
ಬೆಂಗಳೂರು[ಜು.29]: ಎಚ್. ಡಿ. ಕುಮಾರಸ್ವಾಮಿ ಬಹುಮತ ಸಾಬೀತುಪಡಿಸುವಲ್ಲಿ ವಿಫಲಗೊಂಡಿದ್ದು ಇದರ ಬೆನ್ನಲ್ಲೇ ಮೈತ್ರಿ ಸರ್ಕಾರ ಪತನಗೊಂಡಿತ್ತು. ಬಳಿಕ ಶುಕ್ರವಾರದಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಬಿ. ಎಸ್. ಯಡಿಯೂರಪ್ಪ ಇಂದು ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಿದ್ದು, ಈ ಅಗ್ನಿಪರೀಕ್ಷೆಯಲ್ಲಿ ಗೆದ್ದಿದ್ದಾರೆ. ಈ ಪ್ರಕ್ರಿಯೆಯಲ್ಲಿ ಧ್ವನಿಮತದ ಮೂಲಕ ಅಂಗೀಕಾರ ಪಡೆದಿರುವ ಬಿಎಸ್‌ವೈ, ಹಣಕಾಸು ವಿಧೇಯಕವನ್ನೂ ಮಂಡಿಸಿದ್ದಾರೆ.
ಮೈತ್ರಿ ಸರ್ಕಾರದ ಹಣಕಾಸು ವಿಧೇಯಕವೇ ಮಂಡನೆ: ಬಿಎಸ್‌ವೈ
ವಿಶ್ವಾಸಮತ ಯಾಚನೆ ಪ್ರಕ್ರಿಯೆಗೂ ಮುನ್ನ ಮಾತನಾಡಿದ ಸಿಎಂ ಯಡಿಯೂರಪ್ಪ 'ನಾಡಿನ ಶಕ್ತಿ ದೇವತೆ ಚಾಮುಂಡೇಶ್ವರಿಗೆ ನಾನು ನಮಿಸುತ್ತೇನೆ, ಬಸವಾದಿ ಶರಣರ ಸ್ಮರಿಸುತ್ತೇನೆ. ಸಿದ್ದರಾಮಯ್ಯ, ಎಚ್ ಡಿಕೆ ಸೇಡಿನ ರಾಜಕಾರಣ ಮಾಡಿಲ್ಲ ಹೀಗಾಗಿ ನಾನೂ ಸಹ ಸೇಡಿನ ರಾಜಕಾರಣ ಮಾಡುವುದಿಲ್ಲ. ನಾಲ್ಕೈದು ತಿಂಗಳಲ್ಲಿ ಅಭಿವೃದ್ಧಿ ಗುರಿಯಿಟ್ಟುಕೊಂಡು ಕೆಲಸ ಮಾಡುತ್ತೇನೆ. ನನ್ನನ್ನು ವಿರೋಧ ಮಾಡಿದವರನ್ನೂ ಪ್ರೀತಿಯಿಂದ ಕಾಣುತ್ತೇನೆ. ನನ್ನಿಂದ ಏನಾದರೂ ತಪ್ಪಾದರೆ ಕೂಡಲೇ ನನ್ನನ್ನು ಎಚ್ಚರಿಸಿ, ಅದನ್ನು ಸರಿಪಡಿಸಿಕೊಳ್ಳುವ ಎಲ್ಲಾ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ' ಎಂದಿದ್ದಾರೆ.
ಬಳಿಕ ಮೈತ್ರಿ ಸರ್ಕಾರ ತಯಾರು ಮಾಡಿದ್ದ ಹಣಕಾಸು ಮಸೂದೆಯನ್ನು ಒಂದಕ್ಷರವೂ ಅಳಿಸದೆ ಮಂಡಿಸುತ್ತೇನೆ ಎಂದಿದ್ದ ಯಡಿಯೂರಪ್ಪ ತಮ್ಮ ಮಾತಿನಂತೆ ವಿಧಾನಸಭೆಯಲ್ಲಿ ಮಸೂದೆ ಮಂಡಿಸಿದ್ದಾರೆ. ಈ ಮಸೂದೆ ವಿಧಾನಸಭೆಯಲ್ಲಿ ಅಂಗೀಕಾರ ಪಡೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.