ಯಡಿಯೂರಪ್ಪ ವಿಶ್ವಾಸಮತ ನಾಳೆಯೋ? ನಾಡಿದ್ದೋ?

By Web DeskFirst Published Jul 28, 2019, 8:03 AM IST
Highlights

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ವಿಶ್ವಾಸಮತ ಪ್ರಕ್ರಿಯೆ ಮುಂದೂಡಿಕೆ ಆಗುವ ಸಾಧ್ಯತೆ ಇದೆ. 

ಬೆಂಗಳೂರು [ಜು.28] : ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಸೋಮವಾರ ವಿಧಾನಸಭೆಯಲ್ಲಿ ಮಂಡಿಸಲಿರುವ ವಿಶ್ವಾಸ ಮತ ನಿರ್ಣಯಕ್ಕೆ ಅಂದೇ ಸದನದ ಒಪ್ಪಿಗೆ ದೊರೆಯುವುದೋ ಅಥವಾ ಚರ್ಚೆ ನೆಪದಲ್ಲಿ ಮತ್ತೊಂದು ದಿನ ಮುಂದೂಡಿಕೆ ಕಾಣುವುದೋ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆದಿದೆ.

ಮೂಲಗಳ ಪ್ರಕಾರ, ಯಡಿಯೂರಪ್ಪ ಅವರು ಸೋಮವಾರ ಮಂಡಿಸುವ ವಿಶ್ವಾಸ ಮತ ನಿರ್ಣಯ ಕುರಿತು ಚರ್ಚೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ದೊಡ್ಡ ಸಂಖ್ಯೆಯಲ್ಲಿ ಶಾಸಕರು ಪಾಲ್ಗೊಳ್ಳುವ ಸಾಧ್ಯತೆಯಿದ್ದು, ಈ ಚರ್ಚೆ ವಿಳಂಬವಾಗುವ ಕಾರಣ ವಿಶ್ವಾಸ ಮತ ನಿರ್ಣಯವನ್ನು ಮತಕ್ಕೆ ಹಾಕುವುದು ಒಂದು ದಿನ ಮುಂದೂಡಿಕೆಯಾಗುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.

ಬಿಜೆಪಿ ವಲಯದಲ್ಲಿ ಮಾತ್ರ ಇಂತಹ ಸಂದರ್ಭ ನಿರ್ಮಾಣವಾಗುವುದಿಲ್ಲ ಎಂಬ ನಂಬಿಕೆಯಿದೆ. ಸೋಮವಾರವೇ ವಿಶ್ವಾಸ ಮತ ನಿರ್ಣಯವನ್ನು ಮತಕ್ಕೆ ಹಾಕಲಾಗುವುದು. ಏಕೆಂದರೆ, ವಿಧಾನಸಭೆಯ ಅಜೆಂಡಾದಲ್ಲಿ ವಿಶ್ವಾಸ ಮತ ನಿರ್ಣಯವನ್ನು ಪ್ರಧಾನವಾಗಿ ತೆಗೆದುಕೊಳ್ಳಲಾಗಿದೆ. ಹೀಗಾಗಿ ಸೋಮವಾರವೇ ಈ ಪ್ರಸ್ತಾಪ ಮತಕ್ಕೆ ಬೀಳಲಿದೆ ಎಂದು ಬಿಜೆಪಿ ಮೂಲಗಳು ಹೇಳುತ್ತವೆ.

ಆದರೆ, ಕಾಂಗ್ರೆಸ್‌ನಲ್ಲಿ ಮಾತ್ರ ಚರ್ಚೆ ನಡೆಯಬೇಕಿರುವುದರಿಂದ ವಿಶ್ವಾಸ ಮತ ಒಂದು ದಿನ ಮುಂದೂಡಿಕೆ ಕಾಣಬಹುದು ಎಂಬ ನಿರೀಕ್ಷೆಯಿದೆ. ಹೀಗಾಗಿಯೇ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯನ್ನು (ಸಿಎಲ್‌ಪಿ) ಸೋಮವಾರ ಸದನದ ಕಲಾಪ ಮುಗಿದ ನಂತರ ಆಯೋಜಿಸುವ ಚಿಂತನೆಯನ್ನು ಆ ಪಕ್ಷದ ನಾಯಕರು ಹೊಂದಿದ್ದಾರೆ.

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯನ್ನು ನಡೆಸುವ ಅಗತ್ಯವೂ ನಾಯಕರಿಗೆ ಇದೆ. ಏಕೆಂದರೆ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಅವರು ಮುಂದುವರೆಯುವುದು ಖಚಿತವಾಗಿದ್ದರೂ, ಉಪ ನಾಯಕ ಹಾಗೂ ಮುಖ್ಯ ಸಚೇತಕರು ಯಾರು ಎಂಬುದು ನಿರ್ಧಾರವಾಗಬೇಕು. ಇದಲ್ಲದೆ, ವಿಧಾನ ಪರಿಷತ್‌ನ ಪ್ರತಿಪಕ್ಷ ನಾಯಕ, ಉಪ ನಾಯಕ ಹಾಗೂ ಮುಖ್ಯ ಸಚೇತಕರನ್ನು ಆಯ್ಕೆ ಮಾಡಬೇಕು. ಹೀಗಾಗಿ, ಸಭೆಯನ್ನು ಸೋಮವಾರ ಸಂಜೆ ಸದನ ಮುಗಿದ ನಂತರ ನಡೆಸುವ ಉದ್ದೇಶವನ್ನು ನಾಯಕರು ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

click me!