
-ಕರ್ನಲ್ ಕಂಡ್ರತಂಡ ಚಿಣ್ಣಪ್ಪ ಸುಬ್ಬಯ್ಯ
ಯುದ್ಧಭೂಮಿಯಲ್ಲಿ ಎದುರಾಳಿಗಳು ಭೂಮಿಯೊಳಗೆ ಅಡಗಿಸಿಟ್ಟಿರುವ ಸಿಡಿಮದ್ದು ತಪಾಸಣೆ ನಡೆಸಿ, ಎದುರಾಳಿಗಳ ವೇಗವನ್ನು ನಿಯಂತ್ರಿಸಿ, ನಮ್ಮ ಸೇನಾಪಡೆಯ ವೇಗ ಹೆಚ್ಚಿಸುವುದು ನನ್ನ ಹಾಗೂ ತಂಡದವರ ಪ್ರಮುಖ ಕೆಲಸವಾಗಿತ್ತು. ಆದರೆ ಯುದ್ಧದಲ್ಲಿ ಭಾಗವಹಿಸಿಲ್ಲ ಎಂಬುದು ಕೊರಗಾಗಿಯೇ ಉಳಿದಿದೆ. 1968ರಲ್ಲಿ ಸೇನೆಗೆ ಸೇರಿ 1995ರಲ್ಲಿ ನಿವೃತ್ತಿಗೊಂಡ 27 ವರ್ಷಗಳ ಸೇನಾಜೀವನ ನನ್ನದು.
ಮೆಡ್ರಾಸ್‌ನಲ್ಲಿ ಬಿಎಸ್ಸಿ ಪದವಿ ಮುಗಿಸಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದೆ. 1968ರಲ್ಲಿ ನನ್ನ ಕಾಲೇಜಿನಲ್ಲಿದ್ದ ಮಂಗಳೂರಿನ ಗೆಳೆಯನೊಬ್ಬ, ‘‘ಸೇನೆಯಲ್ಲಿ ಸೇರುವಂತೆ ಜಾಹೀರಾತು ಬಂದಿದೆ. ನಾವು ಸಂದರ್ಶನಕ್ಕೆ ಹೋಗೋಣ,'' ಎಂದು ಕರೆದರು. ಸಂದರ್ಶನಕ್ಕೆ ತೆರಳಿದೆ. ಪ್ರಾಥಮಿಕ ಹಂತದ ಸಂದರ್ಶನದಲ್ಲಿ ಮದ್ರಾಸ್'ನಲ್ಲಿ ನಾವಿಬ್ಬರು ಆಯ್ಕೆಯಾದೆವು. ಮೂರು ತಿಂಗಳ ನಂತರ ಎಸ್‌ಎಸ್‌ಬಿ ಮೀರತ್‌ನಿಂದ ಕರೆ ಬಂತು. ಆರಂಭದಲ್ಲಿ ಉತ್ಸುಕತೆ ತೋರಿದ್ದ ನನ್ನ ಗೆಳೆಯ ಮಂಗಳೂರಿನ ಸುಬ್ಬಯ್ಯ ಶೆಟ್ಟಿ, ಸೇನೆಗೆ ಬರಲು ಹಿಂದೇಟು ಹಾಕಿದ್ದರು.
ಅವರು ತಂದೆ-ತಾಯಿಗೆ ಬಬ್ಬರೇ ಮಗನಾಗಿದ್ದರು. ಮೀರತ್‌ಗೆ ಹೋಗುವ ಬಗ್ಗೆ ನಾನು ಮನೆಗೆ ತಿಳಿಸಿರಲಿಲ್ಲ. ಸ್ನೇಹಿತರು ನೀಡಿದ ಹಣದಲ್ಲೇ ದೆಹಲಿಗೆ ಹೊರಟುನಿಂತಿದ್ದೆ. ನನ್ನ ಮತ್ತೊಬ್ಬ ಸ್ನೇಹಿತನ ತಂದೆ-ತಾಯಿ ದೆಹಲಿಯಲ್ಲಿ ವಾಸವಿದ್ದರು. ಮದ್ರಾಸ್'ನಿಂದ ದೆಹಲಿಗೆ ತೆರಳಿ ವಿಮಾನದಿಂದ ಇಳಿದ ನನ್ನನ್ನು ಅವರೇ ಬರಮಾಡಿಕೊಂಡರು. ಡಿಸೆಂಬರ್‌ನಲ್ಲಿ ತುಂಬಾ ಚಳಿ ಇತ್ತು. ಇದರ ಬಗ್ಗೆ ನನಗೆ ಅರಿವೇ ಇರಲಿಲ್ಲ. ಈ ಸಂದರ್ಭ ಗೆಳೆಯನ ಪೋಷಕರು ತಮ್ಮ ಕೋಟು ಧರಿಸಿಕೊಳ್ಳುವಂತೆ ನನಗೆ ನೀಡಿ ಮನೆಗೆ ಕರೆದುಕೊಂಡು ಹೋದರು. ಅಲ್ಲಿ ತಂಗಿದ್ದ ನನ್ನನ್ನು ಮರುದಿನ ಮೀರತ್ ಬಸ್ ಏರಿಸಿದರು.
