ಶ್ರೀಗಳ ಆರೋಗ್ಯ ಜವಾಬ್ದಾರಿ ಹೊತ್ತ ಮೊಹ್ಮದ್ ರೇಲಾ ಯಾರು?

By Web DeskFirst Published Dec 7, 2018, 1:48 PM IST
Highlights

ಶ್ರೀಗಳ ಆರೋಗ್ಯದ ಜವಾಬ್ದಾರಿ ಡಾ. ಮೊಹ್ಮದ್ ರೇಲಾ ಹೆಗಲಿಗೆ| ಯಾರು ಡಾ. ಮೊಹ್ಮದ್ ರೇಲಾ?, ರೇಲಾ ಇನ್ಸಿಟ್ಯೂಟ್ ಇತಿಹಸವೇನು?| ದೇಶ ವಿದೇಶಗಳ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸಿದ ಅನುಭವ| ಚೆನ್ನೈನ ರೇಲಾ ಇನ್ಸಿಟ್ಯೂಟ್ ಆಂಡ್ ಮೆಡಿಕಲ್ ಸೆಂಟರ್‌ನ ಮುಖ್ಯಸ್ಥ| ಈ ಹಿಂದೆಯೂ ಶ್ರೀಗಳಿಗೆ ಹಲವು ಬಾರಿ ಚಿಕಿತ್ಸೆ ನೀಡಿದ್ದ ಡಾ. ರೇಲಾ

ಚೆನ್ನೈ(ಡಿ.07): ಆ ಯುವತಿಯ ಹೆಸರು ಬೇಬೆನ್ ಶಟ್ಕೆ. 21 ವರ್ಷದ ಐರಿಷ್ ಯುವತಿ ಬೇಬೆನ್ ಶಟ್ಕೆ ತಮಿಳುಣಾಡಿನ ಚೆನ್ನೈಗೆ ಬಂದಿಳಿದಾಗ ಖುದ್ದು ಸಿಎಂ ಪಳನಿಸ್ವಾಮಿ ಆಕೆಗೆ ಹೂಗುಚ್ಛ ನೀಡಿ ಸ್ವಾಗತಿಸಿದ್ದರು. ಪಕ್ಕದಲ್ಲೇ ನಿಂತಿದ್ದ ಡಾ. ಮೊಹ್ಮದ್ ರೇಲಾ ಮುಗುಳ್ನಕ್ಕು ಬೇಬೆನ್ ಶಟ್ಕೆಳನ್ನು ಆತ್ಮೀಯವಾಗಿ ಬರಮಾಡಿಕೊಂಡರು.

1997ರಲ್ಲಿ ಬೇಬೆನ್ ಶಟ್ಕೆ ಕೇವಲ 5 ದಿನದ ಮಗುವಿದ್ದಾಗ ಡಾ. ಮೊಹ್ಮದ್ ರೇಲಾ ಲಂಡನ್‌ನಲ್ಲಿ ಈಕೆಗೆ ಯಕೃತು ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದರು. ಆ ಸುದ್ದಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಸುದ್ದಿ ಮಾಧ್ಯಮಗಳಲ್ಲಿ ಭಾರೀ ಪ್ರಚಾರ ಪಡೆದಿತ್ತು.

ಚೆನ್ನೈನ ಡಾ. ಮೊಹ್ಮದ್ ರೇಲಾ ಅವರೇ ಇದೀಗ ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಶ್ರೀಗಳ ಆರೋಗ್ಯದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಹೌದು, ಚೆನ್ನೈನ ಪ್ರಸಿದ್ಧ ರೇಲಾ ಇನ್ಸಿಟ್ಯೂಟ್ ಮತ್ತು ಮೆಡಿಕಲ್ ಸೆಂಟರ್‌ನ ಮುಖ್ಯಸ್ಥರಾಗಿರುವ ಡಾ. ಮೊಹ್ಮದ್ ರೇಲಾ ವಿಶ್ವ ಪ್ರಸಿದ್ಧ ವೈದ್ಯರು.

ತಮಿಳುನಾಡಿನ ಮೇಲುಧುರೈನಲ್ಲಿ ಜನಿಸಿದ ಡಾ. ಮೊಹ್ಮದ್ ರೇಲಾ, ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣ ಪಡೆದು ಇಂಗ್ಲೆಂಡ್‌ಗೆ ತೆರಳಿದರು. ಯಕೃತ್ತಿನ ಕಸಿ ಶಸ್ತ್ರಚಿಕಿತ್ಸೆಯಲ್ಲಿ ಪರಿಣಿತರಾದ ಮೊಹ್ಮದ್ ರೇಲಾ, ಇದುವರೆಗೂ ಸುಮಾರು 4000 ಕ್ಕೂ ಅಧಿಕ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಇದೇ ಹಿನ್ನೆಲೆಯಲ್ಲಿ ರೇಲಾ ಅವರಿಗೆ 2000ರಲ್ಲಿ ಗಿನ್ನೀಸ್ ವಿಶ್ವ ದಾಖಲೆ ಪ್ರಶಸ್ತಿ ಲಭಿಸಿದೆ.

"

ಸದ್ಯ ಅನಾರೋಗ್ಯದಿಂದ ಬಳಲುತ್ತಿರುವ ಶತಾಯುಷಿ ಶಿವಕುಮಾರ ಶ್ರೀಗಳನ್ನು ಚೆನ್ನೈನ ಇದೇ ರೇಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಹಿಂದೆಯೂ ಹಲವು ಬಾರಿ ಶ್ರೀಗಳಿಗೆ ಚಿಕಿತ್ಸೆ ನೀಡಿರುವ ಡಾ. ರೇಲಾ, ಈ ಬಾರಿಯೂ ಅವರ ಆರೋಗ್ಯದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.

ಲಂಡನ್ ಸೇರಿದಂತೆ ದೇಶ ವಿದೇಶಗಳ ಹಲವು ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸಿರುವ ಡಾ. ಮೊಹ್ಮದ್ ರೇಲಾ, ಹಲವು ಸೂಕ್ಷ್ಮ ಶಸ್ತ್ರಚಿಕಿತ್ಸೆಗಳನ್ನು ಪೂರೈಸಿ ಸೈ ಎನಿಸಿಕೊಂಡಿದ್ದಾರೆ.

ಇದೇ ಹಿನ್ನೆಲೆಯಲ್ಲಿ ಶ್ರೀಗಳ ಆರೋಗ್ಯದ ಜವಾಬ್ದಾರಿಯನ್ನು ಡಾ. ಮೊಹ್ಮದ್ ರೇಲಾ ಅವರ ಹೆಗಲಿಗೆ ಹೊರಿಸಲಾಗಿದ್ದು, ಅವರೊಂದಿಗೆ ಇಡೀ ನಾಡಿನ ಜನರ ಹಾರೈಕೆ ಇದೆ ಎಂದು ಹೇಳಿದರೆ ಖಂಡಿತ ಉತ್ಪ್ರೇಕ್ಷೆ ಆಗಲಾರದು.

ಅಸ್ವಸ್ಥ ಅಕ್ಷರ ದಾಸೋಹಿಗೆ ಚೆನ್ನೈನಲ್ಲಿ ಚಿಕಿತ್ಸೆ

click me!