ಪೋಷಕರಿಗಿದು ಗುಡ್ ನ್ಯೂಸ್ : ಇಳಿಯಲಿದೆ ಮಕ್ಕಳ ಶಾಲಾ ಬ್ಯಾಗ್ ತೂಕ

By Web DeskFirst Published May 4, 2019, 10:49 AM IST
Highlights

ಶಾಲಾ ಬ್ಯಾಗ್‌ನ ಭಾರ ಈ ವರ್ಷದಿಂದಲೇ ಕಡಿಮೆಯಾಗಲಿದೆ. ಒಂದರಿಂದ ಹತ್ತನೇ ತರಗತಿವರೆಗಿನ ಮಕ್ಕಳ ಶಾಲಾ ಬ್ಯಾಗ್‌ಗೆ ತೂಕ ನಿಗದಿಗೊಳಿಸಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ. 

ಬೆಂಗಳೂರು :  ಮಕ್ಕಳು ಮಣಗಟ್ಟಲೆ ಶಾಲಾ ಪುಸ್ತಕಗಳನ್ನು ಹೊತ್ತುಕೊಂಡು ಹೋಗುತ್ತಿದ್ದ ಶಾಲಾ ಬ್ಯಾಗ್‌ನ ಭಾರ ಈ ವರ್ಷದಿಂದಲೇ ಕಡಿಮೆಯಾಗಲಿದೆ. ಒಂದರಿಂದ ಹತ್ತನೇ ತರಗತಿವರೆಗಿನ ಮಕ್ಕಳ ಶಾಲಾ ಬ್ಯಾಗ್‌ಗೆ ತೂಕ ನಿಗದಿಗೊಳಿಸಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ. ಜೊತೆಗೆ, ಒಂದು ಮತ್ತು ಎರಡನೇ ತರಗತಿ ಮಕ್ಕಳಿಗೆ ಮನೆಗೆಲಸ (ಹೋಮ್‌ ವರ್ಕ್) ನೀಡಬಾರದು ಹಾಗೂ ಮೂರನೇ ಶನಿವಾರವನ್ನು ಬ್ಯಾಗ್‌ ರಹಿತ ದಿನವೆಂದು ಆಚರಿಸಬೇಕೆಂದು ತಿಳಿಸಿದೆ.

ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ 2019-20ನೇ ಸಾಲಿನಿಂದಲೇ ಅನ್ವಯವಾಗುವಂತೆ ನೂತನ ಆದೇಶ ಜಾರಿಯಾಗಲಿದೆ. ರಾಜ್ಯದ 1ರಿಂದ 10ನೇ ತರಗತಿ ವಿದ್ಯಾರ್ಥಿಗಳ ಶಾಲಾ ಬ್ಯಾಗ್‌ ತೂಕವು ವಿದ್ಯಾರ್ಥಿಗಳ ದೇಹ ತೂಕದ ಸರಾಸರಿ ಶೇ.10ರಷ್ಟನ್ನು ಮೀರಬಾರದು, ಒಂದನೇ ತರಗತಿಗೆ ಎರಡು ಕೆ.ಜಿ. ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ಗರಿಷ್ಠ ಐದು ಕೆ.ಜಿ. ತೂಕ ಮೀರದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದೆ.

ಯಾವ ತರಗತಿಗೆ ಎಷ್ಟುಕೆ.ಜಿ.:

ಸಣ್ಣ ವಯಸ್ಸಿನ ಮಕ್ಕಳಿಗೆ ಹೆಚ್ಚಿನ ಹೊರೆ ಹೊರಿಸುವುದರಿಂದ ಬೆನ್ನು ನೋವು, ಕತ್ತು ನೋವುಗಳು ಶಾಶ್ವತವಾಗಿ ಕಾಣಿಸಿಕೊಳ್ಳಲಿವೆ. ಹೀಗಾಗಿ, ಬ್ಯಾಗ್‌ ತೂಕವನ್ನು ಕಡಿಮೆ ಮಾಡಲಾಗುತ್ತಿದೆ. ಒಂದು ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳಿಗೆ 1.5ರಿಂದ 2 ಕಿ.ಗ್ರಾಂ., ಮೂರರಿಂದ ಐದನೇ ತರಗತಿಗೆ 2ರಿಂದ 3 ಕಿ.ಗ್ರಾಂ., ಆರರಿಂದ ಎಂಟನೇ ತರಗತಿಗೆ 3ರಿಂದ 4 ಕಿ.ಗ್ರಾಂ., 9ರಿಂದ 10ನೇ ತರಗತಿಗೆ ನಾಲ್ಕರಿಂದ ಐದು ಕಿ.ಗ್ರಾಂ. ಮೀರಬಾರದು ಎಂದು ತಿಳಿಸಿದೆ.

