ಹಾಸನ ಲೋಕಸಭಾ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡಿದರೆ ನಮ್ಮ ಬೆಂಬಲವಿಲ್ಲ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ಎ.ಮಂಜು ಅವರಿಗೆ ಸಿಎಂ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.
ಹಾಸನ[ಫೆ.18] ಲೋಕಸಭಾ ಚುನಾವಣೆಗೆ ಮೈತ್ರಿ ಪಕ್ಷಗಳ ಸೀಟು ಹಂಚಿಕೆ ವಿಚಾರ ನಮ್ಮ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಕಾಂಗ್ರೆಸ್ ನಾಯಕರಿಗೆ ಬಿಟ್ಟ ವಿಚಾರ. ಅಭಿವೃದ್ಧಿ ಕಡೆಗೆ ಗಮನ ನೀಡೋದು ನನ್ನ ಕರ್ತವ್ಯ. ಈ ಬಗ್ಗೆ ನಾನು ಯಾರೊಂದಿಗೂ ಚರ್ಚೆ ಮಾಡಿಲ್ಲ. ಕಾಂಗ್ರೆಸ್ ದೊಡ್ಡ ಪಕ್ಷ ಅವರು ಮೊದಲು ತೀರ್ಮಾನ ಮಾಡಬೇಕು ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಹಾಸನದಲ್ಲಿ ಪ್ರಜ್ವಲ್ ಸ್ಪರ್ಧೆ ಮಾಡಿದ್ರೆ ಬೆಂಬಲ ಇಲ್ಲ ಎಂಬ ಎ. ಮಂಜು ಹೇಳಿಕೆಗೆ ಪರೋಕ್ಷವಾಗಿ ಟಾಂಗ್ ನೀಡಿದ ಕುಮಾರಸ್ವಾಮಿ, ನಮಗೆ ಯಾರು ಬೆಂಬಲ ಕೊಡ್ತಾರೆ ಅನ್ನೋದು ಮುಖ್ಯವಲ್ಲ. ತೀರ್ಮಾನ ಜಿಲ್ಲೆಯ ಮತದಾರರಿಗೆ ಬಿಟ್ಟದ್ದು. ಯಾರು ಏನು ಹೇಳಿಕೆ ಕೊಟ್ಟರೂ ನನಗೆ ಅಪ್ರಸ್ತುತ ಎಂದರು.
ಹಾಸನ ದೋಸ್ತಿ-ಕುಸ್ತಿ: 'ದೇವೇಗೌಡ್ರು ಓಕೆ, ಪ್ರಜ್ವಲ್ ಸ್ಪರ್ಧಿಸಿದ್ರೆ ಬೆಂಬಲ ಇಲ್ಲ'
ಜಿಲ್ಲೆಯ ಜನತೆ ನಮ್ಮ ಪಕ್ಷದಿಂದ ಹಲವರನ್ನು ಬೆಳೆಸಿದ್ದಾರೆ. ದೇವೇಗೌಡರ ನಾಯಕತ್ವಕ್ಕೆ ಬೆಂಬಲ ನೀಡಿದ್ದಾರೆ ಎನ್ನುವ ಮೂಲಕ ಪ್ರಜ್ವಲ್ ರೇವಣ್ಣ ಸ್ಪರ್ಧೆ ಖಚಿತ ಪಡಿಸುವ ಮಾತನ್ನಾಡಿದರು.
ಈ ಸರಕಾರ ಹಾಸನ ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ. ದೇವೇಗೌಡರ ಮಕ್ಕಳಾಗಿ ಹುಟ್ಟಿ ನಾಡಿನ ಸರ್ವತೋಮುಖ ಅಭಿವೃದ್ಧಿಯ ಸಂಕಲ್ಪ ಮಾಡುತ್ತೇವೆ. ಸಮ್ಮಿಶ್ರ ಸರಕಾರ ಉತ್ತರ ಕರ್ನಾಟಕದಲ್ಲಿಯೂ ಕೈಗಾರಿಕೆ ಸ್ಥಾಪನೆಗೆ ಮುಂದಾಗಿದೆ. ಸಾಲಮನ್ನಾ ರೈತರಿಗೆ ತಾತ್ಕಾಲಿಕ ಪರಿಹಾರ ಎಂಬುದು ನನಗೆ ಗೊತ್ತು. ರಾಷ್ಟ್ರಕ್ಕೆ ಮಾದರಿಯಾಗಿ ಸಾಲ ಮನ್ನಾ ಮಾಡಲಾಗಿದೆ. ಮುಂದಿನ ಡಿಸೆಂಬರ್ ವೇಳೆಗೆ ಎಲ್ಲಾ ರೀತಿಯ ಸಾಲ ಮನ್ನಾ ಆಗಲಿದೆ. ನನ್ನ ತಂದೆ ತಾಯಿಯ ಭಕ್ತಿ ನಮ್ಮನ್ನು ಇಲ್ಲಿಗೆ ತಂದು ನಿಲ್ಲಿಸಿದೆ ಎಂದರು.
ಐಐಟಿಗೆ ಸರಿ ಸಮಾನವಾಗಿ ಜಿಲ್ಲೆಗೆ ವಿದ್ಯಾಕೇಂದ್ರ ತರಲು ಚಿಂತಿಸಿದ್ದೇವೆ. ನಾವು ದಬ್ಬಾಳಿಕೆ ಮಾಡಿ ರಾಜಕೀಯ ಮಾಡಿಲ್ಲ, ಮಾಡಲ್ಲ. ನಿಮ್ಮ ಪ್ರೀತಿಯಿಂದ ರಾಜಕೀಯ ಮಾಡುತ್ತೇವೆ ಎಂದು ಹೆಸರು ಹೇಳದೆ ಬಿಜೆಪಿ ಶಾಸಕ ಪ್ರೀತಂ ಗೌಡ ಮೇಲೆ ಕಿಡಿ ಕಾರಿದರು.