ಆದೇಶ ನಿರ್ಲ್ಯಕ್ಷ: ಬಿಡಿಎ,ಬಿಬಿಎಂಬಿ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸ್ಸು

Published : Nov 11, 2017, 01:58 PM ISTUpdated : Apr 11, 2018, 01:06 PM IST
ಆದೇಶ ನಿರ್ಲ್ಯಕ್ಷ: ಬಿಡಿಎ,ಬಿಬಿಎಂಬಿ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸ್ಸು

ಸಾರಾಂಶ

ಅಂಗಡಿ- ಮುಂಗಟ್ಟುಗಳ ಶೇ.60ರಷ್ಟು ಭಾಗ ನಾಮಫಲಕ ಕನ್ನಡದಲ್ಲಿರಬೇಕು. ಕನ್ನಡ ಬಳಸದ ಅಂಗಡಿಗಳ ಪರವಾನಗಿ ರದ್ದುಗೊಳಿಸಬೇಕು ಮತ್ತು ಪಾಲಿಕೆಯಿಂದ ದಿನಪತ್ರಿಕೆಗಳಿಗೆ ನೀಡುವ ಜಾಹೀರಾತುಗಳನ್ನು ಕನ್ನಡದಲ್ಲಿಯೇ ನೀಡಬೇಕು. ಕೆಲವು ಕನ್ನಡ ಪತ್ರಿಕೆಗಳಿಗೂ ಇಂಗ್ಲಿಷ್‌ನಲ್ಲಿಯೇ ಜಾಹೀರಾತು ನೀಡಲಾಗುತ್ತಿದೆ. ಈ ಪ್ರವೃತ್ತಿ ಮೊದಲು ಕೊನೆಗೊಳಿಸುವಂತೆ ಸೂಚಿಸಿದ್ದರು. ಅಲ್ಲದೆ ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆ, ವೃತ್ತ, ಉದ್ಯಾನ, ಬಡಾವಣೆಗಳಲ್ಲಿ ಸಮರ್ಪಕವಾಗಿ ಕನ್ನಡ ಅನುಷ್ಠಾನವಾಗುತ್ತಿಲ್ಲ.

 

ಬೆಂಗಳೂರು(ನ.11): ಸತತ ಆದೇಶಗಳ ಹೊರತಾಗಿಯೂ ಆಡಳಿತದಲ್ಲಿ ಕನ್ನಡ ಅನುಷ್ಠಾನ ಹಾಗೂ ಬೆಂಗಳೂರಿನಲ್ಲಿ ಕನ್ನಡ ಬಳಕೆಗೆ ಆದ್ಯತೆ ನೀಡದೆ ನಿರ್ಲಕ್ಷ್ಯ ವಹಿಸಿರುವ ಬಿಬಿಎಂಪಿ, ಬಿಡಿಎ ಹಾಗೂ ನಗರ ಜಿಲ್ಲಾಡಳಿತದ ವಿರುದ್ಧ ಶಿಸ್ತು ಕ್ರಮಕ್ಕಾಗಿ ಸರ್ಕಾರಕ್ಕೆ ಶಿಫಾರಸು ಮಾಡಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಿರ್ಧರಿಸಿದೆ.

ಆಡಳಿತದಲ್ಲಿ ಕನ್ನಡ ಅನುಷ್ಠಾನದ ಬಗ್ಗೆ ರಾಜ್ಯ ಸರ್ಕಾರ 316 ಆದೇಶ ಹೊರಡಿಸಿದೆ. ಈ ಆದೇಶಗಳ ಸಮರ್ಪಕ ಅನುಷ್ಠಾನವನ್ನು ಬಿಬಿಎಂಪಿ ಹಾಗೂ ನಗರ ಜಿಲ್ಲಾಡಳಿತ ಮಾಡಿಲ್ಲ. ಕನ್ನಡ ಬಳಕೆ ಬಗ್ಗೆ ಜುಲೈ 17ರಂದು ಪರಿಶೀಲನೆ ನಡೆಸಿ ಬೆಂಗಳೂರಿನಲ್ಲಿ ಕನ್ನಡ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಸೂಚನೆ ನೀಡಲಾಗಿತ್ತು. ಜತೆಗೆ ಒಂದು ತಿಂಗಳ ಒಳಗಾಗಿ ಆದೇಶಗಳ ಪಾಲನೆ ಆಗದಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿತ್ತು.

ಆದರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಯಾವುದೇ ಆದೇಶ ಪಾಲನೆಯಾಗದ ಹಿನ್ನೆಲೆಯಲ್ಲಿ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲು ಪ್ರಾಧಿಕಾರ ಮುಂದಾಗಿದೆ. ಕನ್ನಡ ನಾಮಫಲಕ ಕಡ್ಡಾಯ: ಜುಲೈ 17ರಂದು ಬಿಬಿಎಂಪಿಗೆ ಭೇಟಿ ನೀಡಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ನಗರದಲ್ಲಿ ಕನ್ನಡ ನಾಮಫಲಕ ಅಳವಡಿಸದ ಅಂಗಡಿ ಮುಂಗಟ್ಟುಗಳ ಪರವಾನಗಿ ರದ್ದುಗೊಳಿಸಬೇಕು ಎಂದು ಬಿಬಿಎಂಪಿ ಆಯುಕ್ತರಿಗೆ ಆದೇಶಿಸಿದ್ದರು.

ಅಂಗಡಿ- ಮುಂಗಟ್ಟುಗಳ ಶೇ.60ರಷ್ಟು ಭಾಗ ನಾಮಫಲಕ ಕನ್ನಡದಲ್ಲಿರಬೇಕು. ಕನ್ನಡ ಬಳಸದ ಅಂಗಡಿಗಳ ಪರವಾನಗಿ ರದ್ದುಗೊಳಿಸಬೇಕು ಮತ್ತು ಪಾಲಿಕೆಯಿಂದ ದಿನಪತ್ರಿಕೆಗಳಿಗೆ ನೀಡುವ ಜಾಹೀರಾತುಗಳನ್ನು ಕನ್ನಡದಲ್ಲಿಯೇ ನೀಡಬೇಕು. ಕೆಲವು ಕನ್ನಡ ಪತ್ರಿಕೆಗಳಿಗೂ ಇಂಗ್ಲಿಷ್‌ನಲ್ಲಿಯೇ ಜಾಹೀರಾತು ನೀಡಲಾಗುತ್ತಿದೆ. ಈ ಪ್ರವೃತ್ತಿ ಮೊದಲು ಕೊನೆಗೊಳಿಸುವಂತೆ ಸೂಚಿಸಿದ್ದರು. ಅಲ್ಲದೆ ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆ, ವೃತ್ತ, ಉದ್ಯಾನ, ಬಡಾವಣೆಗಳಲ್ಲಿ ಸಮರ್ಪಕವಾಗಿ ಕನ್ನಡ ಅನುಷ್ಠಾನವಾಗುತ್ತಿಲ್ಲ. ಬಸವನಗುಡಿ ರಸ್ತೆಯನ್ನು ಬುಲ್ ಟೆಂಪಲ್ ರಸ್ತೆ ಎಂದು ನಾಮಫಲಕ ಹಾಕಲಾಗಿದೆ. ಬಸವನಗುಡಿಗೆ ತನ್ನದೇ ಆದ ಸಂಸ್ಕೃತಿ, ಚಾರಿತ್ರಿಕ ಮಹತ್ವವಿದೆ. ಈ ರೀತಿಯ ಹೆಸರು ಬದಲಿಸುವ ಮೂಲಕ ಸಂಸ್ಕೃತಿಗೆ ಅಪಚಾರ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ಐದು ವರ್ಷಗಳಿಂದ ಕನ್ನಡ ಕಡೆಗಣನೆಯಾಗುತ್ತಿದೆ. ಜಾಹೀರಾತು, ರಸ್ತೆಗಳ ನಾಮಫಲಕ, ಅಂಗಡಿ- ಮುಂಗಟ್ಟುಗಳ ನಾಮಫಲಕ, ಪೌರ ಕಾರ್ಮಿಕರಿಗೆ ನೀಡುತ್ತಿರುವ ಗುರುತಿನ ಚೀಟಿಯಲ್ಲಿ ಇಂಗ್ಲಿಷ್ ಬಳಸುತ್ತಿದೆ. ಈ ನಡೆ ಹೀಗೆ ಮುಂದುವರಿದರೆ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಎಚ್ಚರಿಕೆ ನೀಡಿದ್ದರು. ಆದರೆ ಬಿಬಿಎಂಪಿಯು ಕಳೆದ ನಾಲ್ಕು ತಿಂಗಳಿಂದ ಯಾವುದೇ ಕ್ರಮ ಕೈಗೊಂಡಿಲ್ಲ. ರಸ್ತೆಗಳಿಗೆ ಆಂಗ್ಲ ಪದದ ಬದಲು ಕನ್ನಡ ಪದದ ನಾಮಕರಣ ಮಾಡಲು ಕೌನ್ಸಿಲ್‌ನಲ್ಲೂ ವಿಷಯ ಪ್ರಸ್ತಾಪ ಮಾಡಿಲ್ಲ. ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡ ನಾಮಫಲಕ ಅಳವಡಿಕೆಗೂ ಕ್ರಮ ಕೈಗೊಂಡಿಲ್ಲ. ಹೀಗಾಗಿ ಕೆರಳಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಶಿಸ್ತು ಕ್ರಮಕ್ಕೆ ಮುಂದಾಗಿದೆ.

