
ಬೆಂಗಳೂರು(ಫೆ.16): ಪತ್ರಕರ್ತನಾದವನಿಗೆ ಇದು ನಿಜಕ್ಕೂ ಸಂದಿಗ್ಧ ಪರಿಸ್ಥಿತಿ. ಒಂದು ಕಡೆ ಹುತಾತ್ಮ ಯೋಧರ ಕುಟುಂಬಸ್ಥರ ನೆರವಿಗೆ ಸಾಗರದಂತೆ ಹರಿದು ಬರುತ್ತಿರುವ ಜನಸಾಗರ, ಮತ್ತೊಂದೆಡೆ ಯೋಧರ ಸಾವನ್ನೇ ದಂಧೆಯನ್ನಾಗಿ ಮಾಡಿಕೊಂಡಿರುವ ದುರುಳರ ಕುರಿತು ಎಚ್ಚರಿಸುವ ಅನಿವಾರ್ಯತೆ.
ಹೌದು, ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ ಇಡೀ ದೇಶದಿಂದ ನೆರವಿನ ಮಹಾಪೂರ ಹರಿದು ಬರುತ್ತಿದೆ. ಜನ ಸ್ವಯಂಪ್ರೇರಣೆಯಿಂದ ಹುತಾತ್ಮ ಯೋಧರ ಕುಟುಂಬಕ್ಕೆ ತಮ್ಮ ಕೈಲಾದಷ್ಟು ಆರ್ಥಿಕ ಸಹಾಯ ಮಾಡುತ್ತಿದ್ದಾರೆ.
ಆದರೆ ಇದೇ ಸಭ್ಯ ಮಾನವ ಸಮಾಜದಲ್ಲಿ ಮನುಷ್ಯತ್ವ ಇಲ್ಲದೇ ಬದುಕುತ್ತಿರುವ ಕೆಲವರು, ಯೋಧರ ಸಾವನ್ನೇ ದಂಧಧೆಯನ್ನಾಗಿ ಮಾಡಿಕೊಂಡಿದ್ದಾರೆ. ನಕಲಿ ಗುಂಪುಗಳನ್ನು ಸೃಷ್ಟಿಸಿ, ಬಸ್ ನಿಲ್ದಾಣ, ರೈಲು ನಿಲ್ದಾಣ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ತಿರುಗಾಡುವ ಈ ಗುಂಪು ಯೋಧರ ಕುಟುಂಬಕ್ಕೆ ಹಣ ತಲುಪಿಸುವುದಾಗಿ ಸುಳ್ಳು ಹೇಳಿ ಹಣ ಪೀಕುಲು ಆರಂಭಿಸಿದ್ದಾರೆ.
ಇನ್ನು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಮಂಡ್ಯದ ವೀರ ಯೋಧ ಗುರು ಅವರ ಆ್ಯಕ್ಸಿಸ್ ಬ್ಯಾಂಕ್ ಅಕೌಂಟ್‌ಗೆ ಹಣ ತಲುಪಿಸಿ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಸಲಿಗೆ ಗುರು ಅವರ ಬಳಿಯಾಗಲಿ ಅವರ ಕುಟುಂಬದ ಬಳಿಯಾಗಲಿ ಆ್ಯಕ್ಸಿಸ್ ಬ್ಯಾಂಕ್ ಅಕೌಂಟ್ ಇಲ್ಲ ಎಂಬುದು ಸ್ಪಷ್ಟವಾಗಿದೆ.
ಹಾಗಂತ ಸಾರ್ವನಿಕ ಸ್ಥಳಗಳಲ್ಲಿ ಹಣ ಕೇಳುತ್ತಿರುವ ಎಲ್ಲರೂ ಖದೀಮರು ಎಂದು ಹೇಳಲು ಸಾಧ್ಯವಿಲ್ಲ. ಯಾರು ನಿಜವಾಗಿಯೂ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ? ಯಾರು ಇದನ್ನೇ ದಂಧೆಯನ್ನಾಗಿ ಮಾಡಿಕೊಂಡಿದ್ದಾರೆ? ಎಂಬುದನ್ನು ಗುರುತಿಸುವ ಜವಾಬ್ದಾರಿ ಜನತೆ ಮೇಲಿದೆ.
ಹೇಗೆ ಸಹಾಯ ಮಾಡಬೇಕು?:
ಇದೆಲ್ಲಕ್ಕೂ ಹೊರತಾಗಿ ಹುತಾತ್ಮ ಯೋಧರ ಕುಟುಂಬಕ್ಕೆ ಆರ್ಥಿಕ ನೆರವು ನೀಡಲು ಬಯಸುವವರಿಗೆ ದಾರಿಯೊಂದಿದೆ. ಅದು ಸರ್ಕಾರದ ಅಧಿಕೃತ bharatkeveer.gov.in ವೆಬ್‌ಸೈಟ್‌ಗೆ ಹೋಗಿ ಅಲ್ಲಿ ಹುತಾತ್ಮರ ಕುಟುಂಬಕ್ಕೆ ನೆರವು ನೀಡಬಹುದಾಗಿದೆ.
ವೆಬ್‌ಸೈಟ್‌ಗೆ ಭೇಟಿ ನೀಡಿದರೆ ಅಲ್ಲಿ ಹುತಾತ್ಮರಾದ ಪ್ರತಿ ಸೈನಿಕನ ಕುರಿತು ಮಾಹಿತಿ ಇರುತ್ತದೆ. ನೆರವು ನೀಡಬಯಸುವ ವ್ಯಕ್ತಿ ನಿರ್ದಿಷ್ಟ ಹುತಾತ್ಮ ಸೈನಿಕನಿಗೆ ಅಥವಾ ಸಾಮೂಹಿಕವಾಗಿ ಆರ್ಥಿಕ ಸಹಾಯ ನೀಡಬಹುದಾಗಿದೆ.
ಓರ್ವ ವ್ಯಕ್ತಿ ಕನಿಷ್ಠ 10 ರೂ.ದಿಂದ ಗರಿಷ್ಠ 15 ಲಕ್ಷ ರೂ.ವರೆಗೂ ಸಹಾಯ ನೀಡಬಹುದಾಗಿದ್ದು, ನಿಮ್ಮ ಹಣ ತಲುಪುತ್ತಿದ್ದಂತೇ ವೆಬ್‌ಸೈಟ್‌ನಲ್ಲೇ ಪ್ರಮಾಣಪತ್ರವೊಂದು ಜನರೇಟ್ ಆಗುತ್ತದೆ. ಅಲ್ಲದೇ ವೆಬ್‌ಸೈಟ್‌ನಿಂದ ನಿಮಗೆ ಅಧಿಕೃತ ಇ-ಮೇಲ್ ಸಂದೇಶ ಕೂಡ ಬರುತ್ತದೆ.
ಸದ್ಯ ಈ ವೆಬ್‌ಸೈಟ್‌ನಲ್ಲಿ ಪುಲ್ವಾಮಾ ಹುತಾತ್ಮರ ಮಾಹಿತಿ ಅಪ್‌ಡೇಟ್ ಮಾಡಿಲ್ಲವಾದರೂ, ಶೀಘ್ರದಲ್ಲೇ 40 ಹುತಾತ್ಮರ ಮಾಹಿತಿ ಸಿಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.