2019ನೇ ಸಾಲಿನ ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ಸಂದರ್ಭದಲ್ಲಿ ವಿವಿಧ ಪಕ್ಷಗಳು ಸಿದ್ಧತೆಯಲ್ಲಿ ತೊಡಗಿದ್ದು, ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಅವರು ಈ ನಿಟ್ಟಿನಲ್ಲಿ ತಮ್ಮ ಭಾರತ ಯಾತ್ರೆ ಆರಂಭಿಸಿದ್ದಾರೆ.
ಹೈದರಾಬಾದ್: 2019ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಮತ್ತು ಬಿಜೆಪಿಯೇತರ ಪ್ರಾದೇಶಿಕ ಪಕ್ಷಗಳ ಮೈತ್ರಿಕೂಟ ರಚನೆಗೆ ಯತ್ನಿಸುತ್ತಿರುವ ತೆಲಂಗಾಣ ರಾಷ್ಟ್ರೀಯ ಸಮಿತಿ ನಾಯಕ, ಸಿಎಂ ಕೆ.ಸಿ.ಚಂದ್ರಶೇಖರಾವ್ ಈ ನಿಟ್ಟಿನಲ್ಲಿ ಭಾನುವಾರದಿಂದ ತಮ್ಮ ‘ಭಾರತ ಯಾತ್ರೆ’ ಆರಂಭಿಸಿದ್ದಾರೆ.
ಭಾನುವಾರ ವಿಶಾಖಪಟ್ಟಣಂನಲ್ಲಿರುವ ಶಾರದಾ ಪೀಠಕ್ಕೆ ಕುಟುಂಬ ಸಮೇತರಾಗಿ ವಿಶೇಷ ವಿಮಾನದಲ್ಲಿ ಆಗಮಿಸಿದ ಕೆಸಿಆರ್ ಅವರು, ಶ್ರೀ ಸ್ವರೂಪಾನಂದೇಂದ್ರ ಸರಸ್ವತಿ ಸ್ವಾಮಿಗಳ ಆಶಿರ್ವಾದ ಪಡೆದು ಅಲ್ಲಿಂದ ಒಡಿಶಾಕ್ಕೆ ತೆರಳಿದರು. ಭಾನುವಾರ ಸಂಜೆ ಭುವನೇಶ್ವರದಲ್ಲಿ ಒಡಿಶಾ ಸಿಎಂ ನವೀನ ಪಟ್ನಾಯಕ್ ಅವರನ್ನು ಭೇಟಿ ಮಾಡಿದ ಕೆಸಿಆರ್, ಮೈತ್ರಿಕೂಟ ರಚನೆ ಕುರಿತು ಮಾತುಕತೆ ನಡೆಸಿದರು. ಸೋಮವಾರ ಪ್ರಸಿದ್ಧ ಕೋನಾರ್ಕ್ ಮತ್ತು ಪುರಿ ಜಗನ್ನಾಥ ದೇಗುಲಕ್ಕೆ ಭೇಟಿ ನೀಡಲಿರುವ ಕೆಸಿಆರ್. ಬಳಿಕ ಪಶ್ಚಿಮ ಬಂಗಾಳಕ್ಕೆ ತೆರಳಿ, ಅಲ್ಲಿ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.
ಡಿ.25ಕ್ಕೆ ದೆಹಲಿಗೆ ಆಗಮಿಸಿ 2-3 ಉಳಿದುಕೊಳ್ಳಲಿರುವ ರಾವ್, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಗಳಾದ ಎಸ್‌ಪಿಯ ಅಖಿಲೇಶ್ ಮತ್ತು ಬಿಎಸ್‌ಪಿಯ ಮಾಯಾವತಿ ಅವರನ್ನು ಭೇಟಿ ಮಾಡಲಿದ್ದಾರೆ.