
ಬೆಂಗಳೂರು [ಸೆ.18]: ಉನ್ನತ ಶಿಕ್ಷಣ ಪರಿಷತ್ ಹಾಗೂ ಐ ಕೇರ್ ಸಂಸ್ಥೆ ಸಹಯೋಗದಲ್ಲಿ ಪ್ರಕಟಿಸಿರುವ ‘ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ರೇಟಿಂಗ್ ಫ್ರೇಂವರ್ಕ್-2019’ (ಕೆ-ಎಸ್‌ಯುಆರ್‌ಎಫ್) ವರದಿಯಲ್ಲಿ ಹತ್ತು ವರ್ಷ ಮೇಲ್ಪಟ್ಟವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಪ್ರಥಮ ಹಾಗೂ ಕೆಎಲ್‌ಇ ಶಿಕ್ಷಣ ಸಂಸ್ಥೆಯು ದ್ವಿತೀಯ ಸ್ಥಾನ ಪಡೆದಿದೆ. ಹೊಸ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಪಿಇಎಸ್ ಪ್ರಥಮ ಸ್ಥಾನ ಪಡೆದಿದೆ.
ಮಾನವ ಸಂಪನ್ಮೂಲ ಸಚಿವಾಲಯ (ಎಮ್‌ಎಚ್‌ಆರ್‌ಡಿ) ಪ್ರಕಟಿಸುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ರ‌್ಯಾಂಕ್ ಫ್ರೇಮ್‌ವರ್ಕ್ (ಎನ್‌ಐಆರ್‌ಎಫ್) ಮಾದರಿಯಲ್ಲಿ ರಾಜ್ಯದ 43 ವಿಶ್ವವಿದ್ಯಾಲಯಗಳಿಗೆ ರ‌್ಯಾಂಕ್ ನೀಡಲಾಗಿದೆ. ಎನ್‌ಐಆರ್‌ಎಫ್, ನ್ಯಾಕ್ ಮತ್ತು ಜಾಗತಿಕ ಮಟ್ಟದ ರೇಟಿಂಗ್ ಸುಧಾರಿಸಲು ಮೌಲ್ಯಮಾಪನ ಮತ್ತು ರ‌್ಯಾಂಕ್ ನೀಡಲಾಗಿದೆ. ಮಣಿಪಾಲ್ ವಿಶ್ವವಿದ್ಯಾಲಯವು ಸಾವಿರ ಅಂಕಗಳ ಪೈಕಿ 841 ಮತ್ತು ಐದು ಸ್ಟಾರ್ ಪಡೆದಿದೆ. ಎರಡನೇ ಸ್ಥಾನ ಪಡೆದಿರುವ ಕೆಎಲ್‌ಇ ಸಂಸ್ಥೆಯು 745 ಅಂಕಗಳು ಹಾಗೂ ನಾಲ್ಕು ಸ್ಟಾರ್ ಪಡೆದಿದೆ.
‘ಇಂಡಿಯನ್ ಸೆಂಟರ್ ಫಾರ್ ಅಕಾಡೆಮಿಕ್ ರ‌್ಯಾಂಕ್ ಆ್ಯಂಡ್ ಎಕ್ಸಲೆನ್ಸ್’ ಸಂಶೋಧನಾ ಮತ್ತು ವಿಮರ್ಶಾ ವಿಭಾಗವಾಗಿರುವ ಐಕೇರ್ ಸಂಸ್ಥೆಯು ವರದಿಯನ್ನು ಸಿದ್ಧಪಡಿಸಿದೆ. ವಿಶ್ವವಿದ್ಯಾಲಯಗಳ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗುರುತಿಸುವುದು ಹಾಗೂ ಸುಧಾರಣಾ ಕ್ರಮಗಳನ್ನು ವರದಿಯಲ್ಲಿ ತಿಳಿಸಲಾಗಿದೆ. ವರದಿಯನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಮಂಗಳವಾರ ಬಿಡುಗಡೆಗೊಳಿಸಿದರು.
ಮಾನದಂಡ:
ಪ್ರಮುಖವಾಗಿ ಉತ್ಕೃಷ್ಟಸಂಶೋಧನೆ, ಆವಿಷ್ಕಾರ, ಬೋಧನೆ ಗುಣಮಟ್ಟ, ಉದ್ಯೋಗಾವಕಾಶಗಳು, ಮೂಲ ಸೌಕರ್ಯಗಳು ಮತ್ತು ಸಾಮಾಜಿಕ ಪರಿಣಾಮಗಳನ್ನು ಒಳಗೊಂಡ ಐದು ಮಾನದಂಡಗಳು ಹಾಗೂ 25ಕ್ಕೂ ಹೆಚ್ಚಿನ ಸೂಚಕಗಳನ್ನು ಪರಿಗಣಿಸಲಾಗಿದೆ.
