
ಬೆಂಗಳೂರು(ಜ.09): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಾಧನಾ ಸಂಭ್ರಮ ಯಾತ್ರೆ ಮುಗಿಯುವ ಮೊದಲೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ನೇರ ನಿಗಾವಣೆಯಲ್ಲಿರುವ ಎರಡು ತಂಡಗಳ ಪೈಕಿ ಒಂದು ತಂಡ ರಾಜ್ಯಕ್ಕೆ ಆಗಮಿಸಿದ್ದು, ತನ್ನ ಕಾರ್ಯಚಟುವಟಿಕೆ ಆರಂಭಿಸಿದೆ. ಚುನಾವಣೆಯಲ್ಲಿ ಗೆಲ್ಲಬಲ್ಲ ಚುನಾವಣಾ ಅಭ್ಯರ್ಥಿಗಳ ಬಗ್ಗೆ ಸಮೀಕ್ಷೆ ನಡೆಸಲು ಒಂದು ತಂಡ ಹಾಗೂ ಸೋಷಯಲ್ ಮೀಡಿಯಾ ಮೇಲುಸ್ತುವಾರಿ ವಹಿಸಿಕೊಳ್ಳಲು ಒಂದು ತಂಡ ಸೇರಿ ಎರಡು ತಂಡಗಳು ರಾಜ್ಯಕ್ಕೆ ಆಗಮಿಸಲಿವೆ.
ಈ ತಂಡಗಳು ರಾಹುಲ್ ಗಾಂಧಿಗೆ ನೇರ ವರದಿ ನೀಡಲಿವೆ ಎಂದು ಕನ್ನಡಪ್ರಭ ಈ ಹಿಂದೆಯೇ ವರದಿ ಮಾಡಿತ್ತು. ಇದರ ಭಾಗವಾಗಿ ಈಗಾಗಲೇ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದ ಸಮನ್ವಯ ತಂಡ ಸೋಮವಾರ ರಾಜ್ಯಕ್ಕೆ ಆಗಮಿಸಿದೆ.
ಎಐಸಿಸಿ ಮಾಧ್ಯಮ ಸಮನ್ವಯಕಾರರಾದ ರಾಧಿಕಾ ಖೇಹರ್, ಪ್ರಿಯಾಂಕ ಚತುರ್ವೇದಿ ಅವರ ತಂಡವು ರಾಜ್ಯಕ್ಕೆ ಆಗಮಿಸಿದ್ದು, ರಾಷ್ಟ್ರ ಹಾಗೂ ರಾಜ್ಯದ ಸುದ್ದಿ ವಾಹಿನಿಗಳಲ್ಲಿ ಪ್ರಭಾವಿಯಾಗಿ ಪಕ್ಷದ ನಿಲುವುಗಳನ್ನು ಮಂಡಿಸಬಲ್ಲ ಸಮರ್ಥ ವಕ್ತಾರರ ನೇಮಕಕ್ಕೆ ಮುಂದಾಗಿದೆ ಕುತೂಹಲಕಾರಿ ಸಂಗತಿಯೆಂದರೆ, ಬಿಜೆಪಿಯ ಹಿರಿಯ ಮುಖಂಡ ಡಿ.ಬಿ. ಚಂದ್ರೇಗೌಡ ಅವರ ಪುತ್ರಿ ವೀಣಾಗೌಡ ಅವರು ರಾಷ್ಟ್ರೀಯ ಸುದ್ದಿವಾಹಿನಿಗಳಲ್ಲಿ ಕಾಂಗ್ರೆಸ್ ಪರ ವಕ್ತಾರರಾಗಿ ಕೆಲಸ ಮಾಡಲು ತಂಡದ ಎದುರು ಸಂದರ್ಶನಕ್ಕೆ ಹಾಜರಾಗಿದ್ದಾರೆ.
