
ಬೆಂಗಳೂರು (ಜ.121): ಬಿಬಿಎಂಪಿಯ ಮಹತ್ವಾಕಾಂಕ್ಷಿಯ ಪಾಡ್ ಟ್ಯಾಕ್ಸಿ ಯೋಜನೆಗೆ ಏಕೈಕ ಕಂಪನಿ ಬಿಡ್ ಮಾಡಿದೆ. ಅದು ದೆಹಲಿ ಮೂಲದ ‘ಸ್ಮಾರ್ಟ್ ಪರ್ಸನಲ್ ರ್ಯಾಪಿಡ್ ಟ್ರಾನ್ಸಿಟ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ’(ಎಸ್‌ಪಿಆರ್‌ಟಿ). ಕುತೂಹಲಕಾರಿ ಸಂಗತಿಯೆಂದರೆ, ಪಾಡ್ ಟ್ಯಾಕ್ಸಿಯ ಏಕೈಕ ಬಿಡ್‌ದಾರ ಎಸ್‌ಪಿಆರ್‌ಟಿ ಕಂಪನಿಯು ಸಹಯೋಗ ಹೊಂದಿರುವ ಕಂಪನಿಗಳ ಪೈಕಿ ಒಂದರಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಪಾಲುದಾರರಾಗಿದ್ದಾರೆ ಎಂಬುದು ಇದೀಗ ವಿವಾದಕ್ಕೆ ಕಾರಣವಾಗಿದೆ.
ಪಾಡ್ ಟ್ಯಾಕ್ಸಿ ಯೋಜನೆಗೆ ಬಿಬಿಎಂಪಿ ಆಹ್ವಾನಿಸಿದ್ದ ಟೆಂಡರ್‌ಗೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದ ಜನವರಿ 10 ರಂದು ಎಸ್‌ಪಿಆರ್‌ಟಿ ಹೆಸರಿನ ಏಕೈಕ ಕಂಪನಿ ಬಿಡ್ ಮಾಡಿದೆ. ಈ ಕಂಪನಿಯು ಎಂಬೆಸಿ ಪ್ರಾಪರ್ಟಿ ಡೆವಲಪ್‌ಮೆಂಟ್ಸ್ ಮತ್ತು ಅಲ್ಟ್ರಾ ಪಿಆರ್‌ಟಿ ಲಿಮಿಟೆಡ್ ಕಂಪನಿಗಳ ಸಹಯೋಗದಲ್ಲಿ ಟೆಂಡರ್‌ಗೆ ಅರ್ಜಿ ಸಲ್ಲಿಸಿದೆ. ಈ ಪೈಕಿ ಎಂಬೆಸಿ ಪ್ರಾಪರ್ಟಿ ಡೆವಲಪ್‌ಮೆಂಟ್ಸ್ ಕಂಪನಿಯಲ್ಲಿ ಸಚಿವ ಜಾರ್ಜ್ ಅವರ ಪಾಲುದಾರಿಕೆ ಇದೆ ಎನ್ನಲಾಗುತ್ತಿದೆ.
