Fact Check| ರಾಹುಲ್‌ ಹುಟ್ಟಿದಾಗ ನರ್ಸ್‌ ರಾಜಮ್ಮಗೆ ಕೇವಲ 13 ವರ್ಷ!

By Kannadaprabha NewsFirst Published Jun 15, 2019, 9:39 AM IST
Highlights

ರಾಹುಲ್‌ ಹುಟ್ಟಿದಾಗ ನರ್ಸ್‌ ರಾಜಮ್ಮಗೆ ಕೇವಲ 13 ವರ್ಷ. ಹೀಗಂತ ಸುದ್ದಿಯೊಂದು ಸೋಶಿಯಲ್ ಮಿಡಿಯಾಗಳಲ್ಲಿ ಸದ್ದು ಮಾಡುತ್ತಿದೆ. ಈ ಸುದ್ದಿ ಹಿಂದಿನ ನಿಜಾಂಶವೇನು? ಇಲ್ಲಿದೆ ನೋಡಿ

ವಯನಾಡು[ಜೂ.15]: ಕೇರಳದ ವಯನಾಡಿನಲ್ಲಿ ಸ್ಪರ್ಧಿಸಿ ಲೋಕಸಭೆಗೆ ಆಯ್ಕೆಯಾದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಇತ್ತೀಚೆಗೆ ತಮ್ಮ ಕ್ಷೇತ್ರದ ಮತದಾರರಿಗೆ ಅಭಿನಂದನೆ ಸಲ್ಲಿಸಲು ಹೋಗಿದ್ದರು. ಆಗ ನಿವೃತ್ತ ನರ್ಸ್‌ ರಾಜಮ್ಮ ವಾವತ್ತಿಲ್‌ ಅವರನ್ನು ಭೇಟಿ ಮಾಡಿದ್ದರು. ಈಕೆ 49 ವರ್ಷದ ಹಿಂದೆ ರಾಹುಲ್‌ ಹುಟ್ಟಿದಾಗ ನವದೆಹಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ನರ್ಸ್‌ ಆಗಿದ್ದರು ಮತ್ತು ರಾಹುಲ್‌ರನ್ನು ಮೊದಲು ಎತ್ತಿಕೊಂಡಿದ್ದು ಇವರೇ. ಹಾಗಂತ ರಾಹುಲ್‌ರನ್ನು ವಯನಾಡಿನಲ್ಲಿ ಭೇಟಿಯಾದಾಗ ತಬ್ಬಿಕೊಂಡು ರಾಜಮ್ಮ ಖುಷಿಪಟ್ಟಿದ್ದರು. ಇದನ್ನು ರಾಹುಲ್‌ ಕೂಡ ಟ್ವೀಟ್‌ ಮಾಡಿದ್ದರು.

ಥ್ಯಾಂಕ್ಯೂ ರಾಜಮ್ಮ: ಮಗುವಾಗಿದ್ದಾಗ ತನ್ನ ಆರೈಕೆ ಮಾಡಿದ್ದ ನರ್ಸ್ ಭೇಟಿಯಾದ ರಾಹುಲ್!

ಆದರೆ, ಮುರಳಿಕೃಷ್ಣ ಎಂಬುವರು ಮೊನ್ನೆ ಈ ಕುರಿತು ಟ್ವೀಟ್‌ ಮಾಡಿ, ರಾಜಮ್ಮಗೆ ಈಗ 62 ವರ್ಷ. ರಾಹುಲ್‌ಗೆ 49 ವರ್ಷ. ಅಂದರೆ ರಾಹುಲ್‌ ಹುಟ್ಟಿದಾಗ ರಾಜಮ್ಮಗೆ 13 ವರ್ಷವಾಗಿತ್ತು. ಅಷ್ಟುಚಿಕ್ಕ ವಯಸ್ಸಿಗೆ ಯಾರಾದರೂ ನರ್ಸ್‌ ಆಗಲು ಸಾಧ್ಯವೇ? ಇಲ್ಲೂ ಹಗರಣ! ರಾಜಮ್ಮ ಸುಳ್ಳು ಹೇಳುತ್ತಿದ್ದಾರೆ. ಕಾಂಗ್ರೆಸಿಗರು ಪ್ರಚಾರಕ್ಕಾಗಿ ಇಂತಹದ್ದೊಂದು ಫೋಟೋ ಹರಿಬಿಟ್ಟಿದ್ದಾರೆ ಎಂದು ಹೇಳಿದ್ದಾರೆ. ಈ ಟ್ವೀಟ್‌ ವೈರಲ್‌ ಆಗಿದ್ದು, ಸಾವಿರಾರು ಬಾರಿ ಶೇರ್‌ ಆಗಿದೆ ಮತ್ತು ಭಾರಿ ಪ್ರಮಾಣದಲ್ಲಿ ಲೈಕ್ಸ್‌ ಗಳಿಸಿದೆ.

Rajamma is 62
Rahul is 49
So when he was born, the nurse was 13 year old
Yaha bhi saala scam....🤔 https://t.co/Aht03Br951

— Muralikrishna🇮🇳 (@MuralikrishnaE1)

ಆದರೆ, ಈ ಕುರಿತು ಪರಿಶೀಲನೆ ನಡೆಸಿದಾಗ ಮುರಳಿಕೃಷ್ಣ ಹೇಳಿದಂತೆ ರಾಜಮ್ಮಗೆ ಈಗ 62 ವರ್ಷವಲ್ಲ, ಬದಲಿಗೆ 72 ವರ್ಷ ಎಂದು ತಿಳಿದುಬಂದಿದೆ.

ಪಿಟಿಐ ಹಾಗೂ ಎಲ್ಲಾ ಪ್ರಮುಖ ಪತ್ರಿಕೆಗಳೂ ರಾಜಮ್ಮಳ ವಯಸ್ಸನ್ನು 72 ಎಂದೇ ವರದಿ ಮಾಡಿವೆ. ಹೀಗಾಗಿ ‘ರಾಹುಲ್‌-ಮಾಜಿ ನರ್ಸ್‌ ಭೇಟಿ ಹಗರಣ’ ಆರೋಪ ಸುಳ್ಳು.

click me!