ಮೀರತ್‌ನ ಎಸ್‌ಎಸ್‌ಬಿನಲ್ಲಿ ನನಗೆ ಮಾತ್ರ ಕಂಬಳಿ ಇರಲಿಲ್ಲ. ಸಂದರ್ಶನದಲ್ಲಿ ಎಲ್ಲರೂ ಚಳಿ ತಡೆದುಕೊಳ್ಳುವಷ್ಟುಉಡುಪು ಧರಿಸಿದ್ದರು. ಅಲ್ಲಿ ಮೈದಾನದಲ್ಲಿ ನಡೆದ ಸಂದರ್ಶನದಲ್ಲಿ ವಿವಿಧ ಬಗೆಯ ಆಯ್ಕೆ ಪ್ರಕ್ರಿಯೆ ನಡೆಯುತ್ತಿತ್ತು. ಗ್ರೂಪ್ ಟೆಸ್ಟಿಂಗ್ ಆಫೀಸರ್ ನಮ್ಮನ್ನು ಪರೀಕ್ಷಿಸಿದರು. ಮೂರು ಜನರ ಒಂದು ತಂಡ ಮಾಡಿದ್ದರು. ಹೀಗೆ ಮೂರು ದಿನ ಮೈದಾನದಲ್ಲಿ ವಿವಿಧ ರೀತಿಯಲ್ಲಿ ನಮ್ಮನ್ನು ತಪಾಸಣೆ ನಡೆಸಿದರು. ಮರುದಿನ ಸಂಜೆ 226 ಮಂದಿಯನ್ನು ಎ ಮತ್ತು ಬಿ ತಂಡವಾಗಿ ರಚಿಸಲಾಯಿತು. ಈ ಸಂದರ್ಭ ಅಧಿಕಾರಿಗಳು ಮೊದಲು ನನ್ನ ಹೆಸರನ್ನು ಕರೆದು, ಅಭಿಪ್ರಾಯ ಕೇಳಿದರು: ‘‘ಒಬ್ಬ ಕೆಡೆಟ್‌ಗೆ ಒಂದು ದಿನಕ್ಕೆ 15 ರುಪಾಯಿಗೆ ಊಟ ಕೊಡುವ ವ್ಯವಸ್ಥೆ ಇಲ್ಲಿ ಇಲ್ಲ!'' ಎಂದು ಹೇಳಿದೆ. ಹೊರಬಂದಾಗ ಉಳಿದ ಅಭ್ಯರ್ಥಿಗಳು, ನನ್ನ ಉತ್ತರ ಕೇಳಿ, ‘‘ನಿನ್ನ ಕಾಲಿಗೆ ನೀನೇ ಪೆಟ್ಟು ಮಾಡಿಕೊಂಡೆಯಲ್ಲ!'' ಎಂದರು.
