1500 ಕೋಟಿ ‘ನೆರೆ ನೆರವು’ ಬಿಡುಗಡೆ

By Web DeskFirst Published Sep 19, 2019, 7:22 AM IST
Highlights

ಪ್ರವಾಹದಿಂದ ಸಂತ್ರಸ್ತರಾಗಿರುವ ಜನರಿಗೆ ಮನೆ ನಿರ್ಮಿಸಿಕೊಳ್ಳಲು 1,000 ಕೋಟಿ ರು. ಮತ್ತು ರಸ್ತೆಗಳ ದುರಸ್ತಿ ಮಾಡಲು ಲೋಕೋಪಯೋಗಿ ಇಲಾಖೆಗೆ 500 ಕೋಟಿ ರು. ಬಿಡುಗಡೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಬೆಂಗಳೂರು [ಸೆ.19]:  ಇತ್ತೀಚಿನ ಪ್ರವಾಹದಿಂದ ಸಂತ್ರಸ್ತರಾಗಿರುವ ಜನರಿಗೆ ಮನೆ ನಿರ್ಮಿಸಿಕೊಳ್ಳಲು 1,000 ಕೋಟಿ ರು. ಮತ್ತು ರಸ್ತೆಗಳ ದುರಸ್ತಿ ಮಾಡಲು ಲೋಕೋಪಯೋಗಿ ಇಲಾಖೆಗೆ 500 ಕೋಟಿ ರು. ಬಿಡುಗಡೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಬುಧವಾರ ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಿಕೊಳ್ಳಲು ಐದು ಲಕ್ಷ ರು. ನೀಡಲಾಗುವುದು. ಇದಕ್ಕಾಗಿ ಆಯಾ ಜಿಲ್ಲಾಧಿಕಾರಿಗಳ ಖಾತೆಗೆ ಅಗತ್ಯಕ್ಕೆ ತಕ್ಕಂತೆ ಹಣ ಬಿಡುಗಡೆ ಮಾಡಲಾಗುವುದು. ಸಂತ್ರಸ್ತರ ದಾಖಲೆ ಪರಿಶೀಲಿಸಿ ತಕ್ಷಣ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು.

ಇದರ ಜೊತೆಗೆ ಭಾಗಶಃ ಹಾನಿಗೊಳಗಾದ ಮನೆಗಳ ರಿಪೇರಿಗೆ 25 ಸಾವಿರ ರು. ನೀಡಲು ತೀರ್ಮಾನಿಸಲಾಗಿದೆ. ಪ್ರವಾಹದಿಂದ ಹಾಳಾಗಿರುವ ರಸ್ತೆಗಳ ದುರಸ್ತಿಗೆ ಲೋಕೋಪಯೋಗಿ ಇಲಾಖೆಗೆ 500 ಕೋಟಿ ರು. ಬಿಡುಗಡೆ ಮಾಡಲಾಗುವುದು. ಕೆರೆಗಳು ಹಾಳಾಗಿದ್ದರೆ ಅವುಗಳನ್ನು ಸಣ್ಣ ನೀರಾವರಿ ಇಲಾಖೆ ಮೂಲಕ ದುರಸ್ತಿ ಮಾಡಲಾಗುವುದು ಎಂದರು.

ಪಿಡಬ್ಲ್ಯುಡಿ ಕಾಮಗಾರಿಗೆ ತಡೆ ತೆರವು:

ಲೋಕೋಪಯೋಗಿ ಇಲಾಖೆಯಿಂದ ಕೈಗೆತ್ತಿಕೊಳ್ಳಲು ಉದ್ದೇಶಿಸಿದ್ದ 1500 ಕೋಟಿ ರು. ಮೊತ್ತದ ವಿವಿಧ ಕಾಮಗಾರಿಗಳ ಅನುಷ್ಠಾನಕ್ಕೆ ಮುಖ್ಯಮಂತ್ರಿಗಳು ತಡೆ ನೀಡಿದ್ದರು. ಈಗ ತಡೆ ತೆರವುಗೊಳಿಸಿ ಕಾಮಗಾರಿ ಮುಂದುವರೆಸಲು ಸಂಪುಟ ಒಪ್ಪಿಗೆ ನೀಡಿದೆ.

