ರಾಜ್ಯದಲ್ಲಿ 1000 ಗಂಡಿಗೆ ಕೇವಲ 890 ಹೆಣ್ಣು

By suvarna Web DeskFirst Published Nov 21, 2017, 5:19 PM IST
Highlights

ರಾಜ್ಯದಲ್ಲಿ ಲಿಂಗಾನುಪಾತದಲ್ಲಿ ಭಾರೀ ವ್ಯತ್ಯಾಸ ಉಂಟಾಗುತ್ತಿದ್ದು ಹೆಣ್ಣು ಭ್ರೂಣ ಹತ್ಯೆ ಹೆಚ್ಚಾಗುತ್ತಿದೆ. ಎರಡು ವರ್ಷಗಳ ಹಿಂದೆ ಸಾವಿರಕ್ಕೆ 917ರಷ್ಟಿದ್ದ ಮಹಿಳಾ ಅನುಪಾತ 890ಕ್ಕೆಕುಸಿದಿದೆ.

ಬೆಂಗಳೂರು (ನ.21): ರಾಜ್ಯಾದ್ಯಂತ ಹಲವು ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ಪ್ರಸೂತಿ ತಜ್ಞರ ಶಿಫಾರಸು ಇಲ್ಲದೆ ಸ್ಕ್ಯಾನಿಂಗ್ ಮಾಡಿ ಲಿಂಗ ಪತ್ತೆ ಮಾಡಲಾಗುತ್ತಿದೆ. ಈ ಮೂಲಕ ರಾಕ್ಷಸರಂತೆ ವರ್ತಿಸುತ್ತಿರುವ ಸ್ಕ್ಯಾನಿಂಗ್ ಕೇಂದ್ರದ ಮಾಲೀಕರ ಮೇಲೆ ಕ್ರಿಮಿನಲ್ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ವಿಧಾನ ಪರಿಷತ್‌ನ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಗಣೇಶ್ ಕಾರ್ಣಿಕ್, ರಾಜ್ಯದಲ್ಲಿ ಲಿಂಗಾನುಪಾತದಲ್ಲಿ ಭಾರೀ ವ್ಯತ್ಯಾಸ ಉಂಟಾಗುತ್ತಿದ್ದು ಹೆಣ್ಣು ಭ್ರೂಣ ಹತ್ಯೆ ಹೆಚ್ಚಾಗುತ್ತಿದೆ. ಎರಡು ವರ್ಷಗಳ ಹಿಂದೆ ಸಾವಿರಕ್ಕೆ 917ರಷ್ಟಿದ್ದ ಮಹಿಳಾ ಅನುಪಾತ 890ಕ್ಕೆಕುಸಿದಿದೆ ಎಂದು ಆರೋಪಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ರಮೇಶ್ ಕುಮಾರ್, ಕೆಲ ವೈದ್ಯರು, ಸ್ಕ್ಯಾನಿಂಗ್ ಕೇಂದ್ರದ ಮಾಲೀಕರು ವೃತ್ತಿ ಸಂಹಿತೆ ಬಿಟ್ಟು ರಾಕ್ಷಸರಂತೆ ವರ್ತಿಸುತ್ತಿದ್ದಾರೆ. ಪಿಸಿಪಿಎನ್‌ಡಿಟಿ ಕಾಯ್ದೆ ಪ್ರಕಾರ ಯಾರೂ ಲಿಂಗ ಪತ್ತೆ ಮಾಡುವಂತಿಲ್ಲ. ಆದರೂ ವೈದ್ಯರ ಶಿಫಾರಸೂ ಇಲ್ಲದೆ ಲಿಂಗಪತ್ತೆ ಮಾಡಲಾಗುತ್ತಿದೆ.

ಇಂತಹ ನೀಚ ಕೃತ್ಯ ಯಾರೂ ಮಾಡಬಾರದು.ಹೆಣ್ಣು ಮಗು ತಾಯಿಯ ಪ್ರತಿರೂಪ. ತಾಯಿ ಇಲ್ಲದೆ ಜಗತ್ತು ಇರಲು ಸಾಧ್ಯವಿಲ್ಲ. ಹೀಗಾಗಿ ಇಂತಹ ಕೃತ್ಯದಲ್ಲಿ ತೊಡಗಿರುವ ಯಾವುದೇ ಸ್ಕ್ಯಾನಿಂಗ್ ಕೇಂದ್ರ ಪತ್ತೆಯಾದರೂ ಪರವಾನಗಿ ರದ್ದುಪಡಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು. ಈ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿದ್ದು ಗುಲ್ಬರ್ಗಾದಲ್ಲಿ ಹೆಚ್ಚಾಗಿ ನಡೆಯುತ್ತಿದ್ದು 19 ಮಂದಿ ವಿರುದ್ಧ ಕೇಸು ದಾಖಲಿಸಿದ್ದೇವೆ. ಎಲ್ಲಾ ವೃತ್ತಿಯಲ್ಲೂ ವೃತ್ತಿಗೆ ಅಗೌರವವಾಗಿ ನಡೆದುಕೊಳ್ಳುವವರು ಇದ್ದಾರೆ.