ಬಿ ತಂಡದಲ್ಲಿದ್ದ 113 ಮಂದಿಯಲ್ಲಿ ಯಾರನ್ನೂ ಸೇನೆಗೆ ಆಯ್ಕೆ ಮಾಡಿಕೊಂಡಿರಲಿಲ್ಲ. ಎ ತಂಡದಲ್ಲಿ ಮೂರು ಜನರನ್ನು ಆಯ್ಕೆ ಮಾಡಿಕೊಂಡರು. ಅದರಲ್ಲಿ ನಾನೂ ಒಬ್ಬ. ಹೀಗೆ ಆಯ್ಕೆಯಾಗಿ ಮದ್ರಾಸ್'ನಲ್ಲೇ ತರಬೇತಿ ನಡೆಯಿತು. ಮದ್ರಾಸ್ ಆಫೀಸರ್ ಟ್ರೈನಿಂಗ್ ಸೆಂಟರ್‌ನಲ್ಲಿ ನಮ್ಮದು ಎಂಟನೇ ಬ್ಯಾಚ್. 400 ಕೆಡೆಟ್‌ಗಳಿದ್ದರು. ಹೀಗೆ ಒಂದು ವರ್ಷದ ತರಬೇತಿ ಪೂರ್ಣಗೊಳಿಸಿದೆ. ಒಟಿಎಸ್‌ನಲ್ಲಿರುವಾಗ ಹಾಕಿ, ಬಾಕ್ಸಿಂಗ್‌ನಲ್ಲಿದ್ದೆ. ಇದಾದ ನಂತರ ಎಲ್ಲಿಗೆ ಹೋಗಬೇಕೆಂದು ಕೇಳಿದ್ದರು. ನನಗೆ ಇನ್‌ಫ್ರಂಟ್‌ಗೆ ಹೋಗಬೇಕೆಂಬ ಆಸೆ ಇತ್ತು. ಅದನ್ನೇ ಬರೆದು ಕಳಿಸಿದೆ. ಆದರೆ ಅಧಿಕಾರಿಗಳು ಎಂಜಿನಿಯರಿಂಗ್ ವಿಭಾಗಕ್ಕೆ ಕಳುಹಿಸಿದರು. ಭಾರತೀಯ ಸೇನೆಯಲ್ಲಿ ಮೂರು ಎಂಜಿನಿಯರಿಂಗ್ ವಿಭಾಗಗಳಿದ್ದು, ಮದ್ರಾಸ್, ಬಾಂಬೆ ಹಾಗೂ ಬೆಂಗಾಲ್ ಎಂಜಿನಿಯರ್ ಟ್ರೈನಿಂಗ್ ಸೆಂಟರ್ ಇತ್ತು. ನನ್ನನ್ನು ಬಾಂಬೆ ಟ್ರೈನಿಂಗ್ ಸೆಂಟರ್‌ಗೆ ಕಳಿಸಿದರು.
ಇಲ್ಲಿ ನಮ್ಮ ಕೆಲಸ ಮುಖ್ಯವಾಗಿ ಶತ್ರುಗಳು ಮುಂದೆ ಬಾರದಂತೆ ಅವರ ವೇಗ ನಿಯಂತ್ರಿಸುವುದೇ ಆಗಿತ್ತು. ನೆಲದೊಳಗೆ ಅಡಗಿಸಿಟ್ಟಿರುವ ಸಿಡಿಮದ್ದು ಗುರುತಿಸುವುದು, ಎದುರಾಳಿಗಳ ಸೇತುವೆ ನೆಲಸಮ ಮಾಡುವುದು, ಬಾಂಬ್ ದಾಳಿ ಮಾಡುವುದು ಮುಖ್ಯ ಗುರಿ. ಎರಡನೆಯದಾಗಿ ನಮ್ಮ ಸೇನೆಯ ವೇಗ ಹೆಚ್ಚಿಸುವುದು. ಸೇತುವೆಗಳನ್ನು ನಿರ್ಮಾಣ ಮಾಡುವುದು, ಸೇಫ್ ಲೈನ್ ಮಾಡಿ ಟ್ಯಾಂಕ್‌ಗಳು ಸುಗಮವಾಗಿ ತೆರಳಲು ರಸ್ತೆ ಮಾಡಿಕೊಡುವುದು ಇತ್ಯಾದಿ. ದಾರಿ ಮಾಡಿಲ್ಲದಿದಲ್ಲಿ ನೆಲಬಾಂಬ್ ಸಿಡಿದು ಟ್ಯಾಂಕ್ ಅಲ್ಲೇ ಇರುತ್ತಿತ್ತು. ಈ ಸಂದರ್ಭ ಎದುರಾಳಿಗಳು ಅಲ್ಲೇ ದಾಳಿ ಮಾಡುತ್ತಿದ್ದರು.
ಬಾಂಬೆ ಎಂಜಿನಿಯರಿಂಗ್ ಗ್ರೂಪ್ ಪುಣೆಯ ಹಾಕಿ ತಂಡದ ಕ್ಯಾಪ್ಟನ್ ಆಗಿದ್ದೆ ನಾನು. ಬೆಳಗ್ಗೆ ಎದ್ದು ವ್ಯಾಯಾಮ ಮುಗಿಸಿ ಸಂಸ್ಥೆಯೊಂದಿಗೆ ಆಡುವುದು ವಾಡಿಕೆ. ಬ್ಯಾಡ್ಮಿಂಟನ್ ಆಡುತ್ತಿದ್ದೆ. ನಂತರ 1973ರಲ್ಲಿ ನಾಗಾಲ್ಯಾಂಡ್‌ನಲ್ಲಿ ಕೆಲಸ ಮಾಡಬೇಕಾಗಿ ಬಂತು. ಅಲ್ಲಿ ಸ್ಥಳೀಯ ಕೆಲವರು ಕಾನೂನುಬಾಹಿರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿದ್ದರು. ಅವರನ್ನು ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದೆ. ಗ್ರಾಮದಲ್ಲಿದ್ದರೂ ನಾಗಾಗಳು ಸರ್ಕಾರಿ ವಿರೋಧಿಯಾಗಿ ಕೆಲಸ ಮಾಡುತ್ತಿದ್ದರು.
