ಶಬರಿಮಲೆಯಲ್ಲಿ ಹೈಡ್ರಾಮಾ : 11 ಮಹಿಳೆಯರು ವಾಪಸ್‌

By Web DeskFirst Published Dec 24, 2018, 8:28 AM IST
Highlights

ಶಬರಿಮಲೆಯಲ್ಲಿ ಮತ್ತೊಮ್ಮೆ ಹೈ ಡ್ರಾಮಾವೇ ನಡೆದಿದೆ. ಭಾನುವಾರ ಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಿಸಲು ತಮಿಳುನಾಡಿನ 18 ಮಹಿಳೆಯರಿದ್ದ ಎರಡು ಪ್ರತ್ಯೇಕ ತಂಡ ಪ್ರಯತ್ನಿಸಿ ವಾಪಸಾದಗಿದೆ. 

ಪಂಪಾ: ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಿಸಲು ತಮಿಳುನಾಡಿನ 18 ಮಹಿಳೆಯರಿದ್ದ ಎರಡು ಪ್ರತ್ಯೇಕ ತಂಡ ಭಾನುವಾರ ಪ್ರಯತ್ನಿಸಿದ್ದು, ಈ ವೇಳೆ ಹೈಡ್ರಾಮಾವೇ ನಡೆದುಹೋಗಿದೆ.

ಪೊಲೀಸ್‌ ರಕ್ಷಣೆಯಲ್ಲಿ ಪಂಪಾದಿಂದ ಬೆಟ್ಟಹತ್ತಲು 11 ಮಹಿಳೆಯರ ಮೊದಲು ಬರುತ್ತಿದ್ದಂತೆ, ನೂರಾರು ಸಂಖ್ಯೆಯಲ್ಲಿದ್ದ ಅಯ್ಯಪ್ಪ ಭಕ್ತರು ಹಾದಿ ಮಧ್ಯೆ ಕೂತು ಕಾಲ್ನಡಿಗೆಗೆ ಅಡ್ಡಿಪಡಿಸಿದ್ದಾರೆ. ಪೊಲೀಸರು ಭಕ್ತರನ್ನು ತೆರವುಗೊಳಿಸಲು ಯತ್ನಿಸಿದಾಗ, 11 ಮಹಿಳೆಯರನ್ನು ಅಯ್ಯಪ್ಪ ಭಕ್ತರು ಅಟ್ಟಾಡಿಸಿಕೊಂಡು ಬಂದಿದ್ದಾರೆ. ಇದರಿಂದ ಹೆದರಿದ ಮಹಿಳಾ ಭಕ್ತರು ಭದ್ರತಾ ಕೋಣೆಯತ್ತ ಓಡಿ ಆಶ್ರಯ ಪಡೆದುಕೊಂಡಿದ್ದಾರೆ. ಬಳಿಕ ತಮ್ಮ ಯಾತ್ರೆಯನ್ನು ಮೊಟಕುಗೊಳಿಸಿ ವಾಪಸಾಗಿದ್ದಾರೆ.

ಇದೇ ವೇಳೆ, ತಾವು ಅಯ್ಯಪ್ಪ ದರ್ಶನ ಪಡೆಯಲೆಂದೇ ಬಂದಿದ್ದೆವು. ಆದರೆ ಬಲವಂತ ಮಾಡಿ ವಾಪಸ್‌ ಕಳುಹಿಸಲಾಗುತ್ತಿದೆ ಎಂದು ಮಹಿಳೆಯರು ದೂರಿದ್ದಾರೆ. ಆದರೆ ಮಹಿಳಾ ಭಕ್ತರೇ ಸ್ವಯಂಪ್ರೇರಿತರಾಗಿ ವಾಪಸ್‌ ಹೋಗಿದ್ದಾರೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

8 ಮಹಿಳೆಯರಿದ್ದ ಇನ್ನೊಂದು ತಂಡ ಕೂಡಾ ಇದೇ ರೀತಿಯ ಪ್ರತಿಭಟನೆಗೆ ಹೆದರಿ, ಯಾತ್ರೆ ತ್ಯಜಿಸಿದೆ.

ಭಾರಿ ಹೈಡ್ರಾಮಾ:  ಅಯ್ಯಪ್ಪ ಬ್ರಹ್ಮಚಾರಿಯಾಗಿರುವ ಹಿನ್ನೆಲೆಯಲ್ಲಿ ಶಬರಿಮಲೆ ದೇಗುಲಕ್ಕೆ 10ರಿಂದ 50 ವರ್ಷದೊಳಗಿನ, ಋುತುಚಕ್ರದಲ್ಲಿರುವ ಮಹಿಳೆಯರು ಪ್ರವೇಶಿಸಕೂಡದು ಎಂಬ ಕಟ್ಟಪ್ಪಣೆ 800 ವರ್ಷಗಳಿಂದ ಇದೆ. ಕಳೆದ ಸೆ.28ರಂದು ಇದನ್ನು ಸುಪ್ರೀಂಕೋರ್ಟ್‌ ರದ್ದುಗೊಳಿಸಿ, ಯಾವುದೇ ವಯೋಮಾನದ ಮಹಿಳೆಯರು ಅಯ್ಯಪ್ಪ ದೇಗುಲಕ್ಕೆ ಹೋಗಬಹುದು ಎಂದು ಹೇಳಿತ್ತು. ಅಂದಿನಿಂದಲೂ ದೇಗುಲ ಪ್ರವೇಶಿಸಲು ಮಹಿಳೆಯರು ಯತ್ನಿಸುತ್ತಿದ್ದಾರಾದರೂ ಫಲ ಸಿಕ್ಕಿಲ್ಲ.

