ಅ. 12 ರೊಳಗೆ ಸಚಿವ ಸಂಪುಟ ವಿಸ್ತರಣೆ ಆಗುತ್ತಾ?

By Web DeskFirst Published Oct 2, 2018, 8:23 AM IST
Highlights

26 ಕೈ ಶಾಸಕರಿಗೆ ಹುದ್ದೆ ಭಾಗ್ಯ | 6 ಮಂದಿಗೆ ಸಚಿವ ಸ್ಥಾನ, 20 ಮಂದಿಗೆ ನಿಗಮ-ಮಂಡಳಿ ಅಧಿಕಾರ | ರಾಜ್ಯ ಮಟ್ಟದಲ್ಲಿ ಫೈನಲ್‌: ಹೈಕಮಾಂಡ್‌ ಒಪ್ಪಿದ ಕೂಡಲೇ ಆದೇಶ | ಅ.10 ಅಥವಾ 12ಕ್ಕೆ

ವಿಸ್ತರಣೆ ಆಗುತ್ತಾ? ಮುಂದೆ ಹೋಗುತ್ತಾ?

 ಬೆಂಗಳೂರು (ಅ. 02): ಆಪರೇಷನ್‌ ಕಮಲಕ್ಕೆ ಒಳಗಾಗುವ ಭೀತಿ ಹುಟ್ಟಿಸಿದವರು, ಸರ್ಕಾರದಲ್ಲಿ ಕೆಲಸ ನಡೆಯುತ್ತಿಲ್ಲ ಎಂದು ಕೂಗು ಹಾಕಿದವರು ಹಾಗೂ ಲೋಕಸಭೆ ಚುನಾವಣೆ ವೇಳೆ ಪಕ್ಷಕ್ಕಾಗಿ ಉತ್ತಮ ಕೊಡುಗೆ ನೀಡುವ ಸಾಧ್ಯತೆ ಹೊಂದಿರುವ 26 ಮಂದಿ ಕಾಂಗ್ರೆಸ್‌ ಶಾಸಕರಿಗೆ ಅಧಿಕಾರ ದೊರೆಯುವ ಎಲ್ಲಾ ಸಾಧ್ಯತೆಯಿದೆ.

ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿ ನೇಮಕಾತಿ ಈ ಬಾರಿ ನಡೆಯಲಿದೆ ಎಂದೇ ಕಾಂಗ್ರೆಸ್‌ ಮೂಲಗಳು ಹೇಳುತ್ತವೆ. ಈ ಮೂಲಗಳ ಪ್ರಕಾರ ಸಚಿವ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ಪಡೆಯುವ ಹಾಗೂ ನಿಗಮ ಮಂಡಳಿಗಳಲ್ಲಿ ಸ್ಥಾನ ಪಡೆಯುವ ಈ 26 ಶಾಸಕರ ಪಟ್ಟಿಈಗಾಗಲೇ ಸಿದ್ಧವಾಗಿದೆ. ಈ ಪಟ್ಟಿಯ ಬಗ್ಗೆ ಹೈಕಮಾಂಡ್‌ನೊಂದಿಗೆ ಒಂದು ಬಾರಿ ಚರ್ಚೆಯಾಗುವುದು ಮಾತ್ರ ಬಾಕಿಯಿದೆ.

ಪ್ರಸ್ತುತ ಲಂಡನ್‌ ಪ್ರವಾಸದಲ್ಲಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ಅ. 3ರಂದು ನಗರಕ್ಕೆ ಹಿಂತಿರುಗಲಿದ್ದಾರೆ. ಇದಾದ ನಂತರ ರಾಜ್ಯ ನಾಯಕರು ದೆಹಲಿಗೆ ಭೇಟಿ ನೀಡಿ, ಈ ಪಟ್ಟಿಯ ಬಗ್ಗೆ ಚರ್ಚಿಸಲಿದ್ದಾರೆ. ಒಂದು ವೇಳೆ ಈ ಪಟ್ಟಿಗೆ ಹೈಕಮಾಂಡ್‌ ತನ್ನ ಒಪ್ಪಿಗೆ ನೀಡಿದರೆ, ಅ.10ರಿಂದ ಅ.15ರೊಳಗೆ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ.

ಕಾಂಗ್ರೆಸ್‌ನ ನಂಬಲರ್ಹ ಮೂಲಗಳ ಪ್ರಕಾರ ಸಂಪುಟ ವಿಸ್ತರಣೆ ನಡೆದರೆ ಆರು ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳುವ ಉದ್ದೇಶ ಪಕ್ಷದ ನಾಯಕರಿಗೆ ಇದೆ. ಈ ಆರು ಸ್ಥಾನಗಳಲ್ಲಿ ಸಿ.ಎಸ್‌.ಶಿವಳ್ಳಿ, ಎಂ.ಬಿ.ಪಾಟೀಲ್‌, ತುಕಾರಾಂ ಅವರು ಅವಕಾಶ ಗಿಟ್ಟಿಸುವುದು ಖಚಿತ ಎಂದೇ ಹೇಳಲಾಗುತ್ತಿದೆ.