ಆದೇಶದಲ್ಲಿ ಏನಿದೆ:

ಒಂದು ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಮನೆಗೆಲಸ ನೀಡಬಾರದು. ವಿದ್ಯಾರ್ಥಿಗಳಿಗೆ ಮುಂಚಿತವಾಗಿಯೇ ಆಯಾ ದಿನದ ವೇಳಾಪಟ್ಟಿಗೆ ಅನುಗುಣವಾಗಿ ಪಠ್ಯಪುಸ್ತಕ, ನೋಟ್‌ ಪುಸ್ತಕಗಳನ್ನು ಶಾಲೆಗೆ ತರಲು ಅಗತ್ಯ ಸೂಚನೆ ನೀಡಬೇಕು. ಮಕ್ಕಳು ಶಾಲೆಗಳಿಗೆ ಕುಡಿಯುವ ನೀರು ತರುವುದನ್ನು ತಪ್ಪಿಸಲು ಶಾಲೆಗಳಲ್ಲಿಯೇ ಶುದ್ಧ ನೀರಿನ ವ್ಯವಸ್ಥೆ ಕಲ್ಪಿಸಬೇಕು. 100 ಪೇಜ್‌ ಮೀರಿದ ನೋಟ್‌ ಪುಸ್ತಕಗಳನ್ನು ನಿಗದಿಗೊಳಿಸಬಾರದು ಎಂದು ಸೂಚಿಸಿದೆ.

ಅತಿಯಾದ ಹೊರೆಯಿರುವ ಶಾಲಾ ಬ್ಯಾಗ್‌ನಿಂದ ಉಂಟಾಗಬಹುದಾದ ದುಷ್ಪರಿಣಾಮಗಳ ಬಗ್ಗೆ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಬೇಕು. ಕಡಿಮೆ ಖರ್ಚಿನ ಹಗುರವಾಗಿರುವ ಮತ್ತು ದೀರ್ಘಕಾಲ ಬಾಳಿಕೆ ಬರುವಂತಹ ಶಾಲಾ ಬ್ಯಾಗ್‌, ಪೆನ್ಸಿಲ್‌ ಹಾಗೂ ಇನ್ನಿತರ ಲೇಖನ ಸಾಮಾಗ್ರಿಗಳನ್ನು ಬಳಸುವಂತೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಬೇಕು. ವಿದ್ಯಾರ್ಥಿಯು ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ತೆಗೆದುಕೊಂಡು ಹೋಗುವ ಪಠ್ಯಪುಸ್ತಕಗಳು, ನೋಟ್‌ ಪುಸ್ತಕಗಳು, ಲೇಖನ ಸಾಮಗ್ರಿಗಳು, ಕಲಿಕಾ ಉಪಕರಣಗಳು ಹಾಗೂ ಇನ್ನಿತರ ವಸ್ತುಗಳನ್ನು ತರಗತಿಯೊಳಗೆ ಶೇಖರಿಸಿಡುವಂತೆ ಅಗತ್ಯ ಅನುಕೂಲತೆ ಕಲ್ಪಿಸಬೇಕು ಎಂದು ತಿಳಿಸಿದೆ.

ಮೂರನೇ ಶನಿವಾರ ಬ್ಯಾಗ್‌ ರಹಿತ ದಿನ:

ತಿಂಗಳ ಮೂರನೇ ಶನಿವಾರವನ್ನು ‘ಬ್ಯಾಗ್‌ ರಹಿತ ದಿನ’ವನ್ನಾಗಿ ಆಚರಿಸಬೇಕು. ಆ ದಿನ ಶಿಕ್ಷಕರು ಪಠ್ಯಪುಸ್ತಕ ಅಥವಾ ಇತರ ಪೂರಕ ಸಾಮಗ್ರಿಗಳ ಅವಶ್ಯಕತೆ ಇಲ್ಲದೆ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಬೇಕು. ವಿಜ್ಞಾನ ಪ್ರಯೋಗ ಮತ್ತು ಪ್ರದರ್ಶನಗಳು, ಸಾಮಾನ್ಯ ಜ್ಞಾನದ ಶೈಕ್ಷಣಿಕ ಸಂಘದ ಚಟುವಟಿಕೆಗಳು, ಚಿತ್ರಕಲೆ, ಚಿತ್ರಗಳಿಗೆ ಬಣ್ಣ ತುಂಬುವ ಚಟುವಟಿಕೆ, ಕರಕುಶಲತೆ, ಭಕ್ತಿಗೀತೆಗಳು, ದೇಶಭಕ್ತಿ ಗೀತೆಗಳನ್ನು ಹಾಡಿಸುವುದು, ನಕ್ಷೆ ಓದಿಸುವುದು, ಹಾವು ಮತ್ತು ಏಣಿ, ಕೇರಂ ಬೋರ್ಡ್‌ನಂತಹ ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳನ್ನು ಆಡಿಸುವುದು, ನೃತ್ಯ, ಚರ್ಚಾ ಸ್ಪರ್ಧೆ, ನಾಟಕ, ಆಶುಭಾಷಣ, ಧ್ಯಾನ, ಯೋಗದಂತಹ ಚಟುವಟಿಕೆ ಕೈಗೊಳ್ಳುವುದು, ಶಾಲಾ ವ್ಯಾಪ್ತಿಯ ಕ್ಷೇತ್ರ ಸಂಚಾರ, ವಾರ್ತಾ ಪತ್ರಿಕೆಗಳ ಚಟುವಟಿಕೆಗಳು, ಗಣಿತ, ಅಬ್ಯಾಕಸ್‌ ಸೇರಿದಂತೆ ಶಾಲಾ ಪರಿಸರಕ್ಕೆ ಅನುಗುಣವಾಗಿ ಶೈಕ್ಷಣಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದು ತಿಳಿಸಿದೆ.

ಬ್ಯಾಗ್‌ ತೂಕ ಇಳಿಕೆಗೂ ಮುನ್ನ ಅಧ್ಯಯನ

ಒಂದರಿಂದ 10ನೇ ತರಗತಿ ವಿದ್ಯಾರ್ಥಿಗಳ ಶಾಲಾ ಬ್ಯಾಗ್‌ ಹೊರೆ ತಗ್ಗಿಸಲು ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಸಂಸ್ಥೆ (ಡಿಎಸ್‌ಇಆರ್‌ಟಿ) ಹಾಗೂ ರಾಷ್ಟ್ರೀಯ ಕಾನೂನು ಶಾಲೆ ಸಹಯೋಗದಲ್ಲಿ 2016-17ನೇ ಸಾಲಿನಲ್ಲಿ ‘ಪ್ರಾಯೋಗಿಕ ಅಧ್ಯಯನ’ ಕೈಗೊಂಡು ವರದಿ ತಯಾರಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಎರಡು ವರ್ಷದ ನಂತರ ಈ ವರದಿಯ ಅನುಷ್ಠಾನಕ್ಕೆ ಸರ್ಕಾರ ಆದೇಶ ಹೊರಡಿಸಿದೆ.

ಶಾಲಾ ಬ್ಯಾಗ್‌ ತೂಕದಿಂದ ವಿದ್ಯಾರ್ಥಿಗಳಲ್ಲಿ ಬೆನ್ನು ಮೂಳೆ ನೋವು, ಕತ್ತು ನೋವು ಕಾಣಿಸಿಕೊಳ್ಳುತ್ತಿದ್ದುದನ್ನು ಪರಿಗಣಿಸಿ ಶಿಕ್ಷಣ ತಜ್ಞರು, ಮಕ್ಕಳ ತಜ್ಞರು, ಮೂಳೆ ತಜ್ಞರನ್ನು ಒಳಗೊಂಡ ತಂಡವು ಅಧ್ಯಯನ ನಡೆಸಿದೆ. ಕೇಂದ್ರ ಸರ್ಕಾರ ಕೂಡ ಇದೇ ವರದಿಯನ್ನು ಹೋಲುವ ಆದೇಶವನ್ನು ಹೊರಡಿಸಿದೆ. ಕರ್ನಾಟಕ ಸೇರಿದಂತೆ ದೇಶಾದ್ಯಂತ ಇದೇ ಮಾದರಿಯಲ್ಲಿ ಶಾಲಾ ಬ್ಯಾಗ್‌ ನಿಯಮವನ್ನು ಅಳವಡಿಸಿಕೊಳ್ಳಲಾಗಿದೆ.


ಯಾವ ಕ್ಲಾಸ್‌ಗೆ ಎಷ್ಟುತೂಕದ ಬ್ಯಾಗ್‌?

ತರಗತಿ    ಬ್ಯಾಗ್‌ ತೂಕ

1-2    1.5-2 ಕೆ.ಜಿ.

3-5    2-3 ಕೆ.ಜಿ.

6-8    3-4 ಕೆ.ಜಿ.

9-10    4-5 ಕೆ.ಜಿ.

click me!