ಇಲ್ಲಿ ಕ್ರೈಸ್ತರು ಹೆಚ್ಚಿನ ಸಂಖ್ಯೆಯವರಿದ್ದರು. ಭಾನುವಾರ ಚರ್ಚ್'ನಲ್ಲಿ ಪ್ರಾರ್ಥನೆಯಾಗುವ ಸಂದರ್ಭ ನಾಗಾಲ್ಯಾಂಡ್‌ನ ಸಚಿವರಿಗೆ ಗುಂಡು ಹೊಡೆದಿದ್ದರು ಒಮ್ಮೆ. ಅವರನ್ನು ನಾವು ಸೆರೆಹಿಡಿದರೂ 24 ಗಂಟೆಯೊಳಗೆ ಬಿಡಬೇಕೆಂದು ಸರ್ಕಾರದ ಆದೇಶವಿತ್ತು. ಅವರ ಚಟುವಟಿಕೆಯ ಬಗ್ಗೆ ಮಾಹಿತಿ ತಿಳಿದುಕೊಳ್ಳುವ ನಿಟ್ಟಿನಲ್ಲಿ ಅಲ್ಲಿನ ಸ್ಥಳೀಯರನ್ನು ನಾವು ಅವಲಂಬಿಸುತ್ತಿದ್ದೆವು. ಅವರನ್ನು ಸೆರೆಹಿಡಿಯಲು ಮದ್ರಾಸ್ ರೆಜಿಮೆಂಟ್‌ನಿಂದ ತಂಡವೊಂದನ್ನು ಕಳುಹಿಸಿದ್ದರು. ಮಾಹಿತಿಯ ಮೇರೆಗೆ ಸ್ಥಳವೊಂದರಲ್ಲಿ ತೆರಳಿದ್ದ ಸಂದರ್ಭ ಅಡುಗೆ ಮಾಡಿದ ಬಿಸಿಕೆಂಡ ಹಾಗೇ ಇತ್ತು. ಆದರೆ ಅವರು ಅಲ್ಲಿಂದ ಕಾಲ್ಕಿತ್ತಿದ್ದರು. ನಂತರ ವಾಪಸಾಗುವಾಗ ಜಲಪಾತವೊಂದು ಸಿಕ್ಕಿತ್ತು. ನಾಗಾ ಮಂದಿ ಅಲ್ಲಿಯೇ ಅವಿತಿದ್ದಿದ್ದು ಯಾರಿಗೂ ಗೊತ್ತಾಗಿರಲಿಲ್ಲ. ಈ ಸಂದರ್ಭ ಜಲಪಾತದ ಒಳಗಿನಿಂದ ಎಂಟು ಮಂದಿ ಯೋಧರಿಗೆ ಗುಂಡು ಹೊಡೆದರು. ನಂತರ ಸೈನಿಕರ ಆಯುಧಗಳನ್ನು ತೆಗೆದುಕೊಂಡು ಓಡಿದ್ದರು.
1974ರಲ್ಲಿ ಇಂದಿರಾ ಗಾಂಧಿ ಅವಧಿಯಲ್ಲಿ ಸರ್ಕಾರ ನಾಗಾ ಅವರ ಪರವಾಗಿತ್ತು. ಒಂದು ಗ್ರಾಮಕ್ಕೆ ಒಂದು ಪೋಸ್ಟ್ ಇರುತ್ತಿತ್ತು. ನಾಗಾಗಳನ್ನು ನಿಯಂತ್ರಿಸಲು ಮನೆಗಳನ್ನು ಪರಿಶೀಲನೆ ಮಾಡಲಾಗುತ್ತಿತ್ತು. ನಂತರ ಒಂದು ದಿನ 123 ಮಂದಿಯ ನಾಗಾ ಜನರ ಒಂದು ತುಕಡಿ ಬರ್ಮಾಗೆ ತರಬೇತಿಗೆ ಹೋಗುತ್ತಿದೆ ಎಂಬ ಮಾಹಿತಿ ತಿಳಿದುಬಂದಿತ್ತು. ಚಿಂದ್‌ವಿಂದ್ ನದಿ ದಾಟಿದರೆ ಬರ್ಮಾಗೆ ಸುಲಭವಾಗಿ ತೆರಳಬಹುದಿತ್ತು. ಈ ಸಂದರ್ಭ ಜನರಲ್ ಆಫೀಸರ್
