
ತಿರುವನಂತಪುರ(ಮಾ.19): ದೇಶದ ಅತ್ಯಂತ ಸುಶಿಕ್ಷಿತ ರಾಜ್ಯವಾದ ಕೇರಳದಲ್ಲಿ ಇದೀಗ ಅಂತರ್ಜಾಲ ಬಳಕೆ ಕೂಡ ಮೂಲಭೂತ ಮಾನವ ಹಕ್ಕುಗಳಲ್ಲಿ ಒಂದೆನಿಸಿದೆ. ಪ್ರತಿಯೊಬ್ಬ ನಾಗರಿಕನಿಗೆ ಆಹಾರ, ಶಿಕ್ಷಣ ಮತ್ತು ನೀರು ಹೇಗೆ ಮೂಲಭೂತ ಅಗತ್ಯವೊ, ಹಾಗೆ ಇಂಟರ್'ನೆಟ್ ಕೂಡ ಮೂಲಭೂತ ಅಗತ್ಯಗಳಲ್ಲಿ ಒಂದು ಎಂದು ಸರ್ಕಾರ ಪರಿಗಣಿಸಿದೆ.
ಕೇರಳ ಬಜೆಟ್'ನಲ್ಲಿ ಸಿಪಿಎಂ ಸರ್ಕಾರ ಇಂಥದ್ದೊಂದು ಅಂಶ ಪ್ರತಿಪಾದಿಸಿದೆ. ಈ ನಿಟ್ಟಿನಲ್ಲಿ ರಾಜ್ಯದ 20 ಲಕ್ಷ ಬಡ ಕುಟುಂಬಗಳಿಗೆ ಉಚಿತವಾಗಿ ಹಾಗೂ ಉಳಿದವರಿಗೆ ಸಬ್ಸಿಡಿ ದರದಲ್ಲಿ ಅಂತರ್ಜಾಲ ಸಂಪರ್ಕ ನೀಡಲು ಯೋಜನೆ ಪ್ರಕಟಿಸಿದ್ದು, ಅದಕ್ಕಾಗಿ ವಿಶೇಷ ಅನುದಾನ ಒದಗಿಸಿದೆ.
ವಿದ್ಯುತ್ ಜಾಲವನ್ನು ಬಳಸಿಕೊಂಡು ‘ಕೆ.ಫೋನ್' ಹೆಸರಿನ ಹೈ ಸ್ಪೀಡ್ ಫೈಬರ್ ನೆಟ್'ವರ್ಕ್ ಜಾಲವೊಂದನ್ನು ಅಭಿವೃದ್ಧಿಪಡಿಸಲು ಸರ್ಕಾರ ಯೋಜಿಸಿದೆ. ಎಲ್ಲವೂ ಅಂದುಕೊಂಡಂತೆ ಆದರೆ, 2018ರ ವೇಳೆ ಸರ್ಕಾರದ ಎಲ್ಲಾ ವಹಿವಾಟುಗಳು ಆನ್'ಲೈನ್ ಮೂಲಕವೇ ನಡೆಯಲಿದೆ. ಈ ನಿಟ್ಟಿನಲ್ಲಿ ಇಂಟರ್'ನೆಟ್ ಬಳಕೆಗೆ ಜನರನ್ನು ಸಜ್ಜುಗೊಳಿಸಲಾಗುವುದು. ಇಂಟರ್'ನೆಟ್ ಸಂಪರ್ಕದಿಂದ ವಂಚಿತರಾದವರಿಗೆ ಇಂಟರ್'ನೆಟ್ ಕುರಿತು ಅರಿವು ಮೂಡಿಸಲು ಬೃಹತ್ ಅಭಿಯಾನ ಹಮ್ಮಿಕೊಳ್ಳಲಾಗುವುದು. ಈ ಉದ್ದೇಶಕ್ಕೆ ಕೇರಳ ಮೂಲಸೌಕರ್ಯ ಅಭಿವೃದ್ಧಿ ನಿಧಿ ಮಂಡಳಿಯಿಂದ 1,000 ಕೋಟಿ ರೂಪಾಯಿ ಸಾಲ ಪಡೆಯಲಾಗುವುದು ಎಂದು ಕೇರಳ ಹಣಕಾಸು ಸಚಿವ ಥಾಮಸ್ ಇಸಾಕ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇಂಟರ್‌ನೆಟ್ ಬಳಕೆ ಹಕ್ಕು ಅಂದರೆ ಏನು?
ಎಲ್ಲಾ ನಾಗರಿಕರಿಗೂ ಬ್ರಾಡ್'ಬ್ಯಾಂಡ್ ಇಂಟರ್'ನೆಟ್ ಒದಗಿಸುವುದು ಇಂಟರ್'ನೆಟ್ ಬಳಕೆ ಹಕ್ಕಾಗಿದೆ. ಈ ಮೂಲಕ ಜನರು ತಮ್ಮ ಅಭಿವ್ಯಕ್ತಿ ಸ್ವಾತಂತ್ಯವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ. ಹೀಗಾಗಿ ಸರ್ಕಾರ ಜನರಿಗೆ ಇಂಟರ್'ನೆಟ್ ಲಭ್ಯವಾಗುವುದನ್ನು ಖಾತರಿಪಡಿಸಬೇಕು. ಜನರು ಇಂಟರ್'ನೆಟ್ ಬಳಕೆಯಿಂದ ವಂಚಿತರಾಗುವುದು ಮಾನವ ಹಕ್ಕುಗಳ ಉಲ್ಲಂಘನೆ ಯಾಗುತ್ತದೆ. ಹೀಗಾಗಿ ಇಂಟರ್'ನೆಟ್ ಬಳಕೆಯನ್ನು ಮೂಲಭೂತ ಹಕ್ಕುಗಳಲ್ಲಿ ಒಂದು ಎಂದು ಘೋಷಿಸುವಂತೆ ವಿಶ್ವಸಂಸ್ಥೆ ಶಿಫಾರಸು ಮಾಡಿದೆ.
ಇಂಟರ್ ನೆಟ್ ಬಳಕೆ ಹಕ್ಕು ಎಲ್ಲೆಲ್ಲಿದೆ?
ಅತಿ ವೇಗದ ಇಂಟರ್'ನೆಟ್ ಸಂಪರ್ಕ ಅಭಿವೃದ್ಧಿ ಹೊಂದಿದ ಬಹುತೇಕ ದೇಶಗಳಲ್ಲಿ ಅಂತರ್ಜಾಲ ಮೂಲಭೂತ ಹಕ್ಕುಗಳಲ್ಲಿ ಒಂದೆನಿಸಿದೆ. 2010ರಲ್ಲಿ ಸ್ವೀಡನ್ ಸರ್ಕಾರ ಬ್ರಾಡ್'ಬ್ಯಾಂಡ್ ಇಂಟರ್'ನೆಟ್ ಪ್ರತಿಯೊಬ್ಬ ನಾಗರಿಕನ ಕಾನೂನಾತ್ಮಕ ಅಧಿಕಾರ ಎಂದು ಘೋಷಿಸಿದ ಮೊದಲ ದೇಶ ಎನಿಸಿಕೊಂಡಿದೆ. ಕೆನಡಾ ಕೂಡ ಕಳೆದ ವರ್ಷ ತನ್ನ ನಾಗರಿಕರಿಗೆ 50 ಎಂಬಿಪಿಎಸ್‌ನಲ್ಲಿ ಇಂಟರ್‌ನೆಟ್ ಒದಗಿಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.