ನಮಗಿರುವಷ್ಟು ಶತ್ರುಗಳು ಯಾರಿಗಿದ್ದಾರೆ?: ರಫೆಲ್ ಬೇಕೆಂದ ವಾಯುಪಡೆ ಚೀಫ್!

By Web DeskFirst Published Sep 12, 2018, 4:45 PM IST
Highlights

ರಫೆಲ್ ಯುದ್ಧ ವಿಮಾನ ಒಪ್ಪಂದ ಸರಿ ಎಂದ ವಾಯುಪಡೆ ಮುಖ್ಯಸ್ಥ! ಕೇಂದ್ರ ಸರ್ಕಾರದ ನಿರ್ಧಾರ ಬೆಂಬಲಿಸಿದ ಏರ್‌ಚೀಫ್‌ ಮಾರ್ಷಲ್ ಬಿ.ಎಸ್‌ ಧನೋವಾ! ವಾಯುಪಡೆ ಕೊರತೆ ನೀಗಿಸಲು ರಫೆಲ್ ಯುದ್ಧ ವಿಮಾನ ಖರೀದಿ ಅನಿವಾರ್ಯ! ಶತ್ರು ರಾಷ್ಟ್ರಗಳ ಬೆದರಿಕೆ ಹಿಮ್ಮೆಟ್ಟಿಸಲು ರಫೆಲ್ ವಿಮಾನದ ಅವಶ್ಯಕತೆ

ನವದೆಹಲಿ(ಸೆ.12): ಶತ್ರು ರಾಷ್ಟ್ರಗಳಿಂದ ಭಾರತಕ್ಕೆ ತೀವ್ರ ಸ್ವರೂಪದ ಬೆದರಿಕೆ ಯಿದ್ದು, ಅದನ್ನು ಎದುರಿಸಲು ಫ್ರೆಂಚ್‌ ರಫೇಲ್ ಫೈಟರ್ ಜೆಟ್‌ಗಳು ಮತ್ತು ರಷ್ಯಾದ ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಖರೀದಿಸುವ ಕೇಂದ್ರ ಸರ್ಕಾರದ ನಿರ್ಧಾರ ಸರಿಯಾಗಿದೆ ಎಂದು ವಾಯುಪಡೆ ಮುಖ್ಯಸ್ಥ . ಏರ್‌ಚೀಫ್‌ ಮಾರ್ಷಲ್ ಬಿ.ಎಸ್‌ ಧನೋವಾ ಹೇಳಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ರಫೆಲ್ ಡೀಲ್ ಕುರಿತು ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದ ಧನೋವಾ, ಇದೀಗ ಮತ್ತೊಮ್ಮೆ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾರೆ. ರಫೆಲ್ ಯುದ್ಧ ವಿಮಾನ ಖರೀದಿಯಿಂದ ವಾಯುಪಡೆಯ ಕೊರತೆ ನೀಗಲು ಸಾಧ್ಯ ಎಂದಿರುವ ಧನೋವಾ, ರಫೇಲ್ ನಂತಹ ಹೈಟೆಕ್ ಯುದ್ಧ ವಿಮಾನಗಳು ಭಾರತಕ್ಕೆ ಅಗತ್ಯವಿದೆ ಎಂಧು ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ಇರುವ ಮಧ್ಯಮ ವ್ಯಾಪ್ತಿಯ ತೇಜಸ್‌ ಒಂದರಿಂದಲೇ ಕ್ಲಿಷ್ಟಕರ ಪರಿಸ್ಥಿತಿ ನಿಭಾಯಿಸಲು ಸಾಧ್ಯವಿಲ್ಲ. ಈಗಾಗಲೇ ತೇಜಸ್‌ ಮೇಲೆ ವಾಯುಪಡೆ ಭಾರೀ ವೆಚ್ಚ ಮಾಡುತ್ತಿದೆ. ತೇಜಸ್ ಮಾರ್ಕ್‌-2 ಹೆಸರಿನ 12 ಸ್ಕ್ವಾಡ್ರನ್ ಗಳ ಖರೀದಿಗೆ ವಾಯುಪಡೆ ಮುಂದಾಗಿದೆ. ಈಗಾಗಲೇ 123 ಮಾರ್ಕ್‌-ಎ ಜೆಟ್‌ಗಳನ್ನು ಖರೀದಿಸಲಾಗಿದೆ ಎಂದು ಧನೋವಾ ಮಾಹಿತಿ ನೀಡಿದರು.

ಭಾರತ ಎದುರಿಸುತ್ತಿರುವಷ್ಟು ತೀವ್ರ ಸ್ವರೂಪದ ಬೆದರಿಕೆಯನ್ನು ಬೇರೆ ಯಾವುದೇ ದೇಶ ಎದುರಿಸುತ್ತಿಲ್ಲ. ನಮ್ಮ ಎದುರಾಳಿಗಳ ಉದ್ದೇಶಗಳು ರಾತೋರಾತ್ರಿ ಬದಲಾಗಬಹುದು. ಆದ್ದರಿಂದ ಅವರನ್ನು ಸರಿಗಟ್ಟುವ ಶಕ್ತಿ ಸಾಮರ್ಥ್ಯ ನಮ್ಮಲ್ಲೂ ಇರಬೇಕು ಎಂದು ಧನೋವಾ ಪ್ರತಿಪಾದಿಸಿದರು. 

ಪಾಕಿಸ್ತಾನ ಮತ್ತು ಚೀನಾದ ಯುದ್ಧ ವಿಮಾನಗಳ ಸಂಖ್ಯೆಗಳನ್ನು ವಿವರಿಸಿದ ಅವರು, ಭಾರತಕ್ಕೆ 10 ಸ್ಕ್ವಾಡ್ರನ್ ಗಳಷ್ಟು ಯುದ್ಧ ವಿಮಾನಗಳ ಕೊರತೆಯಿದೆ. ಶತ್ರುಗಳ ಸವಾಲುಗಳನ್ನು ಎದುರಿಸಲು ಈ ಕೊರತೆಯನ್ನು ತುಂಬಿಕೊಳ್ಳಬೇಕಿದೆ ಎಂದರು. 

click me!