ರೈತರಿಗೆ ಮತ್ತೊಂದು ಬಂಪರ್ ಆಫರ್ ನೀಡಿದ ಸಿಎಂ : ಈ ಸಾಲವೂ ಮನ್ನಾ

By Web DeskFirst Published Jun 15, 2019, 7:41 AM IST
Highlights

ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಕರ್ನಾಟಕ ಸರ್ಕಾರ ರೈತರಿಗೆ ಗುಡ್ ನ್ಯೂಸ್ ಒಂದನ್ನು ನೀಡಿದೆ. ಈ ಸಾಲವನ್ನೂ ಮನ್ನಾ ಮಾಡುವುದಾಗಿ ಘೋಷಿಸಿದೆ.

ಬೆಂಗಳೂರು[ಜೂ.15] : ಸಾಲ ಮನ್ನಾ ಯೋಜನೆಯಡಿ ವಾಣಿಜ್ಯ ಬ್ಯಾಂಕುಗಳಲ್ಲಿನ ರೈತರ ಗರಿಷ್ಠ 2 ಲಕ್ಷ ರು. ವರೆಗಿನ ವಸೂಲಾಗದ ಸಾಲವನ್ನೂ (ಎನ್‌ಪಿಎ) ಮನ್ನಾ ಮಾಡಲು ಆದೇಶ ಹೊರಡಿಸಲಾಗಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್‌ ತಿಳಿಸಿದ್ದಾರೆ.

ವಾಣಿಜ್ಯ ಬ್ಯಾಂಕುಗಳಲ್ಲಿ ರೈತರು ಪಡೆದಿರುವ 965 ಕೋಟಿ ರು.ನಷ್ಟು ಬೆಳೆ ಸಾಲ ವಸೂಲಾಗದೆ ಎನ್‌ಪಿಎ ಆಗಿದೆ. ಈ ಸಾಲದ ಮೊತ್ತದಲ್ಲಿ ಶೇ.25ರಷ್ಟನ್ನು ವಾಣಿಜ್ಯ ಬ್ಯಾಂಕುಗಳು ಕೈಬಿಡಲು ಒಪ್ಪಿಕೊಂಡಿವೆ. ಉಳಿದ ಶೇ.75ರಷ್ಟುಸಾಲವನ್ನು ಸರ್ಕಾರ ಬ್ಯಾಂಕುಗಳಿಗೆ ಪಾವತಿಸಲಿದೆ. ಇದಕ್ಕಾಗಿ ಸರ್ಕಾರ ಸುಮಾರು 750 ಕೋಟಿ ರು. ಪಾವತಿಸಬೇಕಾಗಿದ್ದು, ಸುಮಾರು 1 ಲಕ್ಷ ಹೆಚ್ಚುವರಿ ರೈತರು ಸಾಲ ಮನ್ನಾ ಯೋಜನೆಯ ಫಲಾನುಭವಿಗಳಾಗಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಸಾಲ ಮನ್ನಾ ಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಶುಕ್ರವಾರ ವಿಧಾನಸೌಧದಲ್ಲಿ ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ, ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ಮತ್ತು ವಿವಿಧ ವಾಣಿಜ್ಯ ಬ್ಯಾಂಕ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮುಖ್ಯ ಕಾರ್ಯದರ್ಶಿ ಅವರು ಈ ಮಾಹಿತಿ ನೀಡಿದರು.

ಸಾಲ ಮನ್ನಾ ಯೋಜನೆಯಡಿ ಈಗಾಗಲೇ ಅರ್ಹತೆ ಹೊಂದಿರುವ ಮರು ಹೊಂದಾಣಿಕೆ ಸಾಲಗಳು (ರೀಸ್ಟ್ರಕ್ಚರ್‌್ಡ ಲೋನ್‌), ದೀರ್ಘಕಾಲದಿಂದ ಉಳಿದಿರುವ ಸಾಲಗಳು (ಓವರ್‌ ಡ್ಯೂ ಲೋನ್‌) ಮತ್ತು ಪ್ರೋತ್ಸಾಹಧನಕ್ಕೆ ಅರ್ಹವಾಗಿರುವ ಸಾಮಾನ್ಯ ಸಾಲಗಳನ್ನು (ರೆಗ್ಯುಲರ್‌ ಲೋನ್‌) ಪರಿಗಣಿಸಲಾಗಿತ್ತು. ಇದೀಗ ಎನ್‌ಪಿಎ ಮಾದರಿ ಸಾಲಗಳನ್ನು ಹೊಸದಾಗಿ ಸೇರಿಸಿ ಶುಕ್ರವಾರ ಹಣಕಾಸು ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ. ಜೂನ್‌ ಅಂತ್ಯದೊಳಗೆ ಎನ್‌ಪಿಎ ಸಾಲಗಳ ಮನ್ನಾಗೆ ಅರ್ಹ ರೈತರ ಸಾಲದ ಖಾತೆಗಳಿಗೆ ಹಣ ವರ್ಗಾಯಿಸುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎಂದು ಹೇಳಿದರು.

