ಕೇಂದ್ರದ ಬೆಳೆ ವಿಮೆ ಬದಲು ರಾಜ್ಯದಿಂದ ರೈತರಿಗಾಗಿ ಹೊಸ ಯೋಜನೆ

By Web DeskFirst Published Jun 15, 2019, 9:50 AM IST
Highlights

ಕೇಂದ್ರದ ಬೆಳೆ ವಿಮೆ ಯೋಜನೆಯ ಬದಲಾಗಿ ರಾಜ್ಯ ಸರ್ಕಾರ ರೈತರಿಗಾಗಿ ಹೊಸ ಯೋಜನೆಯೊಂದನ್ನು ಜಾರಿಗೊಳಿಸಲಿದೆ ಎಂದು ರಾಜ್ಯ ಕೃಷಿ ಸಚಿವ ಶಿವಶಂಕರ ರೆಡ್ಡಿ ಹೇಳಿದ್ದಾರೆ. ರೈತರಿಗೆ ಆಗುವ ಅನಾನುಕೂಲತೆ ತಡೆಯುವ ನಿಟ್ಟಿನಲ್ಲಿ ಹೊಸ ಯೋಜನೆ ಆರಂಭಿಸಲಾಗುತ್ತಿದೆ.

ಬೆಂಗಳೂರು (ಜೂ.15) :  ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಗೆ ಪರ್ಯಾಯವಾಗಿ ರಾಜ್ಯ ಸರ್ಕಾರ ಹೊಸ ಬೆಳೆ ವಿಮೆ ಯೋಜನೆ ಜಾರಿಗೊಳಿಸಲಿದೆ ಎಂದು ಕೃಷಿ ಸಚಿವ ಎಚ್‌.ಎನ್‌.ಶಿವಶಂಕರ ರೆಡ್ಡಿ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯಿಂದ ವಿಮಾ ಕಂಪನಿಗಳಿಗೆ ಲಾಭವಾಗುತ್ತಿದ್ದು, ಕಳೆದ ಎರಡು ವರ್ಷಗಳಲ್ಲಿ ಈ ಯೋಜನೆಯಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಿಲ್ಲ ಎಂಬುದು ಗೊತ್ತಾಗಿದೆ. ಈ ಅಂಶವನ್ನು ಗಮನದಲ್ಲಿ ಇಟ್ಟುಕೊಂಡು ರಾಜ್ಯ ಸರ್ಕಾರ ಹೊಸ ಬೆಳೆ ವಿಮೆ ಯೋಜನೆ ಜಾರಿಗೆ ತರಲು ಚಿಂತನೆ ನಡೆಸಿತ್ತು. ಈಗಾಗಲೇ ಕೃಷಿ ವಿಶ್ವವಿದ್ಯಾನಿಲಯಗಳು, ಕೃಷಿ ಇಲಾಖೆ ಉನ್ನತ ಅಧಿಕಾರಿಗಳು ಹಾಗೂ ರೈತ ಮುಖಂಡರು, ತಜ್ಞರೊಂದಿಗೆ ಸಮಾಲೋಚನೆ ನಡೆಸಿದ್ದು, ಹೊಸ ಬೆಳೆ ವಿಮೆ ಯೋಜನೆ ಕುರಿತ ಸಾಧಕ-ಬಾಧಕಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಫಸಲ್‌ ಬಿಮಾ ಯೋಜನೆಯ ಕೆಲವೊಂದು ನಿಯಮಗಳು ಬದಲಿಸಿ ರೈತರಿಗೆ ಹೆಚ್ಚಿನ ಅನುಕೂಲವಾಗುವಂತೆ ನಿಯಮಗಳನ್ನು ಅಳವಡಿಸುವ ಕುರಿತು ಚಿಂತನೆ ನಡೆಸಲಾಗಿದೆ. ಯಾವ ಬೆಳೆಗಳಿಗೆ ವಿಮೆ ನೀಡಬೇಕು. ಎಷ್ಟುಪ್ರಮಾಣದಲ್ಲಿ ವಿಮೆ ಕಂತುಗಳನ್ನು ಕಟ್ಟಿಸಿಕೊಳ್ಳಬೇಕು. ಪ್ರಧಾನಮಂತ್ರಿ ಫಸಲ್‌ ಬಿಮಾದಲ್ಲಿ ಆಗಿರುವಂತಹ ಲೋಪವೇನು ಎಂಬಿತ್ಯಾದಿಗಳ ಕುರಿತು ತಜ್ಞರು ಮತ್ತು ರೈತರು ಚರ್ಚಿಸಿ ನಿರ್ಧಾರ ಕೈಗೊಂಡ ಬಳಿಕ ಸರ್ಕಾರ ನೂತನ ಬೆಳೆ ವಿಮಾ ಯೋಜನೆ ಜಾರಿಗೆ ತರಲು ಪ್ರಯತ್ನಗಳು ನಡೆದಿವೆ ಎಂದು ತಿಳಿಸಿದರು.

ಪ್ರಧಾನಮಂತ್ರಿ ಕಿಸಾನ್‌ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರದ ಆದೇಶದಂತೆ ಸಾಗುವಳಿ ಭೂಮಿ ಹೊಂದಿರುವ ಎಲ್ಲ ರೈತರಿಗೆ ವಾರ್ಷಿಕ ಆರು ಸಾವಿರ ರು. ನಗದು ನೀಡಲಾಗುತ್ತಿದೆ. ಈ ಅನುದಾನ ಮೂರು ಕಂತುಗಳಲ್ಲಿ ಅರ್ಹ ರೈತರ ಖಾತೆಗಳಿಗೆ ಜಮಾ ಆಗಲಿದೆ. ರಾಜ್ಯದಲ್ಲಿ 2015-16ರ ಕೃಷಿ ಗಣತಿಯಂತೆ 86.81 ಲಕ್ಷ ರೈತರಿದ್ದು, ಪ್ರಧಾನಮಂತ್ರಿ ಕಿಸಾನ್‌ ಯೋಜನೆಯಡಿ ಇಲ್ಲಿಯವರೆಗೆ 11.09 ಲಕ್ಷ ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಪ್ರಥಮ ಕಂತಿನ ಅನುದಾನವು 1,21,289 ರೈತರಿಗೆ ನೀಡಲಾಗಿದೆ. ದ್ವಿತೀಯ ಅನುದಾನ 2,34,524 ರೈತರಿಗೆ ನೀಡಲಗಿದೆ. ಈ ಯೋಜನೆಗೆ ನೋಂದಣಿ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಹೇಳಿದರು.

click me!