ಸಮ್ಮೇಳನದಿಂದ ರಾಜಕಾರಣಿಗಳನ್ನು ದೂರವಿಡಿ!

By Web DeskFirst Published Jan 7, 2019, 11:25 AM IST
Highlights

ಧಾರವಾಡ ಸಾಹಿತ್ಯ ಸಮ್ಮೇಳನಕ್ಕೆ ತಡವಾಗಿ ಬಂದ ಸಿಎಂ | ಸಾಹಿತಿಗಳಿಂದ, ಜನರಿಂದ ವ್ಯಕ್ತವಾಯ್ತು ಆಕ್ರೋಶ | ರಾಜಕಾರಣಿಗಳನ್ನು ದೂರವಿಡಿ ಎಂದು ರಾಘವೇಂದ್ರ ಪಾಟೀಲ್ ಒತ್ತಾಯ 

ಧಾರವಾಡ (ಜ. 07): ಎಲ್ಲ ರೀತಿಯ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಇನ್ನುಂದೆ ರಾಜಕಾರಣಿಗಳಿಗೆ ಆಹ್ವಾನ ಬೇಡ. ಅವರಿದ್ದರೆ ಸಮ್ಮೇಳನಕ್ಕೆ ಅಪಮಾನ..! ಅದೇ ರೀತಿ ಧಾರವಾಡದಲ್ಲಿ ನಡೆದ 84 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆಯನ್ನು ಮುಖ್ಯಮಂತ್ರಿಗಳು ನಾಲ್ಕು ಗಂಟೆ ವಿಳಂಬ ಮಾಡಿದ್ದರಿಂದ ಲಕ್ಷಾಂತರ ಜನರಿಗೆ ತೊಂದರೆಯಾಯಿತು.

ಇದು ಅಕ್ಷರ ಹಾಗೂ ಸಾಹಿತ್ಯಕ್ಕೆ ಮಾಡಿದ ಅಪಮಾನವೂ ಹೌದು. ಅದ್ದರಿಂದ ರಾಜಕಾರಣಿಗಳನ್ನು ಆಹ್ವಾನಿಸುವ ಈ ಪದ್ಧತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಕೈಬಿಟ್ಟು ಮಹಾರಾಷ್ಟ್ರ ಮಾದರಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆಸುವುದು ಸೂಕ್ತ.

-61 ವರ್ಷಗಳ ನಂತರ ಧಾರವಾಡದಲ್ಲಿ ಮೂರು ದಿನಗಳ ಕಾಲ ನಡೆದ ಸಾಹಿತ್ಯ ಸಮ್ಮೇಳನದ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ಹಿರಿಯ ಸಾಹಿತಿ, ಧಾರವಾಡ ಸಾಹಿತ್ಯ ಸಂಭ್ರಮದ ಅಧ್ಯಕ್ಷ ಡಾ.ರಾಘವೇಂದ್ರ ಪಾಟೀಲ್‌ ಈ ಸಲಹೆ ನೀಡಿದ್ದಾರೆ.

ಕನ್ನಡದ ಹಬ್ಬದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಹಾರಾಷ್ಟ್ರದಲ್ಲಿ ರಾಜಕಾರಣಿಗಳಿಗೆ ಅಕ್ಷರ ಶಕ್ತಿ ಗೊತ್ತಿದೆ. ಅಲ್ಲದೇ ಯಾವುದೇ ಮರಾಠಿ ಸಮ್ಮೇಳನಗಳಲ್ಲಿ ರಾಜಕಾರಣಿಗಳಿಗೆ ಆಹ್ವಾನವೇ ಇರೋದಿಲ್ಲ. ಸಾಮಾನ್ಯ ಜನರಂತೆ ಸಮ್ಮೇಳನಕ್ಕೆ ಬಂದು ಹೋಗುತ್ತಾರೆಯೇ ಹೊರತು ವೇದಿಕೆ ಬಳಿ ನುಸುಳೋದಿಲ್ಲ. ತುರ್ತು ಪರಿಸ್ಥಿತಿಯ ಸಮಯದಲ್ಲಿ ನಡೆದ ಮರಾಠಿ ಸಮ್ಮೇಳನದಲ್ಲಿ ದುರ್ಗಾ ಭಾಗ್ವತ ಅಧ್ಯಕ್ಷರಾಗಿದ್ದರು. 

ಸಮ್ಮೇಳನಕ್ಕೆ ಕೇಂದ್ರದ ಮಾಜಿ ಸಚಿವ ಯಶವಂತರಾವ್‌ ಚವ್ಹಾಣ ಸಹ ಆಗಮಿಸಿದ್ದರು. ನನ್ನ ಭಾಷಣ ಕೇಳಲು ನೀವು ಅರ್ಹರಲ್ಲ, ನೀವು ಹೋಗುವವರೆಗೂ ಭಾಷಣ ಮಾಡೋದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿ ಅವರು ಹೋಗುವವರೆಗೂ ದುರ್ಗಾ ಭಾಗ್ವತ ಭಾಷಣವನ್ನೇ ಮಾಡಲಿಲ್ಲ. ಆ ರೀತಿ ನಾವು ಸಹ ನಮ್ಮ ಅಕ್ಷರ ಶಕ್ತಿಯನ್ನು ಇಲ್ಲಿನ ರಾಜಕಾರಣಿಗಳಿಗೆ ತೋರಿಸಬೇಕು. 