2 ಲಕ್ಷ ಬಿಟ್ಟು ಮಿಕ್ಕಿದ್ದು ರೈತರು ಕಟ್ಟಬೇಕು:

ಎನ್‌ಪಿಎ ಸಾಲ ಮನ್ನಾ ವಿಚಾರದಲ್ಲಿ ಸರ್ಕಾರ ಮತ್ತು ಬ್ಯಾಂಕ್‌ಗಳ ಮಧ್ಯೆ ಕೆಲ ಭಿನ್ನಾಭಿಪ್ರಾಯ ಇದ್ದಿದ್ದರಿಂದ ಈ ಮಾದರಿಯ ಸಾಲ ಮನ್ನಾ ತಡ ಆಯಿತು. ಭಿನ್ನಾಭಿಪ್ರಾಯ ಬಗೆಹರಿದಿರುವುದರಿಂದ ಸರ್ಕಾರ ಶೇ.75ರಷ್ಟುಸಾಲ ಪಾವತಿಗೆ ಒಪ್ಪಿಕೊಂಡಿದೆ. ಸರ್ಕಾರದ ಈ ಹೊಸ ಆದೇಶದಂತೆ ಎನ್‌ಪಿಎ ಮಾದರಿ ಸಾಲಗಳಲ್ಲಿ ರೈತರ 2 ಲಕ್ಷ ರು.ನಷ್ಟುಗರಿಷ್ಠ ಮೊತ್ತದ ಸಾಲ ಮನ್ನಾ ಆಗಲಿದೆ. ಎನ್‌ಪಿಎ ಆಗಿರುವ ಒಟ್ಟು ಸಾಲದ ಮೊತ್ತ 2 ಲಕ್ಷವಷ್ಟೇ ಆಗಿದ್ದರೆ ಅಥವಾ ಅದಕ್ಕಿಂತ ಕಡಿಮೆ ಇದ್ದರೆ ಸಂಪೂರ್ಣ ಸಾಲ ಮನ್ನಾ ಆಗಲಿದೆ. ಒಂದು ವೇಳೆ ಸಾಲದ ಮೊತ್ತ 2 ಲಕ್ಷಕ್ಕಿಂತ ಹೆಚ್ಚಿದ್ದರೆ ಸರ್ಕಾರದಿಂದ ಮನ್ನಾ ಆಗುವ 2 ಲಕ್ಷ ರು. ಮೊತ್ತ ಬಿಟ್ಟು ಉಳಿದ ಮೊತ್ತವನ್ನು ರೈತರು ಪಾವತಿಸಬೇಕು ಎಂದು ಸ್ಪಷ್ಟಪಡಿಸಿದರು.

ಈವರೆಗೆ 5,297 ಕೋಟಿ ಸಾಲ ಮನ್ನಾ:  ಒಟ್ಟು 16.31 ಲಕ್ಷ ರೈತರು ಸಾಲ ಮನ್ನಾ ಯೋಜನೆಗೆ ಅರ್ಹರಾಗಿದ್ದರು. ಇದರಲ್ಲಿ 4 ಲಕ್ಷ ರೈತರು ಸಹಕಾರಿ ಸಂಘಗಳಲ್ಲಿ ಸಾಲ ಪಡೆದವರು. ಅವರ ಸಾಲ ಹಂತ ಹಂತವಾಗಿ ಮನ್ನಾ ಮಾಡಲಾಗುತ್ತಿದೆ. ಬಾಕಿ 12 ಲಕ್ಷ ರೈತರ ಪೈಕಿ ವಾಣಿಜ್ಯ ಬ್ಯಾಂಕುಗಳಲ್ಲಿ ಇಲ್ಲಿಯವರೆಗೆ 7,49,091 ರೈತರ ಸಾಲಗಳನ್ನು ಮನ್ನ ಮಾಡಿ ಇದಕ್ಕಾಗಿ ಒಟ್ಟು 5,297 ಕೋಟಿ ರು.ಪಾವತಿ ಮಾಡಲಾಗಿದೆ. ಇದೀಗ ಎನ್‌ಪಿಎ ಅಡಿ ಸುಮಾರು 1 ಲಕ್ಷ ರೈತರ ಸಾಲ ಮನ್ನಾಗೆ ಆದೇಶ ಮಾಡಿದೆ. ಸುಮಾರು 1.61 ಲಕ್ಷ ಜನ ರೈತರು ಪಡಿತರ ಚೀಟಿ, ಆಧಾರ್‌ ಕಾರ್ಡ್‌ ಸೇರಿದಂತೆ ಅಗತ್ಯ ದಾಖಲೆಗಳನ್ನು ನೀಡುವುದು ವಿಳಂಬವಾಗಿರುವುದರಿಂದ ಸಾಲ ಮನ್ನಾ ಬಾಕಿ ಇದೆ ಎಂದು ಹೇಳಿದರು.

ಮಳೆಗಾಲ ಆರಂಭವಾಗಿರುವುದರಿಂದ ಭೂಮಿ ಉತ್ತುವುದು, ಬಿತ್ತನೆ ಕಾರ್ಯ ಸೇರಿದಂತೆ ಕೃಷಿ ಚಟುವಟಿಕೆಗೆ ರೈತರು ಹೊಸ ಸಾಲದ ನಿರೀಕ್ಷೆಯಲ್ಲಿದ್ದಾರೆ. ಹಾಗಾಗಿ ಮುಖ್ಯಮಂತ್ರಿ ಅವರು ರೈತರಿಗೆ ಹೊಸದಾಗಿ ಸಾಲ ಸೌಲಭ್ಯ ನೀಡುವಂತೆ ಸಭೆಯಲ್ಲಿ ಬ್ಯಾಂಕ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

- ವಿಜಯ ಭಾಸ್ಕರ್‌, ಮುಖ್ಯ ಕಾರ್ಯದರ್ಶಿ

click me!