ನಿರ್ಧಾರ ತೆಗೆದುಕೊಂಡು ಹೆಲಿಕ್ಯಾಪ್ಟರ್ ಹಾಗೂ ಸೈನಿಕರು ಆ ತಂಡವನ್ನು ಹಿಂಬಾಲಿಸಿದರು. ಈ ಸಂದರ್ಭ ಚಿಂದ್‌ವಿಂದ್ ನದಿ ಬಂತು. ನೀರು ಹೆಚ್ಚಾಗಿದ್ದ ಕಾರಣ ಅವರಿಗೆ ನದಿ ದಾಟಲು ಸಾಧ್ಯವಿರಲಿಲ್ಲ. ಅವರು ಅಲ್ಲಿನ ಮೂರು ಪ್ರಮುಖ ವ್ಯಕ್ತಿಗಳನ್ನು ಕೊಂದು ಅವರ ಮುಖಕ್ಕೆ ದೊಡ್ಡ ಕಲ್ಲುಗಳಿಂದ ಜಜ್ಜಿದ್ದರು. ಗುರುತು ಸಿಗದಂತೆ ಅವರ ಮುಖಂಡರನ್ನೇ ಕೊಂದಿದ್ದರು. ನದಿ ದಾಟಲು ಪ್ರಯತ್ನ ಮಾಡುವ ಸಂದರ್ಭ 123 ಮಂದಿಯ ನಾಗಾ ತಂಡವನ್ನು ಹಿಡಿದುಕೊಂಡು ಬಂದೆವು. ನಂತರ ಹೆಲಿಕಾಪ್ಟರ್‌ನಲ್ಲಿ ಅವರನ್ನು ಸಾಗಿಸಿ ಜೈಲಿನಲ್ಲಿ ಇರಿಸಲಾಗಿತ್ತು. ಆ ತಂಡದಲ್ಲಿ ಸಣ್ಣ ಮಕ್ಕಳು ಹಾಗೂ ಮಹಿಳೆಯರೂ ಇದ್ದರು. ಇದೊಂದು ಪ್ರಮುಖ ಕಾರ್ಯಾಚರಣೆಯಲ್ಲಿ ನಾನು ಪಾಲ್ಗೊಂಡಿದ್ದೆ.
1973ರಲ್ಲಿ ತರಬೇತಿ ಕೇಂದ್ರದಲ್ಲಿ ಇದ್ದುದರಿಂದ ಜನರಿಗೆ ತರಬೇತಿ ನೀಡುವ ಕೆಲಸ ನಮ್ಮದು. ಹೆಚ್ಚೆಚ್ಚು ಜನರಿಗೆ ತರಬೇತಿ ನೀಡುತ್ತಿದ್ದೆವು. ಒಂದು ವರ್ಷದ ಕೋರ್ಸ್ ಅನ್ನು ಆರೇ ತಿಂಗಳಲ್ಲಿ ಮುಗಿಸಿ ಕಳಿಸುತ್ತಿದ್ದೆವು. ಇದರಿಂದ 1971ರ ಬಾಂಗ್ಲಾ ಯುದ್ಧದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. 1975ರಲ್ಲಿ ಚಂಡೀಗಡ ಸಮೀಪದ ಚಂದಿಮಂದಿರ್‌ನಲ್ಲಿ ಕಾರ್ಯ ನಿರ್ವಹಿಸಬೇಕಾಗಿತ್ತು. ಈ ಸಂದರ್ಭ ಎರಡು ವಾರ ರಜೆಯಲ್ಲಿ ಆಗಮಿಸಿದ್ದಾಗ ನನ್ನ ಮದುವೆಯೂ ಆಯಿತು. ಆರ್ಮಿಯಲ್ಲಿದ್ದುಕೊಂಡೇ ಎಂಜಿನಿಯರಿಂಗ್ ಅನ್ನು ಪುಣೆಯಲ್ಲಿ ಪೂರ್ಣಗೊಳಿಸಿದೆ.