ಈ ನಡುವೆ, ಚೆನ್ನೈನ ‘ಮನಿಥಿ’ ಸಂಘಟನೆಯ ನೇತೃತ್ವದಲ್ಲಿ ತಮಿಳುನಾಡು, ಕರ್ನಾಟಕ, ಒಡಿಶಾ, ಆಂಧ್ರಪ್ರದೇಶದ 40 ಮಹಿಳೆಯರು ಅಯ್ಯಪ್ಪ ದೇಗುಲ ಪ್ರವೇಶಿಸಲು ಶಬರಿಮಲೆಯತ್ತ ಹೊರಟಿದ್ದಾರೆ ಎಂಬ ವರದಿಗಳು ಬಂದಿದ್ದವು. ಅದರಂತೆ ಮೊದಲ ಕಂತಿನಲ್ಲಿ 11 ಮಹಿಳೆಯರು ಭಾನುವಾರ ಬೆಳಗ್ಗೆ ಪಂಪಾ ತಲುಪಿದರು. ಈ ವೇಳೆ ಅಯ್ಯಪ್ಪ ಭಕ್ತರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪೊಲೀಸರು ಭದ್ರತೆ ಒದಗಿಸಿದರು. ಇದೇ ವೇಳೆ, ಮಹಿಳೆಯರ ಮನವೊಲಿಕೆಗೂ ಯತ್ನಿಸಿದರು. ಆದರೆ ಅಯ್ಯಪ್ಪ ದರ್ಶನ ಪಡೆಯದೇ ವಾಪಸ್‌ ಹೋಗುವುದಿಲ್ಲ ಎಂದು ಮಹಿಳೆಯರು ಪಟ್ಟು ಹಿಡಿದಾಗ, ಪೊಲೀಸರು ಅಡಕತ್ತರಿಯಲ್ಲಿ ಸಿಲುಕಿದರು.

ಪಂಪಾದಿಂದ ಅಯ್ಯಪ್ಪ ಸನ್ನಿಧಾನಕ್ಕೆ 5 ಕಿ.ಮೀ. ದೂರವಿದ್ದು, ಮಹಿಳಾ ಭಕ್ತರನ್ನು ಪೊಲೀಸರು ಭದ್ರತೆಯಲ್ಲಿ ಕರೆದೊಯ್ಯಲು ಮುಂದಾದರು. 100 ಮೀಟರ್‌ ಕ್ರಮಿಸುವಷ್ಟರಲ್ಲಿ ಅಯ್ಯಪ್ಪ ಭಕ್ತರ ವಿರೋಧ ವ್ಯಕ್ತವಾಯಿತು. ಹಾದಿಯಲ್ಲಿ ಕುಳಿತು ಪ್ರತಿಭಟಿಸಿ, ಜಪ ಮಾಡಿದರು. ಪೊಲೀಸರು ತೆರವುಗೊಳಿಸಲು ಮುಂದಾದಾಗ ಅಟ್ಟಾಡಿಸಿಕೊಂಡು ಬಂದರು. ಆಗ ಮಹಿಳಾ ಭಕ್ತರು ಹೆದರಿ ವಾಪಸ್‌ ಹೋದರು.

ಇದೇ ವೇಳೆ ಶಬರಿಮಲೆಯತ್ತ ಪ್ರಯಾಣ ಕೈಗೊಂಡಿದ್ದ ಬುಡಕಟ್ಟು ನಾಯಕಿ ಅಮ್ಮಣ್ಣಿ ಸಹ ಅಯ್ಯಪ್ಪ ದರ್ಶನದಿಂದ ಹಿಂದೆ ಸರಿದಿದ್ದಾರೆ. ಮಹಿಳಾ ಭಕ್ತರ ದರ್ಶನ ಯತ್ನ ವಿರೋಧಿಸಿ ಭಾನುವಾರ ಹಲವೆಡೆ ನಡೆದ ವ್ಯಾಪಕ ಪ್ರತಿಭಟನೆ ಹಿನ್ನೆಲೆಯಲ್ಲಿ, ಅಮ್ಮಣ್ಣಿ ನೇತೃತ್ವದ 8 ಸದಸ್ಯರ ತಂಡವನ್ನು ಕೇರಳ ಪೊಲೀಸರು, ಇಲ್ಲಿನ ಏರುಮೇಲಿ ಠಾಣೆಗೆ ಕರೆದೊಯ್ದಿದ್ದಾರೆ. ಈ ಸಂದರ್ಭದಲ್ಲಿ ಅಯ್ಯಪ್ಪ ಭಕ್ತರು, ಠಾಣೆ ಎದುರಿನಲ್ಲೇ ಮಹಿಳೆಯರ ವಿರುದ್ಧ ಧರಣಿ ನಡೆಸಿ ಘೋಷಣೆ ಕೂಗಿದರು. ಈ ಪ್ರತಿಭಟನೆಗೆ ಬೇಸ್ತುಬಿದ್ದ ಅಮ್ಮಣ್ಣಿ ಅವರು, ಶಬರಿಮಲೆ ಪ್ರವಾಸ ಕೈಬಿಟ್ಟು, ವಾಪಸ್‌ ಹುಟ್ಟೂರಿಗೆ ಹೋಗುತ್ತಿರುವುದಾಗಿ ಹೇಳಿದರು.

click me!