ರಾಜ್ಯದ ಅನೇಕ ಹೆದ್ದಾರಿಗಳ ಸಂಚಾರ ಪುನಾರಂಭ

By Web DeskFirst Published Aug 13, 2019, 10:57 AM IST
Highlights

ರಾಜ್ಯದಲ್ಲಿ ಭಾರೀ ಮಳೆಯಿಂದ ಕಡಿತಗೊಂಡಿದ್ದ ರಸ್ತೆ ಸಂಪರ್ಕ ಇದೀಗ ಮತ್ತೆ ಆರಂಭವಾಗಿದೆ. ಹಲವು ರಸ್ತೆಗಳಲ್ಲಿ ವಾಹನ ಸಂಚಾರ ಶುರುವಾಗಿದೆ. 

ಬೆಂಗಳೂರು [ಆ.13]:  ಭಾರೀ ಮಳೆಯಿಂದ ಕಳೆದ ಒಂದು ವಾರದಿಂದ ಅಬ್ಬರಿಸುತ್ತಿದ್ದ ನದಿಗಳು ಸ್ವಲ್ಪ ಶಾಂತವಾಗಿದ್ದು, ಇದರೊಂದಿಗೆ ಅನೇಕ ಕಡೆ ಕಡಿತಗೊಂಡ ರಸ್ತೆ ಸಂಚಾರ ಪುನಾರಂಭಗೊಂಡಿದೆ.

ಕಳೆದ 6 ದಿನಗಳಿಂದ ಉಕ್ಕಿ ಹರಿಯುತ್ತಿದ್ದ ಕಪಿಲಾ ನದಿಯಲ್ಲಿ ನೀರಿನ ಪ್ರಮಾಣ ಇಳಿಮುಖವಾಗಿದ್ದು, ಸೋಮವಾರ ಮೈಸೂರು-ನಂಜನಗೂಡು ರಾಷ್ಟ್ರೀಯ ಹೆದ್ದಾರಿ ಸಂಚಾರ ಮುಕ್ತಗೊಳಿಸಲಾಯಿತು. ಜಲಾವೃತಗೊಂಡಿದ್ದ ಯಾದಗಿರಿ ಜಿಲ್ಲೆಯ ಬೀದರ್‌-ಶ್ರೀರಂಗಪಟ್ಟರಾಜ್ಯ ಹೆದ್ದಾರಿ-19ರಲ್ಲಿ ನೀರಿನ ಹರಿವು ಇಳಿದಿದ್ದು, ಸಂಚಾರ ಮತ್ತೆ ಆರಂಭಗೊಂಡಿದೆ. ಅತ್ತ ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸ್ಥಗಿತಗೊಂಡಿದ್ದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಸಂಚಾರ ಪುನಾರಂಭಗೊಂಡಿದೆ. ಇನ್ನು ಬೆಳಗಾವಿ-ಗೋವಾ ರಸ್ತೆಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದ್ದು, ಭಾರೀ ವಾಹನಗಳ ಸಂಚಾರ ರದ್ದು ಮುಂದುವರೆದಿದೆ. ರೈಲು ಸಂಚಾರ ಸಹಜ ಸ್ಥಿತಿಯತ್ತ ಮರಳಿದೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಶಿರಾಡಿ ಸಂಚಾರ ಮುಕ್ತ:  ಮಂಗಳೂರು- ಬೆಂಗಳೂರು ಸಂಪರ್ಕಿಸುವ ಶಿರಾಡಿ ಘಾಟ್‌ ರಸ್ತೆ ತೆರವುಗೊಂಡಿದೆ. ಕುಶಾಲನಗರದ ಕೊಪ್ಪ ಬಳಿ ಸೇತುವೆ ಮೇಲೆ ನೀರು ನಿಂತು ತಡೆಯಾಗಿದ್ದ ಮಾಣಿ-ಮೈಸೂರು ಹೆದ್ದಾರಿಯೂ ಭಾನುವಾರ ತೆರವುಗೊಂಡಿದೆ. ಆದರೆ ಚಿಕ್ಕಮಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಚಾರ್ಮಾಡಿ ಘಾಟ್‌ನಲ್ಲಿ ಹಲವೆಡೆ ಗುಡ್ಡ ಕುಸಿತ ಮುಂದುವರೆದ ಕಾರಣ, ಸಂಚಾರ ನಿರ್ಬಂಧ ಮುಂದುವರೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಕಳಸ-ಹೊರನಾಡಿನ ಸೇತುವೆ ಮೇಲಿನ ನೀರು ಇಳಿಮುಖವಾಗಿದ್ದು, ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಜಲಾವೃತಗೊಂಡಿದ್ದ ಶೃಂಗೇರಿಯಿಂದ ದಕ್ಷಿಣ ಕನ್ನಡಕ್ಕೆ ಸಾಗುವ ರಸ್ತೆಯಲ್ಲೂ ನೀರಿನ ಪ್ರಮಾಣ ಇಳಿಕೆಯಾಗಿದ್ದು ಸಂಚಾರ ಮತ್ತೆ ಆರಂಭವಾಗಿದೆ. ಭಾರೀ ಮಳೆಯಿಂದ ಶಿವಮೊಗ್ಗದಿಂದ ಚಿತ್ರದುರ್ಗ, ತೀರ್ಥಹಳ್ಳಿ, ರಿಪ್ಪನ್‌ಪೇಟೆಗೆ ಸಂಪರ್ಕ ಕಡಿತಗೊಂಡಿದ್ದ ರಸ್ತೆಗಳು ಭಾನುವಾರದಿಂದ ಸಂಚಾರಕ್ಕೆ ಮುಕ್ತವಾಗಿವೆ.

click me!