1979ರಲ್ಲಿ ನಾರ್ಥ್ ಬೆಂಗಾಲ್‌ಗೆ ನನ್ನನ್ನು ಕಳುಹಿಸಿದರು. ಅಲ್ಲಿರುವಾಗ ತರಬೇತಿ, ವ್ಯಾಯಾಮ, ಕೋರ್‌ನಲ್ಲಿ ಮೂರು ವಿಭಾಗ ಇತ್ತು. ವಿನಾಗುರಿಯಲ್ಲಿ ನಮ್ಮ ಕೆಲಸ ಮುಖ್ಯವಾಗಿ ಸೇತುವೆ ನಿರ್ಮಿಸುವುದು ಹಾಗೂ ನೆಲಬಾಂಬ್‌ಗಳನ್ನು ತೆಗೆಯುವುದೇ ಆಗಿತ್ತು. ಆ ವೇಳೆ ನಮ್ಮ ಕ್ಯಾಪ್ಟನ್ ಕಿರ್ಲೋಸ್ಕರ್ ಎಂಬುವವರು ನೆಲಬಾಂಬ್ ತಪಾಸಣೆ ಸಂದರ್ಭ ಸಾವನ್ನಪ್ಪಿದರು. ಒಂದು ನೆಲಬಾಂಬ್ ಸಿಡಿದಾಗ ಮೇಲೆ ಹಾರಿ, ಮತ್ತೆ ಕೆಳಕ್ಕೆ ಬಿದ್ದಾಗಲೂ ಇನ್ನೊಂದು ನೆಲಬಾಂಬ್ ತಲೆಯ ಬಳಿ ಸಿಡಿದು ಮೃತಪಟ್ಟರು. ಆ ಕಹಿನೆನಪು ಇನ್ನೂ ಕಣ್ಣ ಮುಂದಿದೆ.
ಜೆಎನ್‌ಕೆಯಲ್ಲಿ ನಂತರ ಕಾರ್ಯನಿರ್ವಹಿಸಲು ಅವಕಾಶ ಬಂದಿತು. ನಗರೋಟದಲ್ಲಿರುವಾಗ ಪ್ರವಾಹ ಬಂದಾಗ ನಮ್ಮ ಎಂಜಿನಿಯರಿಂಗ್ ವಿಭಾಗವನ್ನು ಕರೆದರು. 1987ರಲ್ಲಿ ಸೇತುವೆ ಮಾಡಲು ಕರೆದರು. ಜನರು, ವಾಹನ ದಾಟಲು ಸೇತುವೆ ವ್ಯವಸ್ಥೆ ಮಾಡಬೇಕಿತ್ತು. ಚಳಿಗಾಲದಲ್ಲಿ ಕಾಶ್ಮೀರದಲ್ಲಿ ಭೀಕರ ಶೀತ ಇರುತ್ತದೆ. ಅಲ್ಲಿನ ಜನ ಚಳಿಗಾಲದಲ್ಲಿ ಜಮ್ಮು ಪ್ರದೇಶಕ್ಕೆ ವಲಸೆ ಹೋಗುತ್ತಾರೆ. ದನಕರು, ಎಮ್ಮೆಗಳನ್ನೂ ಕರೆದುಕೊಂಡು ಹೋಗುತ್ತಾರೆ. 400ಕ್ಕೂ ಅಧಿಕ ಪ್ರಾಣಿಗಳನ್ನು ಸೇತುವೆ ನಿರ್ಮಿಸಿ ಹೊಳೆ ದಾಟಿಸಬೇಕಿತ್ತು. ಬೇಸಿಗೆಯಲ್ಲಿ ಅವರು ಮತ್ತೆ ಹಿಂತಿರುಗುತ್ತಾರೆ.
ಜೆಎನ್‌ಕೆಯ ಗವರ್ನರ್ ಜಗ್‌ಮೋಹನ್ ಆಗಮಿಸಿ, ‘‘ಎರಡು ವಾರದ ನಂತರ ಬರುತ್ತೇನೆ. ನೀನು ಎಂಜಿನಿಯರ್ ತಾನೇ? ಇಲ್ಲಿ ಶೀಘ್ರ ಸೇತುವೆ ನಿರ್ಮಿಸಬೇಕು,'' ಎಂದು ಸೂಚನೆ ನೀಡಿದ್ದರು. ಚಿನಾಬ್ ನದಿ 500 ಅಡಿ ಅಗಲ, 400 ಅಡಿ ಆಳವಿತ್ತು. ಇಲ್ಲಿ ಸೇತುವೆಯನ್ನು ನಿರ್ಮಿಸುವಂತೆ 45 ದಿನ ಕಾಲಾವಕಾಶ ನೀಡಿದ್ದರು. ನಾನು 33 ದಿನದಲ್ಲಿ ಪೂರ್ಣಗೊಳಿಸಿದೆ. ಬೆಟ್ಟದಿಂದ, ಹಿಮಪ್ರದೇಶದಿಂದ ಹರಿದು ಬರುವ ಚಿನಾಬ್ ನದಿ ನೀರು ತುಂಬಾ ಥಂಡಿ. ಆದರೆ ಯಾವ ಅಪಘಾತವೂ ಆಗಲಿಲ್ಲ. ಸೇತುವೆ ಉದ್ಘಾಟನೆಯಾಗಿ ಅಲ್ಲಿನ ಎಲ್ಲ ಪತ್ರಿಕೆಗಳಲ್ಲೂ ಪ್ರಶಂಸೆಯ ಸುದ್ದಿ ಬಂತು.