ಖೇಹರ್ ತಂಡವು ರಾಷ್ಟ್ರ ಹಾಗೂ ರಾಜ್ಯದ ಸುದ್ದಿ ವಾಹಿನಿಗಳಿಗಾಗಿ ವಕ್ತಾರರ ನೇಮಕಕ್ಕೆ ಸಂದರ್ಶನ ನಡೆಸಿದೆ. ಇದರಲ್ಲಿ ಡಿ.ಬಿ.ಚಂದ್ರೇಗೌಡ ಅವರ ಪುತ್ರಿ ವೀಣಾಗೌಡ ತಮ್ಮ ಸಾಮರ್ಥ್ಯ ಪ್ರದರ್ಶಿಸಿ ವಕ್ತಾರರಾಗಿ ಸ್ಥಾನ ಗಿಟ್ಟಿಸಿಕೊಳ್ಳಲು ಕಠಿಣ ಪ್ರಯತ್ನ ನಡೆಸಿದ್ದಾರೆ.
ಇದೇ ವೇಳೆ ಹಲವರು ಸಂದರ್ಶನಕ್ಕೆ ಹಾಜರಾಗಿದ್ದು, ಆಯ್ಕೆಯಾದವರಲ್ಲಿ ಮೂರು ಮಂದಿಯನ್ನು ಎಐಸಿಸಿ ಪರ ಸುದ್ದಿವಾಹಿನಿಗಳಲ್ಲಿ ವಕ್ತಾರರಾಗಿ ನೇಮಕ ಮಾಡಲಾಗುವುದು. ಉಳಿದವರನ್ನು ರಾಜ್ಯಕ್ಕೆ ನೀಡಲಾಗುವುದು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ತಂಡವು ಮೂರು ದಿನಗಳ ಕಾಲ ರಾಜ್ಯದಲ್ಲೇ ಬೀಡು ಬಿಡಲಿದ್ದು, ಮೊದಲ ದಿನವಾದ ಸೋಮವಾರ ಶಿವಮೊಗ್ಗ, ಕಾರವಾರ, ಚಿತ್ರದುರ್ಗ ಹಾಗೂ ಗದಗ ಜಿಲ್ಲೆಗಳಿಗೆ ಸಂಬಂಧಿ ಸಿದಂತೆ ಸಾಮಾಜಿಕ ಜಾಲತಾಣ ಗಳ ವ್ಯವಹಾರದ ಬಗ್ಗೆ ಪರಾ ಮರ್ಶೆ ನಡೆಸಿದೆ.
ಇದೇ ವೇಳೆ ಜಿಲ್ಲಾ ಮಟ್ಟದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕ್ರಿಯಾಶೀಲರಾಗಿರುವ ವರನ್ನು ಗುರುತಿಸಿ ನೇಮಕ ಮಾಡಲೂ ಸಹ ತಂಡ ಸಂದರ್ಶನ ನಡೆಸಿದೆ. ಮಂಗಳವಾರ ಮೈಸೂರು, ಬೆಂಗಳೂರು ಸೇರಿ ದಕ್ಷಿಣ ಕರ್ನಾಟಕ ವ್ಯಾಪ್ತಿಯ ಸಾಮಾಜಿಕ ಜಾಲತಾಣದ ಚಟುವಟಿಕೆ ಪರಿಶೀಲಿಸಿದ್ದು, ಬುಧವಾರ ಉತ್ತರ ಕರ್ನಾಟಕದ ಭಾಗದ ಚಟುವಟಿಕೆ ಬಗ್ಗೆ ಗಮನ ಹರಿಸಲಿದೆ. ಮೂರು ದಿನಗಳ ಚಟುವಟಿಕೆ ಬಗೆಗಿನ ಸಂಪೂರ್ಣ ವರದಿಯನ್ನು ತಂಡವು ರಾಹುಲ್ ಗಾಂಧಿ ಯವರಿಗೆ ಸಲ್ಲಿಸಲಿದೆ ಎಂದು ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.