ರಾಜ್ಯ ಸರ್ಕಾರಕ್ಕೆ ಸಹೋದರರ ಕಂಟಕ: ಕೋಡಿ ಶ್ರೀ ಭವಿಷ್ಯ

By Web DeskFirst Published 12, Sep 2018, 5:03 PM IST
Highlights

ಸಮ್ಮಿಶ್ರ ಸರ್ಕಾರಕ್ಕೆ ಸಹೋದರರಿಂದ ಕಂಟಕ ಇದೆ ಎಂದು ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಭವಿಷ್ಯ ನುಡಿದಿದ್ದು, ರಾಜ್ಯ ರಾಜಕಾರಣದಲ್ಲಿ ಭಾರೀ ಕುತೂಹಲ ಕೆರಳಿಸಿದೆ.

ಹಾಸನ (ಸೆ. 12): ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಯಾವಾಗ ಪತನವಾಗುತ್ತೋ ಎನ್ನುವ ಡೋಲಾಯಮಾನ ಸ್ಥಿತಿಯಲ್ಲಿದೆ. ಹೀಗಿರುವಾಗ ಸಮ್ಮಿಶ್ರ ಸರ್ಕಾರದ ಮೇಲೆ ಕೋಡಿ ಮಠದ ಶ್ರೀ ಭವಿಷ್ಯ ನುಡಿದಿದ್ದಾರೆ.

ಸಮ್ಮಿಶ್ರ ಸರ್ಕಾರಕ್ಕೆ ಸಹೋದರರಿಂದ ಕಂಟಕ ಇದೆ ಎಂದು ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಭವಿಷ್ಯ ನುಡಿದಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ. ಬುಧವಾರ ಅರಸೀಕೆರೆ ತಾಲೂಕಿನ ಮಾಡಾಳು ಗ್ರಾಮದಲ್ಲಿ ಮಾತನಾಡಿರುವ ರಾಜೇಂದ್ರ ಸ್ವಾಮಿಗಳು, ರಾಜ್ಯ ಸರ್ಕಾರಕ್ಕೆ ಸಹೋದರರಿಂದ ಕಂಟಕವಿದ್ದು, ನವೆಂಬರ್ ತಿಂಗಳವರೆಗೂ ರಾಜಕೀಯ ಪರಿಸ್ಥಿತಿ ಡೋಲಾಯಮಾನವಾಗಿರುತ್ತದೆ ಎಂದು ನುಡಿದಿದ್ದಾರೆ.

ಬೆಳಗಾವಿ ಸಹೋದರರಂತೆ ಅಧಿಕಾರಕ್ಕಾಗಿ ಮತ್ತೋರ್ವ ಅಣ್ಣ ಹುಟ್ಟಿಕೊಳ್ಳುತ್ತಾನೆ.  2 ತಿಂಗಳ ಹಿಂದೆಯೇ ಬ್ರಾತೃ ಬಲ ಹೆಚ್ಚಿದೆ ಎಂದು ನಾನು ಹೇಳಿದ್ದೆ. ಅದರಂತೆ ಬೆಳಗಾವಿಯ ಸಹೋದರರು ಕಂಟಕವಾಗಿದ್ದಾರೆ ಎಂದು ಹೇಳಿದ್ದಾರೆ. 

ಕೋಡಿ ಶ್ರೀ ನುಡಿದಂತೆ ಜಾರಕಿಹೊಳಿ ಸಹೋದರ ಹೊರತುಪಡಿಸಿ ಮೈತ್ರಿ ಸರ್ಕಾರಕ್ಕೆ ಕಂಟಕ ತರುವ ಆ ಅಣ್ಣ ಯಾರು ಎನ್ನುವುದು ರಾಜ್ಯ ರಾಜಕಾರಣದಲ್ಲಿ ಭಾರೀ ಕುತೂಹಲ ಕೆರಳಿಸಿದೆ. 2018ರ ವಿಧಾನಸಭೆ ಚುನಾವಣೆ ವೇಳೆ ಎಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವ ಯೋಗವಿದೆ ಎಂದು ಶ್ರೀಗಳು ಹೇಳಿದ್ದರು. ಅದರಂತೆ ಕುಮಾರಸ್ವಾಮಿ ಕಾಂಗ್ರೆಸ್ ಬೆಂಬಲದಿಂದ ಮುಖ್ಯಮಂತ್ರಿಯಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

Last Updated 19, Sep 2018, 9:24 AM IST