಾಟ್‌ಫಾರ್ಮ್ ಟಿಕೆಟ್ ದರವನ್ನು ಹೆಚ್ಚಿಸಲಾಗಿದೆ. ವಿಜಯವಾಡ ಜಂಕ್ಷನ್ ಪ್ಲಾಟ್‌ಪಾರ್ಮ್‌ನಲ್ಲಿ ಯಾತ್ರಿಯೊಬ್ಬರು 2 ಗಂಟೆಯ ಅವಧಿಗೆ ಕೊಂಡ ಪ್ಲಾಟ್'ಫಾರ್ಮ್ ಟಿಕೆಟ್‌ನಲ್ಲಿ 20 ರು. ಎಂದು ಬರೆಯಲಾಗಿದೆ. ಈ ಟಿಕೆಟ್ ಈಗ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂದೇಶದಲ್ಲಿ, ಭ್ರಷ್ಟಾಚಾರಿಗಳ ರಾಜ್ಯದಲ್ಲಿ 3 ರು.ಗೆ ಸಿಗುತ್ತಿದ್ದ ಪ್ಲಾಟ್‌ಫಾರ್ಮ್ ಟಿಕೆಟ್, ದೇಶಭಕ್ತರ ರಾಜ್ಯದಲ್ಲಿ ಹಬ್ಬಗಳ ಋತುವಿನಲ್ಲಿ 20 ರು.ಗೆ ಏರಿಕೆ ಮಾಡಲಾಗಿದೆ ಎಂಬ ಟೀಕೆಗಳು ಕೇಳಿ ಬಂದಿವೆ.
ಆದರೆ ನಿಜ ಏನೆಂದರೆ, 2015 ಏ.2ರಿಂದ ದೇಶದೆಲ್ಲೆಡೆ ರೈಲ್ವೆ ಪ್ಲಾಟ್‌ಫಾರ್ಮ್ ಟಿಕೆಟ್ ದರವನ್ನು 10 ರು.ಗೆ ಏರಿಸಲಾಗಿದೆ. ಹಾಗಾದರೆ, ಆಂಧ್ರ ಪ್ರದೇಶದ ವಿಜಯವಾಡ ರೈಲ್ವೆ ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್ 20 ರು.ನಲ್ಲಿ ಏಕೆ ಮಾರಾಟವಾಗುತ್ತಿದೆ? ಈ ಬಗ್ಗೆ ಉತ್ತರ ರೈಲ್ವೆ ಮುಖ್ಯ ಸೂಚನಾ ಅಧಿಕಾರಿ ನೀರಜ್ ಶರ್ಮಾ ಅವರನ್ನು ಪ್ರಶ್ನಿಸಲಾಯಿತು. ಆಗ ಅವರು ಹೇಳಿದ್ದೇನೆಂದರೆ, ಕೆಲವು ರಾಜ್ಯಗಳಲ್ಲಿ ಪ್ರಯಾಣಿಕರ ದಟ್ಟಣೆ ತಗ್ಗಿಸಲು ಪ್ಲಾಟ್ ಫಾರ್ಮ್ ಟಿಕೆಟ್ ದರ ಏರಿಸಲಾಗುತ್ತದೆ. ದಟ್ಟಣೆ ಕಡಿಮೆ ಆದ ಬಳಿಕ ಅದನ್ನು 10 ರು.ಗೆ ಇಳಿಸಲಾಗುತ್ತದೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವಂತೆ ಪ್ಲಾಟ್‌ಫಾರ್ಮ್ ಟಿಕೆಟ್ 20 ರು.ಗೆ ಏರಿಸಿದ್ದು ಸುಳ್ಳು ಎಂದು ತಿಳಿಸಿದ್ದಾರೆ. ಜೊತೆಗೆ ಅವರು ಈ ಪ್ರತಿಕ್ರಿಯೆ ನೀಡಿದ್ದು ಕಳೆದ ವರ್ಷ.
(ಕನ್ನಡಪ್ರಭ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.