ದೇಶದಲ್ಲಿ ಅರಣ್ಯ ಪ್ರದೇಶ ಹೆಚ್ಚಳ : ಕರ್ನಾಟಕ ನಂ.2

By Suvarna Web DeskFirst Published Feb 13, 2018, 9:09 AM IST
Highlights

ಅರಣ್ಯ ಸಂಪತ್ತು ಕುಸಿಯುತ್ತಿದೆ ಎಂಬ ಆತಂಕದ ಬೆನ್ನಲ್ಲೇ, ದೇಶದಲ್ಲಿ ಕಳೆದ 2 ವರ್ಷಗಳಲ್ಲಿ ಅರಣ್ಯ ಸಂಪತ್ತು ವಿಸ್ತಾರಗೊಂಡಿದೆ ಎಂಬ ಸಿಹಿ ಸುದ್ದಿಯೊಂದು ಹೊರಬಂದಿದೆ. ಇನ್ನೂ ಖುಷಿಯ ಸಂಗತಿ ಎಂದರೆ ಹೀಗೆ ದೇಶದಲ್ಲಿ ಅರಣ್ಯಪ್ರದೇಶ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ವಿಸ್ತಾರಗೊಂಡ ರಾಜ್ಯಗಳ ಪೈಕಿ ಕರ್ನಾಟಕ ದೇಶದಲ್ಲೇ 2ನೇ ಸ್ಥಾನದಲ್ಲಿದೆ.

ನವದೆಹಲಿ: ಅರಣ್ಯ ಸಂಪತ್ತು ಕುಸಿಯುತ್ತಿದೆ ಎಂಬ ಆತಂಕದ ಬೆನ್ನಲ್ಲೇ, ದೇಶದಲ್ಲಿ ಕಳೆದ 2 ವರ್ಷಗಳಲ್ಲಿ ಅರಣ್ಯ ಸಂಪತ್ತು ವಿಸ್ತಾರಗೊಂಡಿದೆ ಎಂಬ ಸಿಹಿ ಸುದ್ದಿಯೊಂದು ಹೊರಬಂದಿದೆ. ಇನ್ನೂ ಖುಷಿಯ ಸಂಗತಿ ಎಂದರೆ ಹೀಗೆ ದೇಶದಲ್ಲಿ ಅರಣ್ಯಪ್ರದೇಶ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ವಿಸ್ತಾರಗೊಂಡ ರಾಜ್ಯಗಳ ಪೈಕಿ ಕರ್ನಾಟಕ ದೇಶದಲ್ಲೇ 2ನೇ ಸ್ಥಾನದಲ್ಲಿದೆ.

ಕೇಂದ್ರ ಪರಿಸರ ಖಾತೆ ಸಚಿವ ಹರ್ಷವರ್ಧನ್‌ ಸೋಮವಾರ ದೆಹಲಿಯಲ್ಲಿ ಅರಣ್ಯ ವರದಿ 2017 ಅನ್ನು ಬಿಡುಗಡೆ ಮಾಡಿದರು. ಇದರ ಅನ್ವಯ ಕಳೆದ 2 ವರ್ಷಗಳಲ್ಲಿ ದೇಶದ ಅರಣ್ಯ ಪ್ರದೇಶ 8021 ಚದರ ಕಿ.ಮೀನಷ್ಟುಹೆಚ್ಚಳವಾಗುವ ಮೂಲಕ 802,088 ಚ.ಕಿಮೀ ತಲುಪಿದೆ. ಅಂದರೆ ಇದುವರೆಗೆ ಇದ್ದ ಅರಣ್ಯ ಪ್ರದೇಶದ ಶೇ.1ರಷ್ಟುಏರಿಕೆಯಾಗಿದೆ. ಇದರೊಂದಿಗೆ ದೇಶವು, ತನ್ನ ಒಟ್ಟು ಭೌಗೋಳಿಕ ಪ್ರದೇಶದ ಪೈಕಿ ಶೇ.24.39ರಷ್ಟುಅರಣ್ಯ ಪ್ರದೇಶ ಹೊಂದಿದಂತೆ ಆಗಿದೆ. ಸರ್ಕಾರವು ಒಟ್ಟು ಭೌಗೋಳಿಕ ಪ್ರದೇಶದ ಶೇ.33ರಷ್ಟುಭಾಗವನ್ನು ಅರಣ್ಯದಿಂದ ಆವರಿಸುವಂತೆ ಮಾಡುವ ಗುರಿ ಹೊಂದಿದೆ.

8021 ಚ.ಕಿಮೀ ಪೈಕಿ 6778 ಚ.ಕಿಮೀ ಅರಣ್ಯ ಪ್ರದೇಶ ಹೆಚ್ಚಳವಾಗಿದ್ದರೆ, 1243 ಚ.ಕಿಮೀನಷ್ಟುಮರಗಳು ಆವರಿಸಿರುವ ಪ್ರದೇಶ ಹೆಚ್ಚಳವಾಗಿದೆ. ಟಾಪ 5 ಏರಿಕೆ ಕಂಡ ರಾಜ್ಯಗಳು: ಕಳೆದ 2 ವರ್ಷಗಳಲ್ಲಿ ಆಂಧ್ರಪ್ರದೇಶ (2141ಚ.ಕಿಮೀ), ಕರ್ನಾಟಕ (1101 ಚ.ಕಿಮೀ), ಕೇರಳ (1043 ಚ.ಕಿ.ಮೀ), ಒಡಿಶಾ (885 ಚ.ಕಿಮೀ) ಮತ್ತು ತೆಲಂಗಾಣ (565 ಚ.ಕಿಮೀ) ಅತಿ ಹೆಚ್ಚು ಅರಣ್ಯಪ್ರದೇಶ ವಿಸ್ತಾರ ಕಂಡ ಟಾಪ್‌ 5 ರಾಜ್ಯಗಳಾಗಿವೆ. ಅರುಣಾಚಲಪ್ರದೇಶ, ಉತ್ತರಪ್ರದೇಶ, ಹರ್ಯಾಣ ಮತ್ತು ಬಿಹಾರ ಹೊರತುಪಡಿಸಿದರೆ ಉಳಿದೆಲ್ಲಾ ರಾಜ್ಯಗಳಲ್ಲಿ ಅಲ್ಪ ಪ್ರಮಾಣದಲ್ಲಿ ಅರಣ್ಯ ಪ್ರಮಾಣ ಹೆಚ್ಚಳವಾಗಿರುವುದು ಕಂಡುಬಂದಿದೆ.

ಟಾಪ್‌ 10: ವಿಶ್ವದಲ್ಲೇ ಅತಿ ಹೆಚ್ಚು ಅರಣ್ಯ ಹೊಂದಿರುವ ದೇಶಗಳ ಪೈಕಿ ಭಾರತ ಹಾಲಿ 10ನೇ ಸ್ಥಾನದಲ್ಲಿದೆ. ಜೊತೆಗೆ ಅರಣ್ಯ ಪ್ರದೇಶ ಹೆಚ್ಚಳ ಕಾಣುತ್ತಿರುವ ಟಾಪ್‌ 10 ದೇಶಗಳ ಪಟ್ಟಿಯಲ್ಲಿ ಭಾರತ 8ನೇ ಸ್ಥಾನದಲ್ಲಿದೆ.

click me!