ಆ ಸಂದರ್ಭ ದೊಡ್ಡ ಕಲರ್ ಟಿವಿಯನ್ನು ನಮ್ಮ ತಂಡಕ್ಕೆ ಉಡುಗೊರೆಯಾಗಿ ನೀಡಿದ್ದರು. ಇದೇ ಕಾರ್ಯಕ್ಕಾಗಿ ನನಗೆ ರಾಷ್ಟ್ರಪತಿಯಿಂದ ‘ವಿಶಿಷ್ಟಸೇವಾ ಪದಕ' ಕೂಡ ಸಿಕ್ಕಿತು. ನಂತರ ಆ ಸೇತುವೆಗೆ ನನ್ನ ಹೆಸರನ್ನೇ ಇಟ್ಟರು.
ನಂತರ 1990ರಲ್ಲಿ ಮಿಜೋರಾಂನಲ್ಲಿ ಕೆಲಸವಾಯಿತು. ಎರಡು ವರ್ಷ ಅಲ್ಲಿದ್ದೆ. ನಂತರ ಕರ್ನಲ್ ಆಗಿ ಬಡ್ತಿ ಹೊಂದಿದೆ. ಅಷ್ಟೊತ್ತಿಗೆ ತಂದೆಯ ಆರೋಗ್ಯದಲ್ಲಿ ಏರುಪೇರು ಕಂಡಿತ್ತು. ನಂತರ 1993ರಲ್ಲಿ ಕೊಚ್ಚಿನ್‌ನಲ್ಲಿ ಎರಡು ವರ್ಷ ಕೆಲಸ ಮಾಡಿದೆ. 1995ರಲ್ಲಿ 27 ವರ್ಷದ ಸೇನಾ ಸೇವೆಯಿಂದ ವಾಪಸಾದೆ. 2002ರಿಂದ ವಿರಾಜಪೇಟೆ ತಾಲೂಕಿನ ಬೈರಂಬಾಡದಲ್ಲಿ ವಾಸಿಸುತ್ತಿದ್ದೇನೆ. ಮೂರು ಮಕ್ಕಳಿದ್ದು, ಹಿರಿಯ ಮಗಳು ಹಾಗೂ ಕಿರಿಯ ಮಗ ಎಂಜಿನಿಯರ್ ಆಗಿದ್ದಾರೆ. ಮತ್ತೊಬ್ಬ ಮಗಳು ಬ್ಯಾಂಕ್ ಉದ್ಯೋಗಿಯಾಗಿದ್ದಾಳೆ.
ಒಂದೇ ಒಂದು ಕೊರಗುಂಟು: ‘‘1971ರಲ್ಲಿ ಬಾಂಗ್ಲಾ ಉಗಮದ ಯುದ್ಧದಲ್ಲಿ ಭಾಗವಹಿಸಲು ನನಗೆ ಅವಕಾಶ ಸಿಕ್ಕಿತ್ತು. ಆದರೆ ಹಿರಿಯ ಅಧಿಕಾರಿಗಳು ಕೆಲಸವೊಂದನ್ನು ನಿಯೋಜಿಸಿದ್ದರು. ಯುದ್ಧದ ಹಿನ್ನೆಲೆಯಲ್ಲಿ ಕಿರಿಯರಿಗೆ ತರಬೇತಿ ನೀಡಿ ಕಳುಹಿಸಬೇಕಿತ್ತು. ಶ್ರೀಲಂಕಾ ಅಪರೇಷನ್‌ನಲ್ಲಿ ಕೋರ್‌ನಿಂದ ಯಾರೂ ಹೋಗಲಿಲ್ಲ. ಹಾಗಾಗಿ ನಾಗಾಲ್ಯಾಂಡ್ ಬಿಟ್ಟು ಬೇರೆ ಕಡೆ ಹೆಚ್ಚು ಕಾಲ ಸೇವೆ ಸಲ್ಲಿಸಲು ಅವಕಾಶ ದೊರಕಲೇ ಇಲ್ಲ. ಇದು ನನ್ನ ದುರದೃಷ್ಟವೆಂದೇ ಭಾವಿಸುತ್ತೇನೆ,'' ಎನ್ನುತ್ತಾರೆ ಕರ್ನಲ್ ಸುಬ್ಬಯ್ಯ.
