
ಹಾಸನ(ಅ. 22): ದೇಶದ ಎರಡು ಅದ್ಭುತ ಶಕ್ತಿಗಳು ಶೀಘ್ರ ನಾಶವಾಗಲಿವೆ ಎಂದು ಇಲ್ಲಿಯ ಕೋಡಿಮಠದ ಸ್ವಾಮೀಜಿ ತಮ್ಮ ಭವಿಷ್ಯವಾಣಿಯನ್ನು ಪುನರುಚ್ಚರಿಸಿದ್ದಾರೆ. ಲಾಲ್'ಬಹದ್ದೂರ್ ಶಾಸ್ತ್ರಿಯಂತೆ ಮಹಾನ್ ನಾಯಕನೊಬ್ಬನ ಸಾವು ಸಂಭವಿಸುತ್ತದೆ ಎಂದು ಕೆಲ ದಿನಗಳ ಹಿಂದೆ ಕೋಡಿಮಠ ಶ್ರೀಗಳು ಭವಿಷ್ಯ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಮಾಧ್ಯಮಗಳೊಂದಿಗೆ ಇಂದು ಮಾತನಾಡಿದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ದೇಶದಲ್ಲಿ ಯುದ್ಧ ನಡೆಯುವ ಸಂಭವ ಇರುವುದರ ಸೂಚನೆ ನೀಡಿದ್ದಾರೆ. ದೇಶದ ಗಡಿಯಲ್ಲಿ ಮದ್ದುಗುಂಡು ಸಿಡಿಯಲಿವೆ. ಭೀಕರ ಅನಾಹುತ ಸಂಭವಿಸಲಿದೆ. ಸಹಸ್ರಾರು ಜನರು ವಿಷಗಾಳಿ ಸೇವಿಸಿ ಸಾಯುತ್ತಾರೆ ಎಂದು ಭಯಂಕರ ಭವಿಷ್ಯವನ್ನು ಹೇಳಿದ್ದಾರೆ.
ರಾಜ್ಯದಲ್ಲಿ ಯಾವ ಸರಕಾರ?
ಕರ್ನಾಟಕದಲ್ಲೀಗ ವಿಧಾನಸಭಾ ಚುನಾವಣೆಗೆ ಜಂಘೀಕುಸ್ತಿ ಆರಂಭವಾಗಿದೆ. ಸಿದ್ದರಾಮಯ್ಯ ವರ್ಸಸ್ ಬಿಜೆಪಿ ನಡುವೆ ಸಮರ ತಾರಕಕ್ಕೇರುತ್ತಿದೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮಧ್ಯೆ ತ್ರಿಕೋನ ಪೈಪೋಟಿ ಇದೆ. ಯಾವ ಸರಕಾರ ಅಧಿಕಾರಕ ಹಿಡಿಯುತ್ತದೆ ಎಂಬ ಕುತೂಹಲಭರಿತ ಪ್ರಶ್ನೆಗೆ ಉತ್ತರ ಯಾವುದಿರಬಹುದೆಂಬ ಸುಳಿವು ಯಾರಿಗೂ ಸಿಕ್ಕುತ್ತಿಲ್ಲ. ಈ ಬಗ್ಗೆ ಕೋಡಿಮಠ ಸ್ವಾಮೀಜಿ ಕೂಡ ಭವಿಷ್ಯ ಹೇಳಲು ನಿರಾಕರಿಸಿದ್ದಾರೆ.
ರಾಜ್ಯದಲ್ಲಿ ಮುಂದಿನ ಸರಕಾರ ಯಾವುದು ಎಂದು ಇನ್ನೆರಡು ತಿಂಗಳಲ್ಲಿ ಹೇಳುತ್ತೇನೆಂದು ಸ್ವಾಮಿಗಳು ಉತ್ತರ ನೀಡಿದ್ದಾರೆ. ಈಗ ಹೇಳಿದರೆ ಒಬ್ಬರಿಗೆ ನೋವು, ಮತ್ತೊಬ್ಬರಿಗೆ ನಲಿವು ಸಿಗುತ್ತದೆ. ಆದ್ದರಿಂದ ಭವಿಷ್ಯದ ಸರಕಾರದ ಬಗ್ಗೆ ಈಗಲೇ ಹೇಳುವುದಿಲ್ಲ ಎಂದು ಕೋಡಿಮಠ ಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಸಿದ್ದರಾಮಯ್ಯ ಸರಕಾರದ ಅವಧಿ ಮೇ 2018ರವರೆಗೆ ಇದೆಯಾದರೂ ನಿಗದಿತ ಅವಧಿಗಿಂತ ಮೊದಲೇ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆ ಇದೆ. 2018ರ ಮೊದಲ ತ್ರೈಮಾಸಿಕ ಅವಧಿಯಲ್ಲೇ ಚುನಾವಣೆ ನಡೆದರೂ ನಡೆಯಬಹುದೆನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.