ಉಳಿದ ಮೂರು ಸ್ಥಾನಗಳ ಪೈಕಿ ರಾಮಲಿಂಗಾರೆಡ್ಡಿ ಅವರಿಗೆ ಅವಕಾಶ ದೊರೆಯುವ ಸಾಧ್ಯತೆ ಹೆಚ್ಚಿದೆ. ಇದಕ್ಕೆ ಕಾರಣ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್‌ಗೆ ಗೆಲ್ಲುವ ಅವಕಾಶವಿದೆ ಎಂಬ ವರದಿಯಿದೆ. ಪ್ರಿಯಕೃಷ್ಣ ಅವರನ್ನು ಬೆಂ. ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕೆ ಇಳಿಸುವ ಉದ್ದೇಶವಿದ್ದು, ಹೀಗಾದಲ್ಲಿ ಪ್ರಿಯಕೃಷ್ಣ ಅವರನ್ನು ಗೆಲ್ಲಿಸುವ ಹೊಣೆಯನ್ನು ರಾಮಲಿಂಗಾರೆಡ್ಡಿ ಅವರಿಗೆ ಪಕ್ಷ ನೀಡಲಿದೆ. ಇದಕ್ಕಾಗಿ ಅವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇನ್ನು ಇಬ್ಬರು ಲಿಂಗಾಯರಿಗೆ ಈ ಬಾರಿ ಸಚಿವ ಸ್ಥಾನ ದೊರೆಯಲಿದ್ದು, ಈ ಪೈಕಿ ಎಂ.ಬಿ.ಪಾಟೀಲ್‌ಗೆ ಸ್ಥಾನ ಖಚಿತ. ಇನ್ನೊಂದು ಸ್ಥಾನಕ್ಕೆ ಬಿ.ಕೆ.ಸಂಗಮೇಶ್‌ ಮತ್ತು ಬಿ.ಸಿ. ಪಾಟೀಲ್‌ ನಡುವೆ ತೀವ್ರ ಸ್ಪರ್ಧೆಯಿದೆ. ಜತೆಗೆ, ಲಕ್ಷ್ಮೇ ಹೆಬ್ಬಾಳ್ಕರ್‌ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ. ಕುತೂಹಲಕಾರಿ ಸಂಗತಿಯೆಂದರೆ, ಪರಿಶಿಷ್ಟಜಾತಿ ಎಡಗೈ ಸಮುದಾಯದಿಂದ ಸಚಿವ ಸ್ಥಾನ ಕೇಳುತ್ತಿರುವ ರೂಪಾ ಶಶಿಧರ್‌ ಹಾಗೂ ಲಕ್ಷ್ಮೇ ಹೆಬ್ಬಾಳ್ಕರ್‌ ನಡುವೆ ವಿಚಿತ್ರ ಪೈಪೋಟಿಯಿದೆ.

ರೂಪಾ ಅವರಿಗೆ ಸಂಪುಟದಲ್ಲಿ ಸ್ಥಾನ ದೊರೆತರೆ ಲಕ್ಷ್ಮೇಗೂ ಸ್ಥಾನ ನೀಡಬೇಕು ಎಂಬ ಒತ್ತಾಯ ಪ್ರಭಾವಿ ನಾಯಕರಿಂದ ಇದೆ. ಇದೇ ವೇಳೆ ಲಕ್ಷ್ಮೇಗೆ ಸಚಿವ ಸ್ಥಾನ ನೀಡಬಾರದು ಎಂದು ಕಾಂಗ್ರೆಸ್‌ನ ಮತ್ತೊಂದು ಗುಂಪು ತೀವ್ರ ಒತ್ತಡ ನಿರ್ಮಾಣ ಮಾಡಿದೆ.

ಈ ಮಹಿಳೆಯರ ನಡುವಿನ ಪೈಪೋಟಿಯ ಪರಿಣಾಮವಾಗಿ ಇಬ್ಬರಿಗೂ ಸಚಿವ ಸ್ಥಾನ ನೀಡಬೇಕು, ಇಲ್ಲದಿದ್ದರೆ ಇಬ್ಬರಿಗೂ ಇಲ್ಲ ಎಂಬಂತಹ ಪರಿಸ್ಥಿತಿ ಇದೆ. ಇದರ ಪರಿಣಾಮವಾಗಿ ವಿಧಾನಪರಿಷತ್‌ ಸದಸ್ಯ ಧರ್ಮಸೇನ ಅವರ ಹೆಸರು ಪರಿಶಿಷ್ಟಪಂಗಡದ ಎಡಗೈ ಸಮುದಾಯದಿಂದ ಕೇಳಿಬಂದಿದೆ. ಮುಸ್ಲಿಮರ ಪೈಕಿ ನಜೀರ್‌ ಅಹಮದ್‌ ಹಾಗೂ ರಹೀಂ ಖಾನ್‌ ಹೆಸರು ಕೇಳಿ ಬರುತ್ತಿದೆ.

