
ಬೆಂಗಳೂರು (ನ.13): ಗೌರಿ ಲಂಕೇಶ್ ಹತ್ಯೆಯ ತನಿಖೆ ವಿಚಾರವಾಗಿ ಸರ್ಕಾರ ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಾ ಈ ಕೇಸ್ ವಿಚಾರದಲ್ಲಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಗೌರಿ ಹಂತಕರು ಯಾರು ಎಂಬುದು ಗೊತ್ತಾಗಿದೆ, ಶೀಘ್ರದಲ್ಲೇ ಬಂಧಿಸುತ್ತೇವೆ ಅಂತ ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರೆ ಗೌರಿ ಹಂತಕರನ್ನು ಪತ್ತೆ ಹಚ್ಚುವುದಕ್ಕೆ ಆಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಇಬ್ಬರ ಪೈಕಿ ಯಾರು ಸುಳ್ಳು ಹೇಳುತ್ತಿದ್ದಾರೆ ಎಂದು ರಾಜ್ಯ ಕೇಳುತ್ತಿದೆ.
ತನಿಖೆ ಬಗ್ಗೆ ಗೃಹ ಸಚಿವರಿಂದ ದಿನಕ್ಕೊಂದು ಮಾತು..!
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಡೆದು ಈಗಾಗಲೇ ಎರಡು ತಿಂಗಳು ಕಳೆದುಹೋಗಿದೆ. ತನಿಖೆ ನಡೆಸುತ್ತಿರುವ ಎಸ್ಐಟಿ ಗೆ ಇದುವರೆಗೂ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿಲ್ಲ. ಎಸ್ಐಟಿ ಅಧಿಕಾರಿಗಳು ತಮ್ಮ ಪಾಡಿಗೆ ತಾವು ತನಿಖೆಯಲ್ಲಿದ್ರೆ ಗೃಹ ಸಚಿವರು ಮಾತ್ರ ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಗೃಹ ಸಚಿವ ರಾಮಲಿಂಗಾರೆಡ್ಡಿ ಅವರ ಪ್ರಕಾರ ಗೌರಿ ಹತ್ಯೆ ಮಾಡಿದವರು ಯಾರು ಅನ್ನೋದು ಗೊತ್ತಾಗಿದೆ. ಆದರೆ ಅವರನ್ನು ಈಗ ಬಂಧಿಸಲು ಸಾಧ್ಯವಿಲ್ಲ. ಶೀಘ್ರದಲ್ಲೇ ಬಂಧಿಸಿ ಬಿಡ್ತೀವಿ ಅನ್ನೋದು. ಹಂತಕರನ್ನು ಬಂಧಿಸುತ್ತೇವೆ ಅನ್ನುತ್ತಾರೆಯೇ ಹೊರತು ಇದುವರೆಗೂ ಬಂಧಿಸಿಲ್ಲ. ಆದರೆ ಸಿಎಂ ಸಿದ್ದರಾಮಯ್ಯ ಮಾತ್ರ ಇದಕ್ಕೆ ತದ್ವಿರುದ್ಧ ಹೇಳಿಕೆ ನೀಡಿದ್ದಾರೆ. ಇವತ್ತು ಸುವರ್ಣ ವಿಧಾನ ಸೌಧದಲ್ಲಿ ಗೌರಿ ಸಾವಿಗೆ ಸಂತಾಪ ಸೂಚಿಸಿ ಮಾತನಾಡಿದ ಸಿಎಂ ಗೌರಿ ಹತ್ಯೆ ಮಾಡಿದವರನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದಿದ್ದಾರೆ.
ಗೌರಿ ಹತ್ಯೆ ಮಾಡಿದ ಹಂತಕರನ್ನು ಶೀಘ್ರದಲ್ಲಿ ಬಂಧಿಸಬೇಕು ಅನ್ನೋದು ಎಲ್ಲರ ಒಕ್ಕೋರಲಿನ ಆಗ್ರಹ. ಆದ್ರೆ ಸರ್ಕಾರ ಈ ವಿಚಾರವಾಗಿ ದಿನಕ್ಕೊಂದು ಹೇಳಿಕೆ ನೀಡುತ್ತಾ ರಾಜ್ಯದ ಜನರಲ್ಲಿ ಗೊಂದಲ ಮೂಡಿಸುತ್ತಿದೆ. ಈ ಬಗ್ಗೆ ಗೌರಿ ಲಂಕೇಶ್ ಸಹೋದರಿ ಕವಿತಾ ಲಂಕೇಶ್ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಗೌರಿ ಹತ್ಯೆ ತನಿಖೆಯ ಬಗ್ಗೆ ಸಾರ್ವಜನಿಕವಾಗಿ ತದ್ವಿರುದ್ಧ ಹೇಳಿಕೆಗಳನ್ನು ನೀಡುತ್ತಿರುವ ಸರ್ಕಾರ ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸುತ್ತಿದೆ ಎಂಬ ಆರೋಪಗಳು ವ್ಯಕ್ತವಾಗುತ್ತಿವೆ. ಹತ್ಯೆಯ ಸುಳಿವು ನೀಡಿದವರಿಗೆ 10 ಲಕ್ಷ ಕೊಡ್ತೀವಿ ಅಂತ ಸರ್ಕಾರ ಒಮ್ಮೆ ಹೇಳಿದ್ರೆ ಮತ್ತೊಮ್ಮೆ ಗೌರಿ ಹತ್ಯೆಯ ಸುಳಿವು ಸಿಕ್ಕಿದೆ ಎನ್ನುತ್ತಿದೆ. ಗೃಹ ಸಚಿವರು ಒಂದು ಹೇಳಿಕೆ ನೀಡಿದರೆ, ಸಿಎಂ ಮತ್ತೊಂದು ಹೇಳಿಕೆ ನೀಡುತ್ತಿದ್ದಾರೆ. ರಾಜಕೀಯ ಲಾಭಕ್ಕಾಗಿ ಗೌರಿ ಹತ್ಯೆಯನ್ನು ಸರ್ಕಾರ ಬಳಸಿಕೊಳ್ಳುತ್ತಿದೆ ಎಂಬ ಆರೋಪಗಳು ವ್ಯಕ್ತವಾಗಿವೆ. ಈ ರೀತಿಯ ಹೇಳಿಕೆಗಳನ್ನು ನೀಡಿ ಜನರ ದಾರಿ ತಪ್ಪಿಸುವ ಕೆಲಸವಂತೂ ನಡೆಯುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.