ಬೆಂಗಳೂರಿಗೆ ರಾಜ್ಯದ ವಿವಿಧ ನದಿಗಳಿಂದ ನೀರು ಹರಿಸುವ ಯೋಜನೆಗೆ ಕರ್ನಾಟಕ ಸರ್ಕಾರ ಕೈ ಹಾಕುತ್ತಿದೆ. ಆದರೆ ಇದಕ್ಕೆ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದ್ದು, ತುಂಗಭದ್ರಾ ನೀರನ್ನು ನೀಡದಿರಲು ಕೊಪ್ಪಳ ಜಿಲ್ಲಾ ಪಂಚಾಯತ್ ನಿರ್ಧರಿಸಿದೆ.
ಕೊಪ್ಪಳ [ಜೂ.27] : ತುಂಗಭದ್ರಾ ಜಲಾಶಯದಿಂದ ಬೆಂಗಳೂರಿಗೆ ನೀರು ತೆಗೆದುಕೊಂಡು ಹೋಗಲು ಬಿಡುವ ಪ್ರಶ್ನೆಯೇ ಇಲ್ಲ. ಇಲ್ಲಿಯೇ ನೀರಿನ ಸಮಸ್ಯೆ ಜಟೀಲವಾಗಿರುವಾಗ ನೀರು ಕೊಡುವುದಾದರೂ ಎಲ್ಲಿಂದ ಎಂದು ಪ್ರಶ್ನಿಸಿದ ಇಲ್ಲಿನ ಜಿ.ಪಂ. ಸದಸ್ಯರು, ಬೆಂಗಳೂರಿಗೆ ತುಂಗಭದ್ರಾ ನೀರು ಕೊಡದೇ ಇರಲು ಸಾಮಾನ್ಯ ಸಭೆಯಲ್ಲಿ ಒಮ್ಮತದಿಂದ ನಿರ್ಧರಿಸಿದರು.
ಬುಧವಾರ ನಡೆದ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಸದಸ್ಯರೊಬ್ಬರು ತುಂಗಭದ್ರಾ ಜಲಾಶಯದಿಂದ ಬೆಂಗಳೂರಿಗೆ ನೀರು ಒಯ್ಯುವ ಪ್ರಸ್ತಾಪ ಇದೆಯಲ್ಲಾ ಎಂದಾಗ, ಸಭೆಯಲ್ಲಿ ಈ ಬಗ್ಗೆ ಗಂಭೀರ ಚರ್ಚೆ ನಡೆಯಿತು. ‘ತುಂಗಭದ್ರಾ ಜಲಾಶಯ ಪದೇ ಪದೆ ಬರಿದಾಗುತ್ತಿರುವುದರಿಂದ ಇಲ್ಲಿನ ಸುತ್ತಮುತ್ತಲ ಜಿಲ್ಲೆಗೆ ನೀರಿನ ದಾಹ ನೀಗಿಸಲು ಸಮಸ್ಯೆಯಾಗುತ್ತಿದೆ. ಹೀಗಿರುವಾಗ ಬೆಂಗಳೂರಿಗೆ ಇಲ್ಲಿಂದ ನೀರು ಕೊಡಲು ಸಾಧ್ಯವೇ ಇಲ್ಲ’ ಎಂದು ಅಧ್ಯಕ್ಷ ವಿಶ್ವನಾಥ ರಡ್ಡಿ ಹೇಳುತ್ತಿದ್ದಂತೆ ಇದಕ್ಕೆ ಸದಸ್ಯರು ಒಕ್ಕೊರಳಿಂದ ಸಮ್ಮತಿ ನೀಡಿದರು.
ಕೊಡುವುದಿಲ್ಲ ಎನ್ನುವುದು ಸರಿಯಲ್ಲ:
ಈ ವೇಳೆ ಮಧ್ಯಪ್ರವೇಶಿಸಿದ ಜಿಪಂ ಕಾರ್ಯನಿರ್ವಾಹಕ ಅಧಿಕಾರಿ, ನೀರು ಕೊಡುವುದಿಲ್ಲ ಎನ್ನುವುದು ಸರಿಯಲ್ಲ. ಬೆಂಗಳೂರಿಗೆ ಈ ಭಾಗದವರು ಹೋಗುತ್ತೇವೆ. ಹೀಗಾಗಿ, ಈ ಕುರಿತು ಚಿಂತಿಸಿ ಎಂದು ತಮ್ಮ ಅಭಿಪ್ರಾಯ ಮಂಡನೆ ಮಾಡಿದರು. ಇದಕ್ಕೆ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ, ನೀವು ಏನಾದರೂ ತೀರ್ಮಾನ ತೆಗೆದುಕೊಳ್ಳಿ. ಇದು ನನ್ನ ಅಭಿಪ್ರಾಯ ಮಾತ್ರ ಎಂದು ಸುಮ್ಮನಾದರು. ಅನೇಕ ವರ್ಷಗಳಿಂದ ತುಂಗಭದ್ರಾ ಜಲಾಶಯದಲ್ಲಿ ನೀರಿನ ಅಭಾವ ಆಗುತ್ತಲೇ ಇದೆ. ಹೀಗಿರುವಾಗ ಬೆಂಗಳೂರು ಸೇರಿದಂತೆ ಬೇರೆಡೆಗೆ ನೀರು ತೆಗೆದುಕೊಂಡು ಹೋಗುವುದಾದರೂ ಹೇಗೆ ಎಂದು ಸಭೆಉಯಲ್ಲಿ ಪ್ರಶ್ನೆ ಮಾಡಲಾಯಿತು. ಹೀಗಾಗಿ, ತುಂಗಭದ್ರಾ ಜಲಾಶಯದಿಂದ ಎಲ್ಲಿಗೂ ನೀರು ಕೊಡದಿರಲು ಸರ್ವಾನುಮತದಿಂದ ಠರಾವು ಪಾಸು ಮಾಡಲಾಯಿತು. ಇದನ್ನು ಸರ್ಕಾರಕ್ಕೆ ಕಳುಹಿಸಲು ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.