ನಿವೃತ್ತಿ ನಂತರ ತಿಮ್ಮಯ್ಯ ಫೋರಂ
ಕರ್ನಲ್ ಸುಬ್ಬಯ್ಯನವರು ಸೇನೆಯಿಂದ ನಿವೃತ್ತಿ ಹೊಂದಿದ ನಂತರ, 2010ರಲ್ಲಿ ಅವರ ಸ್ನೇಹಿತರೆಲ್ಲರೂ ಸೇರಿಕೊಂಡು, ಕೊಡಗು ಜಿಲ್ಲೆಯ ಜನತೆಗೆ ಸೇನಾ ಕ್ಷೇತ್ರದ ವಿಚಾರವನ್ನು ತಿಳಿಸುವ ನಿಟ್ಟಿನಲ್ಲಿ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂ ಆರಂಭಿಸಿದ್ದಾರೆ. 2010ರಲ್ಲಿ ಜ.28ರಂದು ಕಾರ್ಯಪ್ಪ ಅವರ ಜನ್ಮದಿನ ಆಚರಿಸಿ, ಹೆಲಿಕಾಪ್ಟರ್‌ನಿಂದ ಪುಷ್ಪಮಳೆ ಸಮರ್ಪಿಸಲಾಯಿತು. ಇದನ್ನು ಕೊಡಗಿನ ಜನ ಕೊಂಡಾಡಿದರು. ಅಂದಿನ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಕಾರ್ಯಕ್ರಮಕ್ಕೆ ಆಗಮಿಸಿ, ಸೇನೆಗೆ ಸೇರುವವರಿಗೆ ತರಬೇತಿ ನೀಡುವ ನಿಟ್ಟಿನಲ್ಲಿ ಸಹಾಯಧನ ನೀಡುವ ಭರವಸೆ ನೀಡಿದ್ದರಾದರೂ ಇದುವರೆಗೂ ಅಂಥದ್ದೇನೂ ಆಗಿಯೇ ಇಲ್ಲ! ಈ ಬಗ್ಗೆ ಮೊಯ್ಲಿಗೆ ಪತ್ರ ಬರೆದಿದ್ದರೂ ಅವರಿಂದ ಉತ್ತರ ಬಂದಿಲ್ಲ ಎಂಬ ಅಸಮಾಧಾನ ಸುಬ್ಬಯ್ಯನವರಿಗಿದೆ.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಸ್ಮರಣಾರ್ಥ ಚಿನ್ನದ ಪದಕ ನೀಡಿ ಗೌರವಿಸಲಾಗುತ್ತಿದೆ. ಗೋಣಿಕೊಪ್ಪಲಿನ ಕಾವೇರಿ ಕಾಲೇಜಿನಲ್ಲಿ ಈಗಾಗಲೇ ಕಾರ್ಯಪ್ಪ ಹಾಗೂ ತಿಮ್ಮಯ್ಯ ಅವರ ಪ್ರತಿಮೆಗಳನ್ನು ನಿರ್ಮಾಣ ಮಾಡಲಾಗಿದೆ. ಭೂಸೇನೆಯ ಮುಖ್ಯಸ್ಥ ಬಿವಿನ್ ರಾವತರ್ ಮುಂಬರುವ ಮಾಚ್‌ರ್‍ನಲ್ಲಿ ಪ್ರತಿಮೆ ಅನಾವರಣ ಮಾಡಲಿದ್ದಾರೆ. ಆದರೆ ‘‘ಕೊಡಗಿನಲ್ಲಿ ಸೈನಿಕ ಶಾಲೆ ಸ್ಥಾಪನೆಯಾದರೂ 500 ಮಂದಿಯಲ್ಲಿ ಕೇವಲ ಆರು ಮಂದಿ ಮಾತ್ರ ಕೊಡಗಿನ ವಿದ್ಯಾರ್ಥಿಗಳು ವ್ಯಾಸಂಗ ಪಡೆಯುತ್ತಿರುವುದು ಬೇಸರದ ಸಂಗತಿ,'' ಎನ್ನುತ್ತಾರೆ ಕರ್ನಲ್ ಸುಬ್ಬಯ್ಯ. ‘‘ಅದೇನೇ ಇರಲಿ, ನಾನು ಮಾತ್ರ ಮತ್ತೆ ಹುಟ್ಟಿದರೂ ಸೇನೆಯನ್ನೇ ಆಯ್ಕೆ ಮಾಡುವೆ, ರಣಭೂಮಿಯಲ್ಲಿ ಕೆಲಸ ಮಾಡಲು ಪುಣ್ಯ ಮಾಡಿರಬೇಕು,'' ಎಂಬುದು ಅವರ ಗಟ್ಟಿನುಡಿ.
(ಕನ್ನಡ ಪ್ರಭ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.