ಆಗಲೇ ಸಾಹಿತ್ಯ ಸಮ್ಮೇಳನಗಳು ಸಾಂಗವಾಗಿ ನಡೆಯುತ್ತವೆ ಎಂದ ರಾಘವೇಂದ್ರ ಪಾಟೀಲರು, ಉಳಿದಂತೆ ಸಮ್ಮೇಳನವು ತನ್ನ ಮೂಲಭೂತ ಕಲ್ಪನೆಯ ಅನುಸಾರವಾಗಿ ಜಾತ್ರೆಯ ರೂಪದಲ್ಲಿ ನಡೆದಿದೆ. ಇಂತಹ ಸಮ್ಮೇಳನಗಳಲ್ಲಿ ಶಿಸ್ತನ್ನು ನಿರೀಕ್ಷೆ ಮಾಡಲಾಗುವುದಿಲ್ಲ. ಆಯೋಜನೆ ಚೆನ್ನಾಗಿತ್ತು. ಸಮಾನಾಂತರ ಗೋಷ್ಠಿಗಳು ಹಿಂದೆಂದಿಗಿಂತಲೂ ಪರಿಣಾಮಕಾರಿಯಾಗಿ ನಡೆದಿದ್ದು ಸಾಹಿತ್ಯಾಸಕ್ತರ ಸಂಖ್ಯೆಯೂ ಚೆನ್ನಾಗಿತ್ತು ಎಂದರು.

ಆಯ್ದ ಕವಿಗಳಿರಲಿ

ಇತ್ತೀಚಿನ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಅವ್ಯವಸ್ಥೆಗಳು ಕಡಿಮೆಯಾಗುತ್ತಿವೆ ಎನ್ನಲು ಧಾರವಾಡ ಸಮ್ಮೇಳನವೇ ಸಾಕ್ಷಿ. ಸಕಾಲಿಕ ವಿಷಯಗಳಲ್ಲಿ ನಡೆದ ಗೋಷ್ಠಿಗಳು ಅರ್ಥಪೂರ್ಣವಾಗಿವೆ. ಆದರೆ, ಕಾವ್ಯಕ್ಕೆ ಅದರದ್ದೇ ಆದ ಘನತೆ ಗೌರವವಿದೆ. 50-60 ಜನ ಕವಿಗಳ ಬದಲು ಆಯ್ದ ಕವಿಗಳಿಗೆ ಮಾತ್ರ ಕವನ ವಾಚಿಸಲು ಅವಕಾಶ ಕೊಡಬೇಕಿತ್ತು ಎಂಬ ಅಭಿಪ್ರಾಯವನ್ನು ಹಿರಿಯ ಕವಿ ಬಿ.ಆರ್‌. ಲಕ್ಷ್ಮಣರಾವ್‌ ವ್ಯಕ್ತಪಡಿಸಿದರು.

ಸಾಹಿತ್ಯದ ಧ್ವನಿಯಾಗಬೇಕಿತ್ತು

ಸಮ್ಮೇಳನದ ಬಗ್ಗೆ ಸಾಹಿತಿ ಗೀತಾ ವಸಂತ ಭಿನ್ನರೂಪದ ಅಭಿಪ್ರಾಯ ವ್ಯಕ್ತಪಡಿಸಿದರು. ಸಾಂಸ್ಕೃತಿಕ, ಸಾಹಿತ್ಯದ ತವರೂರು ಧಾರವಾಡದಲ್ಲಿ ನಡೆಯುತ್ತಿರುವ ಈ ಸಮ್ಮೇಳನದ ಬಗ್ಗೆ ಸಾಕಷ್ಟುನೀರೀಕ್ಷೆಗಳಿದ್ದವು. ಈ ಪೈಕಿ ಸಾಕಷ್ಟುಈಡೇರಿದ್ದರೂ ವ್ಯವಸ್ಥೆ ದೃಷ್ಟಿಯಿಂದ ಚೆನ್ನಾಗಿದ್ದರೂ, ಬೇಂದ್ರೆ, ಶಂ.ಬಾ. ಜೋಶಿ ಹಾಗೂ ಧಾರವಾಡದ ಮಹತ್ವದ ಕವಿ, ಸಾಹಿತಿಗಳ ಬಗ್ಗೆ ಗೋಷ್ಠಿಗಳಾಗಬೇಕಿತ್ತು ಎಂದರು.

ಅಸಹಿಷ್ಣುತೆ ಹಿಡಿಸಲಿಲ್ಲ:

ಅಸಹಿಷ್ಣುತೆ ಗೋಷ್ಠಿಯಲ್ಲಿ ಮಾಳವಿಕಾ ಅವರ ಮಾತುಗಳಿಗೆ ಸಾಹಿತ್ಯಾಸಕ್ತರ ಗದ್ದಲ ನನಗೆ ಹಿಡಿಸಲಿಲ್ಲ. ಇದೊಂದು ಹೊರತುಪಡಿಸಿ ಧಾರವಾಡ ಸಮ್ಮೇಳನ ತನ್ನ ಗೌರವವನ್ನು ಮತ್ತಷ್ಟುಹೆಚ್ಚಿಸಿಕೊಂಡಿದೆ. ಸಾಹಿತಿಗಳು ಪುಸ್ತಕ ಮಳಿಗೆಗಳಿಗೆ ಹೋದರೆ ಸಾಮಾನ್ಯ ಜನ ವಾಣಿಜ್ಯ ಮಳಿಗೆಯತ್ತ ಹೆಜ್ಜೆ ಹಾಕಿದರು. ಅವರವರ ಜೀವನಕ್ಕೆ ಬೇಕಾದ ಅಂಶಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಿದ್ದು ಸಂತಸ ತಂದಿದೆ ಎಂದು ಹಿರಿಯ ಲೇಖಕಿ ಬಿ.ಟಿ. ಲಲಿತಾ ನಾಯಕ ಅಭಿಪ್ರಾಯ ಮಂಡಿಸಿದರು.

 

click me!