ನಾಲ್ಕು ವಿಭಾಗಗಳಲ್ಲಿ ವಿಂಗಡಣೆ ಮಾಡಿ ನೀಡಲಾಗಿದೆ. ಹೊಸ ವಿಶ್ವವಿದ್ಯಾಲಯ ಆರಂಭವಾದ 0-5 ವರ್ಷ, ಯುವ ವಿಶ್ವವಿದ್ಯಾಲಯ 5-10 ವರ್ಷ, ಸಂಸ್ಥಾಪಿತ ವಿಶ್ವವಿದ್ಯಾಲಯ (10ಕ್ಕಿಂತ ಹೆಚ್ಚಿನ ವರ್ಷ), ವಿಶಿಷ್ಟವಿಶ್ವವಿದ್ಯಾಲಯ (ಸಂಗೀತ, ಕೃಷಿ, ತೋಟಗಾರಿಕೆ, ಜಾನಪದ, ಕನ್ನಡ ಇದರಲ್ಲಿ ಒಂದು ವಿಷಯದ ವೈಶಿಷ್ಟ್ಯತೆ) ವಿಭಾಗಗಳಾಗಿ ವಿಂಗಡಿಸಿ ರ‌್ಯಾಂಕ್ ನೀಡಲಾಗಿದೆ.
ವಿವಿಗಳ ಪಟ್ಟಿ:
10 ವರ್ಷ ಮೇಲ್ಪಟ್ಟವಿಶ್ವವಿದ್ಯಾಲಯ: 1.ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್, ಮಣಿಪಾಲ. 2.ಕೆಎಲ್‌ಇ ವಿಶ್ವವಿದ್ಯಾಲಯ, ಬೆಳಗಾವಿ. 3.ಕುವೆಂಪು ವಿಶ್ವವಿದ್ಯಾಲಯ, ಶಿವಮೊಗ್ಗ. 4.ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ. 5.ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ.
ಯುವ ವಿಶ್ವವಿದ್ಯಾಲಯ: 1. ಜಗದ್ಗುರು ಶ್ರೀ ಶಿವರಾತ್ರೀಶ್ವರ ವಿಶ್ವವಿದ್ಯಾಲಯ, ಮೈಸೂರು. 2.ಜೈನ್ ವಿಶ್ವವಿದ್ಯಾಲಯ, ಬೆಂಗಳೂರು. 3. ನಿಟ್ಟೆವಿಶ್ವವಿದ್ಯಾಲಯ, ಮಂಗಳೂರು. 4.ಯನಪೋಯಾ ವಿಶ್ವವಿದ್ಯಾಲಯ, ಮಂಗಳೂರು. 5.ಕ್ರೈಸ್ಟ್ ವಿಶ್ವವಿದ್ಯಾಲಯ, ಬೆಂಗಳೂರು.
ವಿಶೇಷ ವಿಶ್ವವಿದ್ಯಾಲಯ: 1.ಧಾರವಾಡ ಕೃಷಿ ವಿವಿ. 2.ಬೆಂಗಳೂರು ಕೃಷಿ ವಿವಿ. 3.ಕರ್ನಾಟಕ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ. 4.ಎಸ್-ವ್ಯಾಸ, ಬೆಂಗಳೂರು. 5.ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ.
ಹೊಸ ವಿಶ್ವವಿವಿ : ಪಿಇಎಸ್ ಪ್ರಥಮ
ಬೋಧನಾ ಗುಣಮಟ್ಟ, ಮೂಲ ಸೌಕರ್ಯ ಮತ್ತು ಉದ್ಯೋಗಾವಕಾಶ ಕಲ್ಪಿಸುವಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾಲಯವು ಹೊಸ ವಿಶ್ವವಿದ್ಯಾಲಯಗಳ ಪೈಕಿ ಪ್ರಥಮ ರಾರಯಂಕ್ ಪಡೆದಿದೆ. ಸಾವಿರ ಅಂಕಗಳಲ್ಲಿ 789 ಅಂಕಗಳು ಮತ್ತು ಐದು ಸ್ಟಾರ್ ಪಡೆದಿದೆ. ನಂತರದ ಸ್ಥಾನದಲ್ಲಿ ಎಂ.ಎಸ್.ರಾಮಯ್ಯ ವಿಶ್ವವಿದ್ಯಾಲಯ, ರೇವಾ ವಿಶ್ವವಿದ್ಯಾಲಯ, ದಯಾನಂದ ಸಾಗರ್ ವಿಶ್ವವಿದ್ಯಾಲಯ ಮತ್ತು ಕೆಎಲ್‌ಇ ಟೆಕ್ನಾಲಜಿ ವಿಶ್ವವಿದ್ಯಾಲಯ ಸ್ಥಾನ ಪಡೆದಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.