
ಬೆಂಗಳೂರು[ಜು.28]: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಹುಮತ ಸಾಬೀತುಪಡಿಸಲಿರುವ ಸೋಮವಾರದಂದು ಅತೃಪ್ತ ಶಾಸಕರು ಸದನಕ್ಕೆ ಗೈರು ಹಾಜರಾಗಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿರುವ ಕೆಲ ಅತೃಪ್ತ ಶಾಸಕರು, ನಾವೆಲ್ಲಾ ಒಗ್ಗಟ್ಟಾಗಿ ಇದ್ದೇವೆ. ನಮ್ಮ ನಿರ್ಧಾರ ಅಚಲ. ಸೋಮವಾರ ಸದನಕ್ಕೆ ಹಾಜರಾಗುವುದಿಲ್ಲ. ನಮ್ಮ ವಿರುದ್ಧ ಪ್ರಯೋಗಿಸಿರುವ ಅನರ್ಹತೆ ಅಸ್ತ್ರಕ್ಕೂ ಹೆದರುವುದಿಲ್ಲ. ಮೂರ‌್ನಾಲ್ಕು ದಿನಗಳ ಬಳಿಕ ಬೆಂಗಳೂರಿಗೆ ವಾಪಸ್ಸಾಗುವ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಹೇಳಿದ್ದಾರೆ.
ಸಿದ್ದುಗೆ ಎಂಟಿಬಿ ಟಾಂಗ್:
ಹೊಸಕೋಟೆ ಶಾಸಕ ಎಂ.ಟಿ.ಬಿ. ನಾಗರಾಜ್ ಮಾತನಾಡಿ, ನಾವು 15 ಜನ ಒಗ್ಗಟ್ಟಾಗಿದ್ದೇವೆ. ಅತೃಪ್ತರನ್ನು ಮತ್ತೆ ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲ್ಲ ಎಂದಿರುವ ಸಿದ್ದರಾಮಯ್ಯ ಅವರಿಗೆ ಅವರ ಮಾತಿನ ದಾಟಿಯಲ್ಲೇ ಹೇಳಲಿಚ್ಛಿಸುತ್ತೇನೆ. ನಾನು ಕೂಡ ಮತ್ತೆ ಕಾಂಗ್ರೆಸ್ ಸೇರುವ ಪ್ರಮೇಯವೇ ಇಲ್ಲ. ರಾಜಕೀಯ ಜೀವನದಲ್ಲಿ ಎಲ್ಲವನ್ನೂ ನೋಡಿಕೊಂಡು ಬಂದಿದ್ದೇವೆ. ಮತ್ತೆ ಕಾಂಗ್ರೆಸ್‌ಗೆ ಹೋಗಿ ಅರ್ಜಿ ಹಾಕಿ ಟಿಕೆಟ್ ಕೊಡಿ ಎಂದು ಕೇಳುವ ಅಗತ್ಯ ನನಗೆ ಇಲ್ಲ. ಇದಕ್ಕಿಂತ ನಾನು ರಾಜಕೀಯ ನಿವೃತ್ತಿ ಪಡೆಯಬಯಸುತ್ತೇನೆ ಎಂದು ತಿಳಿಸಿದರು.
ಈಗಾಗಲೇ ನಮ್ಮ ಗುಂಪಿನ ಮೂವರನ್ನು ಅನರ್ಹಗೊಳಿಸಲಾಗಿದೆ. ನಮ್ಮನ್ನೂ ಅನರ್ಹಗೊಳಿಸಿದರೆ ಹೆದರುವುದಿಲ್ಲ. ಇನ್ನು ಎರಡು- ಮೂರು ದಿನಗಳ ಬಳಿಕ ಬೆಂಗಳೂರಿಗೆ ಯಾವಾಗ ವಾಪಸ್ಸಾಗಬೇಕು ಎಂಬುದನ್ನು ಎಲ್ಲರೂ ಸೇರಿ ನಿರ್ಧರಿಸುತ್ತೇವೆ. ಹೊಸ ಸರ್ಕಾರ ರಚನೆಗೆ ನಮ್ಮ ತಕರಾರೇನು ಇಲ್ಲ. ಹೊಸ ಸರ್ಕಾರ ರಚನೆಯಾದ ಬಳಿಕ ವಾಪಸ್ ಬರುತ್ತೇವೆ ಎಂದು ನಾವೆಲ್ಲೂ ಹೇಳಿಲ್ಲ ಎಂದರು.
ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಮಾತನಾಡಿ, ಸೋಮವಾರ ವಿಧಾನಸಭೆ ಕಲಾಪಕ್ಕೆ ಹಾಜರಾಗುವುದಿಲ್ಲ. ಸಿನಿಮಾ ಕೆಲಸ ಇರುವುದರಿಂದ ನಾನು ಸದನಕ್ಕೆ ಹಾಜರಾಗಲು ಸಾಧ್ಯವಿಲ್ಲ. ನಾವು ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡಿದ್ದೇವೆ. ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿಲ್ಲ. ನಾವು ಬೇರೆ ಪಕ್ಷಕ್ಕೆ ಹೋಗುತ್ತೇವೆ ಎಂದು ಎಲ್ಲೂ ಹೇಳಿಲ್ಲ ಎಂದು ಹೇಳಿದರು
ಬಿ.ಸಿ. ಪಾಟೀಲ್ ಮಾತನಾಡಿ, ಅನರ್ಹತೆ ವಿರುದ್ಧ ಕಾನೂನು ಹೋರಾಟ ಮಾಡಲಾಗುತ್ತದೆ. ಉಪ ಚುನಾವಣೆಯಲ್ಲಿ ಜನರು ನಮ್ಮ ನಿರ್ಧಾರ ಸರಿ ಇದೆಯಾ, ಇಲ್ಲವಾ ಎಂದು ನಿರ್ಧರಿಸುತ್ತಾರೆ. ಸೋಮವಾರ ಸದನಕ್ಕೆ ಬರುವುದಿಲ್ಲ ಎಂದು ಹೇಳಿದ್ದಾರೆ.
ಪ್ರತಾಪ್‌ಗೌಡ ಪಾಟೀಲ್ ಮಾತನಾಡಿ, ಯಾರು ಏನೇ ಮಾಡಿದರೂ ನಮ್ಮ ನಿರ್ಧಾರ ಬದಲಾಗುವುದಿಲ್ಲ. ರಾಜೀನಾಮೆ ವಾಪಸ್ ಪಡೆಯುವ ಪ್ರಶ್ನೆ ಇಲ್ಲ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.