ಕದ್ದಾಲಿಕೆ ತಪ್ಪಲ್ಲ, ಕೋರ್ಟೇ ಹೇಳಿದೆ: ದೇವೇಗೌಡ

Published : Aug 20, 2019, 08:53 AM IST
ಕದ್ದಾಲಿಕೆ ತಪ್ಪಲ್ಲ, ಕೋರ್ಟೇ ಹೇಳಿದೆ: ದೇವೇಗೌಡ

ಸಾರಾಂಶ

ಕದ್ದಾಲಿಕೆ ತಪ್ಪಲ್ಲ, ಕೋರ್ಟೇ ಹೇಳಿದೆ: ಗೌಡ | ಸಿಬಿಐ ತನಿಖೆಗೆ ಆದೇಶಿಸಿದ್ದರ ಹಿಂದೆ ಮೋದಿ, ಶಾ ಇಲ್ಲ | ರಾಜಕೀಯ ಒತ್ತಡದಿಂದ ಬಿಎಸ್‌ವೈ ಸಿಬಿಐಗೆ ಕೊಟ್ಟಿದ್ದಾರೆ

ಬೆಂಗಳೂರು (ಆ. 20): ರಾಜಕೀಯ ಒತ್ತಡದಿಂದಾಗಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಫೋನ್‌ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದ್ದಾರೆ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದ್ದಾರೆ.

ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸುಪ್ರೀಂಕೋರ್ಟ್‌ ಸಹ ಫೋನ್‌ ಕದ್ದಾಲಿಕೆ ತಪ್ಪಲ್ಲ ಎಂಬುದಾಗಿ ತಿಳಿಸಿದೆ ಎಂದರು.

ಎಲ್ಲ ಕಾಲದಲ್ಲಿಯೂ ಗುಪ್ತಚರ ಇಲಾಖೆ ಅದರ ಕೆಲಸ ಮಾಡುತ್ತದೆ. ಯಾರೇ ಸಿಎಂ ಇರಲಿ, ಪಿಎಂ ಇರಲಿ ತನ್ನ ಕೆಲಸ ಅದು ಮಾಡುತ್ತದೆ. ಇದನ್ನೇ ದೊಡ್ಡದಾಗಿ ಸುದ್ದಿ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಅದು ಸರಿಯಲ್ಲ ಎಂದು ಪರೋಕ್ಷವಾಗಿ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.

ರಾಜ್ಯದಲ್ಲಿ ಭೀಕರ ನೆರೆ ಹಾವಳಿ ಪರಿಸ್ಥಿತಿ ಇದೆ. ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ಬಗ್ಗೆ ಗಮನಹರಿಸಬೇಕು. ಅದನ್ನು ಬಿಟ್ಟು ಫೋನ್‌ ಕದ್ದಾಲಿಕೆ ವಿಚಾರವನ್ನು ಮಾಧ್ಯಮಗಳು ವಿಜೃಂಭಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಫೋನ್‌ ಕದ್ದಾಲಿಕೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ನೀಡುವಲ್ಲಿ ಕೇಂದ್ರದ ಬಿಜೆಪಿ ನಾಯಕರ ಮಧ್ಯಪ್ರವೇಶ ಇದೆ ಎಂಬುದನ್ನು ನಾನು ಒಪ್ಪುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರು ಫೋನ್‌ ಕದ್ದಾಲಿಕೆ ಕುರಿತು ತನಿಖೆ ಮಾಡಿಸುತ್ತಿದ್ದಾರೆಂದು ಹೇಳುತ್ತಿರುವ ಬಗ್ಗೆ ಗಮನಿಸಿದ್ದೇನೆ.

ಆದರೆ, ಅದನ್ನು ಒಪ್ಪಲು ಸಾಧ್ಯವಿಲ್ಲ. ಅವರಿಗೆ ದೇಶದ ಬಗ್ಗೆ ಯೋಚನೆ ಮಾಡಲು ಪುರುಸೊತ್ತಿಲ್ಲ. ಇಂತಹ ವಿಚಾರಕ್ಕೆಲ್ಲಾ ಒತ್ತು ನೀಡುವುದಿಲ್ಲ ಎಂಬುದು ವೈಯಕ್ತಿಕ ಅಭಿಪ್ರಾಯ. ನಾನೂ ದೇಶದ ಪ್ರಧಾನಿಯಾಗಿ ಆಡಳಿತ ನಡೆಸಿದ್ದೇನೆ ಎಂದು ತಿಳಿಸಿದರು.

