
ಬೆಂಗಳೂರು[ಜು.07]: ಒಂದು ವಾರದ ಅಮೆರಿಕ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಭಾನುವಾರ ರಾತ್ರಿ ಬೆಂಗಳೂರಿಗೆ ಆಗಮಿಸಲಿದ್ದು, ರಾಜೀನಾಮೆ ನೀಡಿರುವ ಅತೃಪ್ತರ ಮನವೊಲಿಕೆ ಮಾಡುವ ಕಾರ್ಯಕ್ಕೆ ಮುಂದಾಗುವುದರ ಜತೆಗೆ ಘಟನೆಯ ಕುರಿತು ವಿಸ್ತೃತ ವಿವರವನ್ನು ಪಡೆದುಕೊಳ್ಳಲಿದ್ದಾರೆ.
ಮುಖ್ಯಮಂತ್ರಿ ವಿದೇಶ ಪ್ರವಾಸದಲ್ಲಿರುವ ವೇಳೆ ಸರ್ಕಾರ ಅಸ್ಥಿರಗೊಳ್ಳುವ ಆತಂಕದ ಕಾರ್ಮೋಡ ಕವಿದಿದೆ. ಸಭಾಧ್ಯಕ್ಷ ರಮೇಶ್ ಕುಮಾರ್ ಅಂಗಳದಲ್ಲಿ ಶಾಸಕರ ರಾಜೀನಾಮೆ ಪತ್ರಗಳಿದ್ದು, ಮುಂದಿನ ನಿರ್ಣಯಗಳ ಕುರಿತು ಮುಖ್ಯಮಂತ್ರಿಗಳು ಸಮಾಲೋಚನೆ ನಡೆಸಲಿದ್ದಾರೆ. ಈಗಾಗಲೇ ಶನಿವಾರವೇ ದೂರವಾಣಿ ಮೂಲಕ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕರೊಂದಿಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.
ಊಹಿಸದಷ್ಟುನಿಗೂಢವಾಗಿ ನಡೆದ ದಿಢೀರ್ ಬೆಳವಣಿಗೆ ಬಗ್ಗೆ ಅಮೆರಿಕದಲ್ಲಿಯೇ ಇದ್ದುಕೊಂಡು ಕುಮಾರಸ್ವಾಮಿ ಮಾಹಿತಿ ಪಡೆದುಕೊಂಡಿದ್ದಾರೆ. ಅಮೆರಿಕದಿಂದ ಭಾನುವಾರ ರಾತ್ರಿ 8.30ಕ್ಕೆ ಬೆಂಗಳೂರಿಗೆ ಬರಲಿದ್ದಾರೆ. ನಗರಕ್ಕೆ ಆಗಮಿಸಿದ ತರುವಾಯ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ರಾಜ್ಯದಲ್ಲಿನ ಬೆಳವಣಿಗೆ ಕುರಿತು ಮಾಹಿತಿ ಪಡೆದುಕೊಳ್ಳಲಿದ್ದಾರೆ.
ಕಾಂಗ್ರೆಸ್, ಜೆಡಿಎಸ್ ನಾಯಕರ ಅಭಿಪ್ರಾಯಗಳನ್ನು ಪಡೆದು ಅದಷ್ಟುಸರ್ಕಾರವನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಸಲಿದ್ದಾರೆ. ಸರ್ಕಾರ ಉಳಿಸಿಕೊಳ್ಳುವುದು ಕೈ ಮೀರಿದೆ ಎಂಬುದು ಮನದಟ್ಟಾದರೆ ಸರ್ಕಾರ ವಿಸರ್ಜನೆ ಮಾಡುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿಬಂದಿವೆ. ಕೆಲವರ ರಾಜೀನಾಮೆ ಅನಿರೀಕ್ಷಿತವಾಗಿದ್ದ ಕಾರಣ ರಾಜಕೀಯ ತಂತ್ರಗಾರಿಕೆ ರೂಪಿಸುವ ಬಗ್ಗೆ ಚಿಂತನೆ ನಡೆಸಲಿದ್ದಾರೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.