ಅಧಿಕಾರಿಗಳಿಂದ ಕನ್ನಡ ದ್ರೋಹ

ಇನ್ನು ಆ.19ರಂದು ನಗರ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿದ್ದ ಎಸ್.ಜಿ. ಸಿದ್ಧರಾಮಯ್ಯ, ಆಡಳಿತದಲ್ಲಿ ಕನ್ನಡ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಇದುವರೆಗೆ 316 ಆದೇಶಗಳನ್ನು ನೀಡಿದೆ. ಈ ಆದೇಶಗಳನ್ನು ಉಲ್ಲಂಘಿಸುವುದು ಹಕ್ಕುಚ್ಯುತಿ ಮಾಡಿದಂತೆ ಮತ್ತು ಕನ್ನಡಕ್ಕೆ ದ್ರೋಹ ಬಗೆದಂತೆ. ಒಂದು ತಿಂಗಳೊಳಗೆ ಲೋಪ ಸರಿಪಡಿಸಿಕೊಳ್ಳದಿದ್ದರೆ ಶಿಸ್ತುಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಜಿಲ್ಲಾಧಿಕಾರಿ ಮತ್ತು ಪುರಸಭೆಗಳ ಆಯುಕ್ತರಿಗೆ ಎಚ್ಚರಿಕೆ ನೀಡಿದ್ದರು. ಆದರೂ ಪ್ರಾಧಿಕಾರದ ನಿಯಮ ಪಾಲನೆಯಾಗಿಲ್ಲ.

ಶೇ.೧೦ ಕನ್ನಡಿಗ ಪೌರಕಾರ್ಮಿಕರು!

‘ಸಿ’ ಹಾಗೂ ‘ಡಿ’ ಗ್ರೂಪ್‌ನಲ್ಲಿ ಶೇ.100 ರಷ್ಟು ಕನ್ನಡದವರೇ ಇರಬೇಕು. ಆದರೆ ಬಿಬಿಎಂಪಿಯ ಪೌರಕಾರ್ಮಿಕರ ವಿಷಯದಲ್ಲಿ ಬಿಬಿಎಂಪಿ ಆಯುಕ್ತರ ಮಾಹಿತಿ ಪ್ರಕಾರವೇ ಶೇ.10ರಷ್ಟು ಮಾತ್ರ ಕನ್ನಡಿಗ ಪೌರಕಾರ್ಮಿಕರಿದ್ದಾರೆ. ಶೇ.80ರಷ್ಟು ತೆಲುಗು ಹಾಗೂ ಶೇ.10 ರಷ್ಟು ತಮಿಳಿಗರು ಇದ್ದಾರೆ. ಹೊರಗುತ್ತಿಗೆಯಿಂದ ಈ ಸಮಸ್ಯೆ ಉಂಟಾಗಿದ್ದರೂ, ಪಾಲಿಕೆಗೆ ಸೇವೆ ನೀಡುತ್ತಿರುವುದರಿಂದ ಕನ್ನಡಿಗರಿಗೆ ಆದ್ಯತೆ ನೀಡಬೇಕಾದುದು ಬಿಬಿಎಂಪಿ ಕರ್ತವ್ಯ' ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ  ಎಸ್.ಜಿ. ಸಿದ್ಧರಾಮಯ್ಯ ತಿಳಿಸಿದರು.

-ಶ್ರೀಕಾಂತ್.ಎನ್ ಗೌಡಸಂದ್ರ, ಕನ್ನಡಪ್ರಭ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವೈದ್ಯಾಧಿಕಾರಿಯಿಂದ ನರ್ಸ್‌ಗೆ ನಿರಂತರ ಕಿರುಕುಳ, ಆಸ್ಪತ್ರೆಯಲ್ಲೇ 20ಕ್ಕೂ ಹೆಚ್ಚು ನಿದ್ರೆ ಮಾತ್ರೆ ಸೇವಿಸಿ ಆತ್ಮ*ಹತ್ಯೆ ಯತ್ನ!
2 ಮಕ್ಕಳಾದ ನಂತರವು ಮುಸ್ಲಿಂ ಸೊಸೆಯ ಒಪ್ಪಿಕೊಳ್ಳದ ಪೋಷಕರು: ವಿಚ್ಛೇದನ ನೀಡಲು ಮುಂದಾದ ಮಗನಿಂದ ಆಯ್ತು ಘೋರ ಅಪರಾಧ