ಎಚ್‌ಡಿಕೆ ಭಾಗಿ: ಸುದ್ದಿ ವಿಜೃಂಭಿಸುವ ಅಗತ್ಯವಿಲ್ಲ

ಮಾಜಿ ಸಿಎಂ ಕುಮಾರಸ್ವಾಮಿ ಭಾಗಿಯಾಗಿದ್ದಾರೆನ್ನುವ ಆರೋಪಕ್ಕೆ ಸಂಬಂಧಿಸಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೌಡರು, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಈ ಪ್ರಕರಣದಲ್ಲಿ ಸಿಲುಕಿಕೊಳ್ಳಲಿದ್ದಾರೆ ಎಂಬುದಾಗಿ ವಿಜೃಂಭಿಸಿ ಸುದ್ದಿ ಪ್ರಕಟಿಸುವ ಅಗತ್ಯ ಇಲ್ಲ. ಮಾಧ್ಯಮಗಳು ಅನಗತ್ಯವಾಗಿ ಇಷ್ಟೊಂದು ಬಿಂಬಿಸುವ ಅಗತ್ಯ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಫೋನ್‌ ಕದ್ದಾಲಿಕೆ ವಿಚಾರದಲ್ಲಿ ನಾನು ಭಾನುವಾರ ಯಾವುದೇ ಪ್ರತಿಕ್ರಿಯೆ ನೀಡದ ಕಾರಣಕ್ಕಾಗಿ ದೊಡ್ಡ ವಿಷಯ ಎಂಬಂತೆ ಮಾಧ್ಯಮಗಳಲ್ಲಿ ಸುದ್ದಿ ಮಾಡಲಾಯಿತು. ಯಾವುದೇ ವಿಷಯದ ಬಗ್ಗೆ ಮಾತನಾಡುವಾಗ ಯಾರ ಒತ್ತಡಕ್ಕೂ ಮಣಿಯುವುದಿಲ್ಲ. ಆದರೆ, ದೃಶ್ಯ ಮಾಧ್ಯಮಗಳು ನನ್ನ ವಿರುದ್ಧ ಮನಬಂದಂತೆ ಸುದ್ದಿ ಬಿತ್ತರಿಸಿದವು. ಇದಲ್ಲದೇ, ಹಣಕಾಸು ಮಸೂದೆ ವಿಚಾರದಲ್ಲಿ, ಮುಂಬೈಗೆ ದೋಸ್ತಿ ನಾಯಕರನ್ನು ವಿಶೇಷ ವಿಮಾನದಲ್ಲಿ ಕರೆದುಕೊಂಡು ಹೋದಾಗಲೂ ಯಾವುದೇ ಹೇಳಿಕೆ ನೀಡಲಿಲ್ಲ. ವಿಪ್‌ ಜಾರಿ ಮಾಡಿದ್ದರ ಬಗ್ಗೆಯೂ ಮಾತನಾಡಿಲ್ಲ. ಆದರೂ ನನ್ನ ವಿರುದ್ಧ ಸುದ್ದಿ ಮಾಡಲಾಯಿತು ಎಂದು ಮಾಧ್ಯಮಗಳ ವಿರುದ್ಧ ವಾಗ್ದಾಳಿ ನಡೆಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?
ಪಾಕಿಸ್ತಾನ ಪುಸ್ತಕ ಮೇಳ: ಸೇಲ್ ಆದ ಪುಸ್ತಕ ಬರೀ 35, ಖಾಲಿಯಾದ ಬಿರಿಯಾನಿ, ಶವರ್ಮಾ ಎಷ್ಟು ಕೇಳಿದ್ರೆ ಗಾಬರಿ ಆಗ್ತೀರಿ