
ಬೆಂಗಳೂರು(ಜು.17): ಯುನೆಸ್ಕೋ ಪಾರಂಪರಿಕ ವ್ಯಾಪ್ತಿಗೆ ಸೇರಬೇಕಿದ್ದ ರಾಜ್ಯದ ಹಲವು ಐತಿಹಾಸಿಕ ತಾಣ ಮತ್ತು ದಸರಾ ಮಹೋತ್ಸವವು ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಡತದಲ್ಲಿಯೇ ಉಳಿದಿವೆ. ಯುನೆಸ್ಕೋ ಸಂಸ್ಥೆ ಗುಜರಾತಿನ ಅಹಮದಾಬಾ ದನ್ನು ವಿಶ್ವ ಪಾರಂಪರಿಕ ನಗರ ಎಂದು ಘೋಷಿಸಿದೆ.
ಅಷ್ಟೇ ಪರಂಪರೆ ಹೊಂದಿರುವ ಮೈಸೂರು, ಬೀದರ್, ಕಲಬುರ್ಗಿ, ವಿಜಯಪುರ, ಅಲ್ಲದೆ ವಿಶ್ವಮನ್ನಣೆ ಗಳಿಸಿದ ನಾಡಹಬ್ಬ ದಸರಾ ಮಹೋತ್ಸವವೂ ಈ ಪಟ್ಟಿಯಲ್ಲಿ ಸೇರಬಹುದಾದ ಅರ್ಹತೆ ಹೊಂದಿದ್ದರೂ ಈ ತಾಣಗಳು ಪಟ್ಟಿಯಿಂದ ಕೈಬಿಟ್ಟು ಹೋಗಲು ನಮ್ಮ ನಿರ್ಲಕ್ಷ್ಯ ಕಾರಣ ಎಂಬುದು ಸುಳ್ಳಲ್ಲ.
ಯೋಜನೆ ಸಿದ್ಧ:
ನಾಡಹಬ್ಬ ದಸರಾ ಮಹೋತ್ಸವಕ್ಕೆ 407ನೇ ವರ್ಷ ತುಂಬುತ್ತಿದೆ. ಈ ಹಿಂದೆಯೇ ದಸರಾವನ್ನು ಯುನೆಸ್ಕೋ ಸಾಂಸ್ಕೃತಿಕ ವ್ಯಾಪ್ತಿಗೆ ಸೇರಿಸಬೇಕು ಎಂದು ತೀರ್ಮಾನಿಸಿ, ಯೋಜನೆ ಸಿದ್ಧಪಡಿಸಲಾಗಿತ್ತು. ಬಹುಮನಿ ಸುಲ್ತಾನರ ಆಳ್ವಿಕೆಗೆ ಒಳಪಟ್ಟಿದ್ದ ಬೀದರ್, ಕಲ್ಬುರ್ಗಿ, ವಿಜಯಪುರದ ಪರ್ಷಿಯನ್ ಮತ್ತು ಅರೇಬಿಕ್ ಶೈಲಿಯಲ್ಲಿನ ವಾಸ್ತು ಶಿಲ್ಪವನ್ನು ಒಂದು ಗುಂಪನ್ನಾಗಿ ವಿಂಗಡಿಸಿ, ಹೊಯ್ಸಳ ಆಳ್ವಿಕೆಗೆ ಸೇರಿದ ಬೇಲೂರು, ಹಳೇಬೀಡು, ಸೋಮನಾಥಪುರವನ್ನು ಮತ್ತೊಂದು ಗುಂಪನ್ನಾಗಿಸಿ ಮತ್ತು ಐಲ್ಯಾಂಡ್ (ದ್ವೀಪ ನಗರ) ವ್ಯಾಪ್ತಿಗೆ ಸೇರುವ ಶ್ರೀರಂಗಪಟ್ಟಣವನ್ನು ಯುನೆಸ್ಕೋಗೆ ಸೇರಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಕಡತದಲ್ಲಿಯೇ ಇದೆ:
ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ ಈ ಸಂಬಂಧ ತಯಾರಿಸಿದ ಪಟ್ಟಿ ಇನ್ನೂ ರಾಜ್ಯ ಸರ್ಕಾರದ ಕಡತದಲ್ಲಿಯೇ ಇದೆ. 2009ರಲ್ಲಿಯೇ ರಾಜ್ಯ ಸರ್ಕಾರವು 6 ನಗರಗಳನ್ನು ಪಾರಂಪರಿಕ ನಗರ ಎಂದು ಘೋಷಿಸಿತ್ತು. ಈ ಪೈಕಿ ಮೈಸೂರು, ಕಲ್ಬುರ್ಗಿ, ಬೀದರ್ ಕೂಡ ಸೇರಿತ್ತು. ರಾಜ್ಯ ಸರ್ಕಾರ ತನ್ನ ವ್ಯಾಪ್ತಿಯಲ್ಲಿ ಪಾರಂಪರಿಕ ಎಂದು ಘೋಷಿಸಿಕೊಳ್ಳುವ ಜೊತೆಗೆ, ಯುನೆಸ್ಕೋ ಅಂತಹ ಸಂಸ್ಥೆ ವಿಶ್ವ ಪಾರಂಪರಿಕ ತಾಣ ಎಂದು ಗುರುತಿಸಿದಾಗ ಮಾತ್ರ ರಾಜ್ಯದ ಪ್ರವಾಸೋದ್ಯಮಕ್ಕೆ ವಿಶ್ವ ಮಾನ್ಯತೆ ದೊರೆಯುತ್ತದೆ. ಆದರೆ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ ಸಿದ್ಧಪಡಿಸಿದ ವರದಿಯನ್ನು ಸ್ವೀಕರಿಸಿದ ರಾಜ್ಯ ಸರ್ಕಾರ ತನ್ನಲ್ಲಿಯೇ ಇರಿಸಿಕೊಂಡಿದೆ.
ನಿರ್ದೇಶನಾಲಯದ ಆಯುಕ್ತರಾಗಿ ಮತ್ತು ನಗರ ಪಾಲಿಕೆ ಆಯುಕ್ತರಾಗಿ ಡಾ.ಸಿ.ಜಿ.ಬೆಟಸೂರಮಠ್ ಅವರು ನಿವೃತ್ತರಾದ ಬಳಿಕ ಅಧಿಕಾರಕ್ಕೆ ಬಂದ ಯಾರೊಬ್ಬರೂ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಇದರಿಂದಾಗಿ ಇಡೀ ಯೋಜನೆ ನೆಲಕಚ್ಚಿದೆ. ಆದರೂ ಪ್ರಾಚ್ಯವಸ್ತು ಸಂಗ್ರಹಾಲಯ ತನ್ನ ಕಚೇರಿ ಆವರಣದಲ್ಲಿ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಬಹುದಾದ ಎಲ್ಲ ತಾಣಗಳ ಛಾಯಾಚಿತ್ರ ಪ್ರದರ್ಶನದ ಜೊತೆಗೆ, ಅಲ್ಲಿನ ವಿಶೇಷತೆಯನ್ನು ಒಳಗೊಂಡ ಪುಸ್ತಕವನ್ನು ಸಿದ್ಧಪಡಿಸಿಕೊಂಡಿದೆ. ಸರ್ಕಾರಕ್ಕೆ ಸಲ್ಲಿಕೆಯಾದ ಪ್ರಸ್ತಾವನೆಗೆ ಜೀವ ತುಂಬಿ, ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದರಲ್ಲಿಯೇ ರಾಜ್ಯ ಸರ್ಕಾರ ಎಡವಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.