ಹಲವು ಕಾಮಗಾರಿಗಳಿಗೆ ಟೆಂಡರ್‌ ಕರೆದು, ಕಾಮಗಾರಿ ಸಹ ಆರಂಭಿಸಲಾಗಿತ್ತು. ತಡೆ ನೀಡಿರುವುದರಿಂದ ತೊಂದರೆಯಾಗುತ್ತಿದೆ ಎಂದು ಶಾಸಕರ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದರು.

10 ಆಸ್ಪತ್ರೆಗಳಲ್ಲಿ ಕ್ಯಾನ್ಸರ್‌ ಪತ್ತೆ ಸೌಲಭ್ಯ:

ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ ಮತ್ತು ಗರ್ಭಕಂಠದ ಕ್ಯಾನ್ಸರನ್ನು ಮೊದಲೇ ಪತ್ತೆ ಮಾಡುವ ಉದ್ದೇಶದಿಂದ ತುಮಕೂರು, ಮಂಗಳೂರು, ವಿಜಯಪುರ, ಚಿತ್ರದುರ್ಗ, ದಾವಣಗೆರೆ, ಬಾಗಲಕೋಟೆ, ಚಿಕ್ಕಮಗಳೂರು, ಹಾವೇರಿ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗಳಿಗೆ ತಲಾ ಒಂದು ಕೋಟಿ ರು. ಮೊತ್ತದ ಮ್ಯಾಮೋಗ್ರಫಿ ಸೇರಿದಂತೆ ಅತ್ಯಾಧುನಿಕ ಉಪಕರಣಗಳನ್ನು ನೀಡಲಾಗುವುದು ಎಂದು ಹೇಳಿದರು.

‘ಪೋಷಣ್‌’ ರಾಜ್ಯಾದ್ಯಂತ ವಿಸ್ತರಣೆ:

ಮಕ್ಕಳಲ್ಲಿ ರಕ್ತ ಹೀನತೆ, ಅಪೌಷ್ಟಿಕತೆ ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಪೋಷಣ್‌’ ಕಾರ್ಯಕ್ರಮಕ್ಕೆ ರಾಜ್ಯದ 19 ಜಿಲ್ಲೆಗಳನ್ನು ಕೇಂದ್ರ ಆಯ್ಕೆ ಮಾಡಿಕೊಂಡಿದೆ. ಆದರೆ ಈ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಈ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ 90 ಕೋಟಿ ರು. ನೀಡಲಿದೆ. ಕಾರ್ಯಕ್ರಮ ಅನುಷ್ಠಾನ ಮಾಡುವವವರಿಗೆ ಸ್ಮಾರ್ಟ್‌ ಫೋನ್‌, ಪವರ್‌ ಬ್ಯಾಂಕ್‌ ಇತ್ಯಾದಿ ನೀಡಲಾಗುವುದು ಎಂದು ಮಾಧುಸ್ವಾಮಿ ಹೇಳಿದರು.

ಬಯಲುಸೀಮೆ ಶಾಸಕರಿಗೆ ಹಣ ಬಿಡುಗಡೆ:

ಬಯಲುಸೀಮೆ ಅಭಿವೃದ್ಧಿ ಮಂಡಳಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಶಾಸಕರಿಗೆ ತಲಾ ಒಂದು ಕೋಟಿ ರು. ಬಿಡುಗಡೆ ಮಾಡುವುದಾಗಿ ಹಿಂದಿನ ಸರ್ಕಾರ ಘೋಷಿಸಿದ್ದರೂ ಹಣ ಬಿಡುಗಡೆ ಮಾಡಿರಲಿಲ್ಲ. ಈಗ ಮಂಡಳಿ ವ್ಯಾಪ್ತಿಯಲ್ಲಿ ಬರುವ ಸುಮಾರು 97 ಶಾಸಕರಿಗೆ ತಲಾ ಒಂದು ಕೋಟಿ ರು. ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಸಚಿವ ಸಂಪುಟದ ಇತರ ತೀರ್ಮಾನಗಳು:

- ಜಲಸಂಪನ್ಮೂಲ ಇಲಾಖೆಯಿಂದ ಬಳ್ಳಾರಿ ಜಿಲ್ಲೆ ತುಂಗಭದ್ರಾ ಯೋಜನೆಯಡಿ ಬರುವ ವಿಜಯನಗರ ಕಾಲುವೆಗಳನ್ನು ಸಂಪೂರ್ಣವಾಗಿ ಆಧುನೀಕರಣ ಮಾಡುವ 465.63 ಕೋಟಿ ರು.ಗಳ ಯೋಜನೆಗೆ ಆಡಳಿತಾತ್ಮಕ ಒಪ್ಪಿಗೆ

- ರಾಯಚೂರು ಜಿಲ್ಲೆ ಸಿಂಧನೂರಿನ ತುರುವಿಹಾಳದಲ್ಲಿ ಕಾಲೇಜು ನಿರ್ಮಿಸಲು ನೀರಾವರಿ ಇಲಾಖೆಗೆ ಸೇರಿದ 2.35 ಎಕರೆ ಭೂಮಿ ಶಿಕ್ಷಣ ಇಲಾಖೆಗೆ ಉಚಿತವಾಗಿ ನೀಡಿಕೆ

- ಬೆಳಗಾವಿ ಜಿಲ್ಲೆ ಹಿಂಡರಗಿ ಹೋಬಳಿಯ 21 ಗ್ರಾಮಗಳಿಗೆ ಬಹುಗ್ರಾಮ ಯೋಜನೆಯಡಿ ಕುಡಿಯುವ ನೀರು ಪೂರೈಕೆಗೆ ಮೊದಲ ಹಂತದಲ್ಲಿ 143.54 ಕೋಟಿ ರು. ಯೋಜನೆಗೆ ಸಮ್ಮತಿ

- ಕಲಬುರಗಿ ಜಿಲ್ಲೆ ಅಫಜಲಪುರ ಗ್ರಾಮದಲ್ಲಿ ನೀರಾವರಿ ಇಲಾಖೆಗೆ ಸೇರಿದ ನಾಲ್ಕು ಎಕರೆ ಜಾಗ ಕಂದಾಯ ಇಲಾಖೆಗೆ ಉಚಿತವಾಗಿ ನೀಡಿಕೆ

- ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕು ಕೊಡಾಳು ಗ್ರಾಮದ ವಸತಿ ಪ್ರದೇಶಗಳಿಗೆ ಬಹುಗ್ರಾಮ ಯೋಜನೆಯಡಿ 57.75 ಕೋಟಿ ರು. ವೆಚ್ಚದಲ್ಲಿ ಕುಡಿಯುವ ನೀರು ಪೂರೈಕೆ

- ಮಾನ್ವಿಯಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಜಲಸಂಪನ್ಮೂಲ ಇಲಾಖೆಗೆ ಸೇರಿದ ನಾಲ್ಕು ಎಕರೆ ಭೂಮಿ ನೀಡಿಕೆ

- ಕರ್ನಾಟಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸೇವಾ ನಿಯಮಗಳಿಗೆ ಒಪ್ಪಿಗೆ

- ಸಚಿವಾಲಯದ ವಿವಿಧ ಇಲಾಖೆಗಳ ಹಾರ್ಡ್‌ವೇರ್‌, ಸಾಫ್ಟ್‌ವೇರ್‌ಗಳ ನಿರ್ವಹಣೆಗೆ ಖಾಸಗಿ ಸಂಸ್ಥೆಗೆ 9.55 ಕೋಟಿ ರು. ಗುತ್ತಿಗೆಗೆ ಒಪ್ಪಿಗೆ

click me!