‘ಯಾವುದೇ ಮೈತ್ರಿಯಾದರೂ 2019ರಲ್ಲಿ ಕಾಂಗ್ರೆಸ್ ಗೆಲುವು ಖಚಿತ’

By Web DeskFirst Published Dec 26, 2018, 12:53 PM IST
Highlights

ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ವಿವಿಧ ಪಕ್ಷಗಳು ಚುನಾವಣಾ ತಯಾರಿಯಲ್ಲಿ ತೊಡಗಿವೆ. ಇದೇ ವೇಳೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರ ಶೇಖರ್ ರಾವ್ ಸದ್ಯ ರಾಷ್ಟ್ರ ರಾಜಕಾರಣಕ್ಕೆ ಧುಮುಕಿದ್ದು ಕಾಂಗ್ರೆಸ್ ಹಾಗೂ ಬಿಜೆಪಿಯೇತರ ಮೈತ್ರಿಗೆ ಮುಂದಾಗಿದ್ದಾರೆ. ಇದರಿಂದ ಕೆಸಿಆರ್ ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ. 

ನವದೆಹಲಿ: ಕಾಂಗ್ರೇಸೇತರ ಪಕ್ಷಗಳೊಂದಿಗೆ ಸೇರಿ ರಾಜಕೀಯ ವಿಭಜನೆ ಮಾಡುತ್ತಿರುವ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ ಎಂದು  ಕಾಂಗ್ರೆಸ್ ಮುಖಂಡರು ಆರೋಪಿಸಿದೆ. 

TRS ಮುಖಂಡ ಹಾಗೂ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ವಿರುದ್ಧ ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಈ ಆರೋಪ ಮಾಡಿದ್ದಾರೆ. 

ಬಿಜೆಪಿ ಹಾಗೂ ಕಾಂಗ್ರೇಸೇತರ ಮೈತ್ರಿಗೆ ಮುಂದಾಗಿರುವ ಕೆಸಿಆರ್ ಈಗಾಗಲೇ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದೇ ಬೆನ್ನಲ್ಲೇ ಕೆಸಿಆರ್ ವಿರುದ್ಧ  ಆರೋಪ ಕೇಳಿ ಬಂದಿದೆ. 

ಅಲ್ಲದೇ ಕಾಂಗ್ರೆಸ್ ಅತೀ ಹೆಚ್ಚಿನ ಸಂಖ್ಯೆಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು 2019ನೇ ಸಾಲಿನ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವುದು ಖಚಿತ. 2019ನೇ ಸಾಲಿನಲ್ಲಿ ಕೆಸಿಆರ್ ಬೆಂಬಲವಿಲ್ಲದಿದ್ದರೂ ಯುಪಿಎ ಕೇಂದ್ರದಲ್ಲಿ ಅಧಿಕಾರಕ್ಕೆ ಏರಲಿದೆ ಎಂದು ಸಿಂಘ್ವಿ ಹೇಳಿದ್ದಾರೆ. 

ನೀವು ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಳ್ಳದ ಪಕ್ಷಗಳೊಂದಿಗೆ ಮೈತ್ರಿಗೆ ಮುಂದಾದಲ್ಲಿ ಅದು ರಾಜಕೀಯ ವಿಭಜನೆ ಮಾಡಿದಂತೆಯೇ. ಈ ಮೂಲಕ  ಆಡಳಿತ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದೀರಿ. ವಿಪಕ್ಷಕ್ಕೆ ಬೆಂಬಲ ನೀಡಲು ಬಯಸುತ್ತಿಲ್ಲ ಎಂದಾದಲ್ಲಿ ಪರೋಕ್ಷವಾಗಿ ಆಡಳಿತ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದೀರಿ ಎಂದೇ ಅರ್ಥ ಎಂದು ಕಾಂಗ್ರೆಸ್ ಮುಖಂಡ ಸಿಂಘ್ವಿ ಹೇಳಿದ್ದಾರೆ.  

ಸದ್ಯ ಪಂಚರಾಜ್ಯಗಳಲ್ಲಿ ಮೂರು ರಾಜ್ಯಗಳನ್ನು ತನ್ನ ಕೈ ವಶ ಮಾಡಿಕೊಂಡು ಕಾಂಗ್ರೆಸ್ ಅಧಿಕಾರಕ್ಕೆ ಏರಿದೆ. ಇದೇ ಬೆನ್ನಲ್ಲೇ  ಯಾರು ಯಾರನ್ನು ಬೇಕಾದರೂ ಭೇಟಿ ಮಾಡುವ ಸ್ವಾತಂತ್ರ್ಯವಿದ್ದು, ಯಾವುದೇ ಬೆಳವಣಿಗೆಗಳಾದರೂ ಕಾಂಗ್ರೆಸ್ ಗೆಲುವು ಖಚಿತ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

click me!