
ನವದೆಹಲಿ(ಫೆ.5): ನ.8ರಂದು 500 ರು. ಹಾಗೂ 1000 ರು. ನೋಟುಗಳ ಅಪನಗದೀಕರಣ ಘೋಷಣೆಯಾದ ನಂತರ ‘ಪ್ರಧಾನಮಂತ್ರಿ ಜನಧನ ಯೋಜನೆ'ಯ ಬ್ಯಾಂಕ್ ಖಾತೆಗಳಿಗೆ ಭಾರಿ ಪ್ರಮಾಣದ ಹಣ ಹರಿದುಬಂದಿದ್ದು ಹಳೆಯ ಸುದ್ದಿ. ಈಗ ಈ ಖಾತೆಗಳಲ್ಲಿ ನ.8ರ ನಂತರ ಹರಿದುಬಂದ ಹಣದ ಶೇಕಡಾವಾರು ಏರಿಕೆ ಪ್ರಮಾಣದಲ್ಲಿ ಗುಜರಾತ್ ಮೊದಲ ಸ್ಥಾನ ಪಡೆದರೆ, ಕರ್ನಾಟಕ ದ್ವಿತೀಯ ಸ್ಥಾನ ಪಡೆದಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯವಾದ ಗುಜರಾತ್‌ನ ಜನಧನ ಖಾತೆಗಳಿಗೆ ನ.9ರಿಂದ ಜನವರಿ 25ರವರೆಗೆ 1530.41 ಕೋಟಿ ರು. ಹರಿದುಬಂದಿದ್ದು, 1,628.87 ಕೋಟಿ ರು. ಇದ್ದ ಠೇವಣಿ 3159.28 ಕೋಟಿ ರು.ಗೆ ಏರಿದೆ ಎಂದು ಲೋಕಸಭೆಗೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. ಒಟ್ಟಾರೆ ಗುಜರಾತ್ ಜನಧನ ಖಾತೆ ಹಣದ ಹೆಚ್ಚಳ ಪ್ರಮಾಣ ಶೇ.93.95 ಇದೆ. ಇದು ಇತರ ರಾಜ್ಯಗಳ ಶೇಕಡಾವಾರು ಪ್ರಮಾಣದ ಏರಿಕೆಗೆ ಹೋಲಿಸಿದರೆ ಅತ್ಯಧಿಕ.
ಇನ್ನು ಕರ್ನಾಟಕದ ಜನಧನ ಖಾತೆಗಳಲ್ಲಿ ನ.9ರಂದು 1,412.96 ಕೋಟಿ ರು. ಇತ್ತು. ಇದರ ಪ್ರಮಾಣ ಜ.25ರಂದು 2,568.76 ಕೋಟಿ ರೂ.ಗೆ ಏರಿದೆ. ಏರಿಕೆಯ ಪ್ರಮಾಣ ಶೇ.82 ಆಗಿದ್ದು, ಕರ್ನಾಟಕ ದ್ವಿತೀಯ ಸ್ಥಾನ ಪಡೆದಿದೆ. ನಂತರದ ಸ್ಥಾನಗಳಲ್ಲಿ ತ್ರಿಪುರಾ, ದಿಯು-ದಮನ್, ಮಣಿಪುರ ಇವೆ.
ಮೊತ್ತದಲ್ಲಿ ಉ.ಪ್ರ. ನಂ.1:ಇನ್ನು ಒಟ್ಟು ಮೊತ್ತವನ್ನು ಗಮನಿಸಿದಾಗ ಉತ್ತರಪ್ರದೇಶ ಅತ್ಯಧಿಕ ಜನಧನ ಠೇವಣಿ ಹೊಂದಿದ್ದು, ರಾಜ್ಯದ ಜನಧನ ಖಾತೆಗಳಲ್ಲಿ 10,815 ಕೋಟಿ ರು. (ಜ.25ರ ಅಂಕಿ-ಅಂಶ) ಠೇವಣಿ ಇದೆ. ನ.9ರಂದು ಇಲ್ಲಿ 7438.50 ರು. ಇದ್ದು, 3,376.50 ಕೋಟಿ ರು. ಏರಿದೆ.
ಏರಿಕೆಯ ಶೇಕಡಾವಾರು ಪ್ರಮಾಣ ಶೇ.45.ನಂತರದ ಸ್ಥಾನಗಳಲ್ಲಿ ಪ.ಬಂಗಾಳ, ರಾಜಸ್ಥಾನ, ಬಿಹಾರ, ಗುಜರಾತ್ ಇವೆ. ಬ್ಯಾಂಕ್ ಖಾತೆ ಹೊಂದಿದವರಿಗೆ ಎಂದು ತೆರೆಯಲಾದ ಜನಧನ ಖಾತೆಗಳಿಗೆ ಭಾರಿ ಪ್ರಮಾಣ ಹರಿದುಬಂದಿರುವುದು ಕಪ್ಪುಹಣದ ಗುಮಾನಿಯನ್ನೂ ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಈ ಖಾತೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಕಣ್ಣಿಟ್ಟಿದೆ. ನಿಯಮಾನುಸಾರ ಜನಧನ ಖಾತೆಗಳಲ್ಲಿ ಗರಿಷ್ಠ 50 ಸಾವಿರ ರು. ಇಡಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.