ಖಾಸಗೀ ವೈದ್ಯರಲ್ಲೂ ಸಹ ಕೆಲವರು ಧನದಾಹಿಗಳಾಗಿ ಅಪರಾಧ ಎಸಗುತ್ತಾರೆ. ಇಂತಹ ಅಪರಾಧ ಮಾಡುವವರನ್ನು ಶಿಕ್ಷಿಸುವ ಸಲುವಾಗಿ ಕೆಎಂಪಿಇ ಕಾಯ್ದೆ ತರುತ್ತಿದ್ದೇವೆಯೇ ಹೊರತು ಎಲ್ಲರಿಗೂ ತೊಂದರೆ ಕೊಡಬೇಕು ಎಂದು ಅಲ್ಲ. ಮುಂದೆ ಈ ಎಲ್ಲಾ ಕ್ರಮಗಳನ್ನೂ ನಿಯಂತ್ರಿಸುತ್ತೇವೆ ಎಂದು ಭರವಸೆ ನೀಡಿದರು.

ಖಾಸಗಿ ಔಷಧಿ ಬರೆಯಲು ತಜ್ಞ ವೈದ್ಯರಿಗೆ ವಿನಾಯಿತಿ ಪರಿಶೀಲನೆ: ಖಾಸಗಿ ಔಷಧಾಲಯಗಳಿಂದ ಔಷಧಿ ಖರೀದಿಸಲು ಸಲಹಾ ಚೀಟಿಗಳನ್ನು (ಪ್ರಿಸ್ಕ್ರಿಪ್ಷನ್) ನೀಡಲು ತಜ್ಞ ವೈದ್ಯರಿಗೆ ವಿನಾಯಿತಿ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ತಿಳಿಸಿದ್ದಾರೆ. ಪ್ರಶ್ನೋತ್ತರ ಅವಧಿಯಲ್ಲಿ ಸೋಮವಾರ ಬಿಜೆಪಿಯ ರಾಮಚಂದ್ರಗೌಡ ಅವರು ‘ಕನ್ನಡಪ್ರಭ’ ದಲ್ಲಿ ಪ್ರಕಟಗೊಂಡ ಖಾಸಗಿ ಔಷಧಾಲಯಕ್ಕೆ ಚೀಟಿ ಬರೆದರೆ ಸಸ್ಪೆಂಡ್ ಕುರಿತ ವರದಿಯನ್ನು ಪ್ರಸ್ತಾಪಿಸಿದರು. ಇದಕ್ಕೆ ಉತ್ತರ ನೀಡಿದ ಸಚಿವರು, ಆರೋಗ್ಯ ಸಂಸ್ಥೆಗಳ

ಉಗ್ರಾಣಗಳಲ್ಲಿ ಲಭ್ಯವಿರದ ಔಷಧಿ ಗಳನ್ನು ಖಾಸಗಿ ಔಷಧಾಲಯಗಳಿಂದ ಖರೀದಿಸುವಂತೆ ರೋಗಿಗಳಿಗೆ ಸಲಹಾ ಚೀಟಿಯನ್ನು ಕೆಲವು ವೈದ್ಯಾಧಿಕಾರಿಗಳು ನೀಡುತ್ತಿದ್ದರು. ಇದು ಜನರಿಗೆ ದುಬಾರಿಯಾಗುತ್ತಿತ್ತು. ಇದನ್ನು ಮನಗಂಡು ಖಾಸಗಿ ಔಷಧಾಲಯಗಳಿಂದ ಖರೀದಿಸಲು ಸಲಹಾ ಚೀಟಿಗಳನ್ನು ಬರೆದುಕೊಡುವ ವೈದ್ಯಾಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವ

ನಿಯಮ ಜಾರಿ ಮಾಡಲಾಗಿದೆ ಎಂದರು. ಆದರೆ, ಕೆಲವು ಸಂದರ್ಭದಲ್ಲಿ ತಜ್ಞ ವೈದ್ಯರು ಸಲಹಾ ಚೀಟಿಗಳನ್ನು ಖಾಸಗಿ ಔಷಧಾಲಯಗಳಿಗೆ ಬರೆದುಕೊಡಲು ವಿನಾಯಿತಿ ನೀಡುವಂತೆ ಸದಸ್ಯ ರಾಮಚಂದ್ರಗೌಡ ಮನವಿ ಮಾಡಿದರು. ಇದಕ್ಕೆ ಪರಿಶೀಲನೆ ನಡೆಸುವುದಾಗಿ ಅವರು ಭರವಸೆ ನೀಡಿದರು. ಬ್ರ್ಯಾಂಡೆಡ್ ಮತ್ತು ಜನೌಷಧಿಯ ದರದಲ್ಲಿ ಶೇ.70ರಷ್ಟು ವ್ಯತ್ಯಾಸ ಇರುತ್ತದೆ. ತಾಲೂಕು, ಗ್ರಾಮೀಣ ಭಾಗದಲ್ಲಿ ಒಂದು ತಿಂಗಳ ಕಾಲಾವಧಿಯಲ್ಲಿ ಯಾವ ಸ್ವರೂಪದ ಕಾಯಿಲೆಗಳು ಬರಲಿವೆ ಎಂಬುದರ ಮಾಹಿತಿ ನೀಡಿದರೆ, ಆ ಆಧಾರದ ಮೇಲೆ ಆರೋಗ್ಯ ಸಂಸ್ಥೆಗಳ ಜಿಲ್ಲಾ ಉಗ್ರಾಣಗಳಿಂದ 48 ಗಂಟೆಯಲ್ಲಿ ಜನೌಷಧಿಗಳನ್ನು ಪೂರೈಕೆ ಮಾಡಬಹುದು. ಈ ಸಂಬಂಧ ಕೇಂದ್ರದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು.

click me!