ಆದರೆ, ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವರು ‘ಸಂಸ್ಥೆಯೊಂದು ಪಾಡ್ ಟ್ಯಾಕ್ಸಿ ಯೋಜನೆ ಬಗ್ಗೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಯೋಜನೆಯಲ್ಲಿ ಬಿಬಿಎಂಪಿಯದ್ದಾಗಲಿ, ರಾಜ್ಯ ಸರ್ಕಾರದ್ದಾಗಲಿ ಯಾವುದೇ ಹೂಡಿಕೆ ಮಾಡುವಂತಿಲ್ಲ. ಹಾಗಾಗಿ ಬಿಬಿಎಂಪಿ ಆಯುಕ್ತರಿಗೆ ಪ್ರಸ್ತಾವನೆ ಪರಿಶೀಲಿಸಿ ಟೆಂಡರ್ ಕರೆಯಲು ಸೂಚಿಸಿದ್ದೆ. ಇದರಲ್ಲಿ ಯಾವುದೇ ತಪ್ಪಿಲ್ಲ. ಈ ವಿಚಾರದಲ್ಲಿ ಎಂಬೆಸಿ ಗ್ರೂಪ್ ಮೂಲಕ ನಾನು ಏನೂ ಮಾಡಲು ಸಾಧ್ಯವಿಲ್ಲ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಈ ಮಧ್ಯೆ, ಒಂದೇ ಕಂಪನಿ ಬಿಡ್ ಮಾಡಿರುವುದರಿಂದ ಕೆಎಂಸಿ ಕಾಯ್ದೆ ಪ್ರಕಾರ ಅದು ಊರ್ಜಿತವಾಗುವುದಿಲ್ಲ. ಮರು ಟೆಂಡರ್ ಕರೆಯಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ, ಪಾಡ್‌ಟ್ಯಾಕ್ಸಿ ಯೋಜನೆಗೆ ಕರೆಯಲಾಗಿರುವಟೆಂಡರ್ ನಿಯಮಾವಳಿಗಳಿಗೆ ಅರ್ಹತೆ ಹೊಂದಿರುವ ಕಂಪನಿಗಳ ಸಂಖ್ಯೆ ವಿರಳ. ಹಾಗಾಗಿ ಪ್ರಸ್ತುತ ಬಿಡ್ ಮಾಡಿರುವ ಕಂಪನಿ ಎಲ್ಲ ರೀತಿಯಲ್ಲೂ ಅರ್ಹತೆ ಹೊಂದಿದೆ. ಹಾಗಾಗಿ ಸರ್ಕಾರ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದರೆ ಅದೇ ಕಂಪನಿಗೆ ಟೆಂಡರ್ ದೊರೆಯಲೂ ಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
2 ಹಂತದ ಯೋಜನೆ: ಬಿಬಿಎಂಪಿ ಮೊದಲ ಹಂತದಲ್ಲಿ ಎಂ.ಜಿ. ರಸ್ತೆಯ ಟ್ರಿನಿಟಿ ಮೆಟ್ರೋ ನಿಲ್ದಾಣದಿಂದ ವೈಟ್‌ಫೀಲ್ಡ್ ವರೆಗಿನ ಸುತ್ತಮುತ್ತಲ ಪ್ರದೇಶಗಳಿಗೆ 35 ಕಿ.ಮೀ. ದೂರದ ವರೆಗೆ (70 ಕಿ.ಮೀ. ಟ್ರಾಕ್ ಉದ್ದ) 43 ನಿಲ್ದಾಣಗಳನ್ನೊಳಗೊಂಡ ಪಾಡ್ ಟ್ಯಾಕ್ಸಿ ಸಂಚಾರ ಮಾರ್ಗಕ್ಕೆ ವಿನ್ಯಾಸ ಸಿದ್ಧಪಡಿಸಿತ್ತು.
ಇದರ ಜತೆಗೆ ೨ನೇ ಹಂತದಲ್ಲಿ ಬೈಯ್ಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಿಂದ ನಾಗವಾರ ನಿಲ್ದಾಣದವರೆಗೆ 28 ಕಿ.ಮೀ. ಉದ್ದದ (56 ಕಿ.ಮೀ. ಟ್ಯಾಕ್ ಉದ್ದ) ೩೮ ನಿಲ್ದಾಣಗಳನ್ನೊಳಗೊಂಡ ಮತ್ತೊಂದು ವಿನ್ಯಾಸ ಸಿದ್ಧಪಡಿಸಿ ಎರಡಕ್ಕೂ ಟೆಂಡರ್ ಕರೆಯಲಾಗಿದೆ. ಎರಡೂ ಹಂತದ ಯೋಜನೆಗಳಿಗೂ ಒಂದೇ ಕಂಪನಿ ಬಿಡ್ ಮಾಡಿದೆ. ಒಂದೇ ಕಂಪನಿ ಎರಡೂ ಹಂತದ ಯೋಜನೆಗಳಿಗೆ ಬಿಡ್ ಮಾಡಿರುವುದರಿಂದ ಮೊದಲ ಹಂತದ ಮಾರ್ಗದ ಕಾಮಗಾರಿ ಪೂರ್ಣಗೊಂಡ ಬಳಿಕಷ್ಟೇ 2ನೇ ಹಂತದ ಮಾರ್ಗ ಕೈಗೆ ತ್ತಿಕೊಳ್ಳಲಿದೆ ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.