ಪಾವಗಡ ನಕ್ಸಲ್‌ ಅಟ್ಟಹಾಸ : ಚಿಂತಕ ವರವರರಾವ್‌ ವಶಕ್ಕೆ

By Web DeskFirst Published Jul 4, 2019, 8:27 AM IST
Highlights

ನಕ್ಸಲ್‌ ಹತ್ಯಾಕಾಂಡ ಸಂಬಂಧ ಸದ್ಯ ಮಹಾರಾಷ್ಟ್ರದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ತೆಲುಗಿನ ಕ್ರಾಂತಿಕಾರಿ ಕವಿ ವರವರ ರಾವ್‌ ಅವರನ್ನು ಕರ್ನಾಟಕದ ಪಾವಗಡ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪುಣೆ (ಜು.03): 14 ವರ್ಷಗಳ ಹಿಂದೆ ತುಮಕೂರಿನ ಪಾವಗಡ ಸಮೀಪದ ವೆಂಕಟಮ್ಮನಹಳ್ಳಿಯಲ್ಲಿ ನಡೆದಿದ್ದ ನಕ್ಸಲ್‌ ಹತ್ಯಾಕಾಂಡ ಸಂಬಂಧ ಸದ್ಯ ಮಹಾರಾಷ್ಟ್ರದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ತೆಲುಗಿನ ಕ್ರಾಂತಿಕಾರಿ ಕವಿ ವರವರ ರಾವ್‌ ಅವರನ್ನು ಕರ್ನಾಟಕದ ಪಾವಗಡ ಪೊಲೀಸರು ಬುಧವಾರ ವಶಕ್ಕೆ ಪಡೆದುಕೊಂಡಿದ್ದಾರೆ.

2005ರ ಫೆ.6ರಂದು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಕ್ಸಲ್‌ ನಾಯಕ ಸಾಕೇತ್‌ ರಾಜನ್‌ನನ್ನು (ಪ್ರೇಮ್‌) ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿತ್ತು. ಇದಕ್ಕೆ 5 ದಿನಗಳ ಬಳಿಕ ಪ್ರತೀಕಾರ ತೀರಿಸಿಕೊಂಡಿದ್ದ ನಕ್ಸಲರು, ಪಾವಗಡ ತಾಲೂಕಿನ ವೆಂಕಟಮ್ಮನಹಳ್ಳಿಯಲ್ಲಿರುವ ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ ಪಡೆ (ಕೆಎಸ್‌ಆರ್‌ಪಿ) ಬೆಟಾಲಿಯನ್‌ ಮೇಲೆ ದಾಳಿ ಮಾಡಿ ಹತ್ಯಾಕಾಂಡ ನಡೆಸಿದ್ದರು. ಈ ವೇಳೆ 7 ಪೊಲೀಸರು ಹಾಗೂ ಒಬ್ಬ ನಾಗರಿಕರು ಮೃತಪಟ್ಟಿದ್ದರು. ಇದೀಗ 14 ವರ್ಷಗಳ ನಂತರ ಈ ಘಟನೆ ಸಂಬಂಧ ವರವರ ರಾವ್‌ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪಾವಗಡ ಪೊಲೀಸರ ವಶಕ್ಕೆ ವರವರ ರಾವ್‌ ಅವರನ್ನು ನೀಡಿರುವ ವಿಚಾರವನ್ನು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

2018ರ ಜ.1ರಂದು ಮಹಾರಾಷ್ಟ್ರದ ಪುಣೆ ಸಮೀಪದ ಕೋರೆಗಾಂವ್‌- ಭೀಮಾದಲ್ಲಿ ಸಂಭವಿಸಿದ ಹಿಂಸಾಚಾರಕ್ಕೆ ಅದರ ಹಿಂದಿನ ದಿನ ರಾವ್‌ ಅವರು ಭಾಷಣವೂ ಕಾರಣ ಎಂಬ ಆರೋಪವಿದೆ. ತಲೆಮರೆಸಿಕೊಂಡಿರುವ ನಕ್ಸಲ್‌ ನಾಯಕರ ಜತೆ ನಂಟು ಹೊಂದಿದ ಹಾಗೂ ನಕ್ಸಲರ ನೇಮಕ, ಹಣಕಾಸು ಸಹಾಯ, ಶಸ್ತ್ರಾಸ್ತ್ರ ಖರೀದಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಆರೋಪವನ್ನೂ ಅವರು ಎದುರಿಸುತ್ತಿದ್ದಾರೆ. 2003ರಲ್ಲಿ ಚಿಕ್ಕಮಗಳೂರಿನಲ್ಲಿ ಅವರು ಸಾರ್ವಜನಿಕ ಸಮಾರಂಭವೊಂದರಲ್ಲೂ ಭಾಷಣ ಮಾಡಿದ್ದರು.

click me!