ನಿಗಮ ಮಂಡಳಿಗೆ 20 ಶಾಸಕರು:

ಕಾಂಗ್ರೆಸ್‌ ಮೂಲಗಳ ಪ್ರಕಾರ 18ರಿಂದ 20 ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ಭರ್ತಿಯಾಗಲಿದ್ದು, ಈ ಎಲ್ಲಾ ಸ್ಥಾನ ಶಾಸಕರಿಗೆ ದೊರೆಯಲಿದೆ. ಸಚಿವ ಸಂಪುಟಕ್ಕೆ ಪ್ರಯತ್ನಿಸುತ್ತಿರುವ ಹಲವರಿಗೆ ಸಂಪುಟದ ಹುದ್ದೆ ಕೈತಪ್ಪಿದರೆ ನಿಗಮ ಮಂಡಳಿಯ ‘ಸಮಾಧಾನಕರ ಬಹುಮಾನ’ ದೊರೆಯುವ ಸಾಧ್ಯತೆಯಿದೆ ಎನ್ನಲಾಗಿದೆ. ಹೀಗೆ ಸಚಿವ ಸ್ಥಾನಕ್ಕಾಗಿ ಕೇಳಿ ಅಂತಿಮವಾಗಿ ನಿಗಮ ಮಂಡಳಿ ಪಡೆಯುವ ಸಾಧ್ಯತೆಯಿರುವ ಶಾಸಕರ ಪಟ್ಟಿಯಲ್ಲಿ ಎಸ್‌.ಟಿ.ಸೋಮಶೇಖರ್‌, ಎಂ.ಟಿ.ಬಿ.ನಾಗರಾಜ್‌, ಬಿ.ಸಿ.ಪಾಟೀಲ್‌, ರಹೀಂ ಖಾನ್‌, ಉಮೇಶ್‌ ಜಾಧವ್‌, ಡಾ.ಸುಧಾಕರ್‌, ರಘುಮೂರ್ತಿ, ಶಿವರಾಮ ಹೆಬ್ಬಾರ್‌, ರೂಪಾ ಶಶಿಧರ್‌ ಹಾಗೂ ಲಕ್ಷ್ಮೇ ಹೆಬ್ಬಾಳ್ಕರ್‌ ಅವರಿದ್ದಾರೆ.

ಇವರಲ್ಲದೆ, ಪಕ್ಷೇತರ ನಾಗೇಶ್‌, ಬಂಗಾರಪೇಟೆ ನಾರಾಯಣ ಸ್ವಾಮಿ, ಭೀಮಾ ನಾಯ್‌್ಕ, ಬಸವರಾಜ ದದ್ದಲ್‌, ಮಹಾಂತೇಶ್‌ ಕೌಜಲಗಿ, ಮಹಾಂತೇಶ್‌ ಕುಮಟ್ಟಳ್ಳಿ, ನರೇಂದ್ರ ಮತ್ತು ಬಿ. ನಾರಾಯಣರಾವ್‌ ಅವರಿಗೂ ಈ ಬಾರಿ ನಿಗಮ-ಮಂಡಳಿ ಹುದ್ದೆ ದೊರೆಯಲಿದೆ ಎಂದು ಹೇಳಲಾಗುತ್ತಿದೆ.

ಬಿಡಿಎ ಅಧ್ಯಕ್ಷಗಿರಿಯಿಂದ ಪರಂ ಔಟ್‌:

ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಯಾವ ಯಾವ ಖಾತೆ ಕಾಂಗ್ರೆಸ್‌ ಪಾಲಿಗೆ ಬಂದಿದೆಯೋ ಆ ಖಾತೆಗಳ ವ್ಯಾಪ್ತಿಯಲ್ಲಿ ಬರುವ ನಿಗಮ ಮಂಡಳಿಗಳು ಆಯಾ ಪಕ್ಷಕ್ಕೆ ದೊರೆಯಲಿವೆ. ಕಾಂಗ್ರೆಸ್‌ಗೆ ದೊರೆಯಲಿರುವ ಪ್ರಮುಖ ನಿಗಮ ಮಂಡಳಿಗಳ ಪೈಕಿ ಅತ್ಯಂತ ಪೈಪೋಟಿಯಿರುವುದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷಗಿರಿಗೆ. ಪ್ರಸ್ತುತ ಬೆಂಗಳೂರ ನಗರಾಭಿವೃದ್ಧಿ ಸಚಿವ ಪರಮೇಶ್ವರ್‌ ಅವರೇ ಬಿಡಿಎ ಅಧ್ಯಕ್ಷರಾಗಿದ್ದಾರೆ. ಆದರೆ, ನಿಗಮ ಮಂಡಳಿ ನೇಮಕಾತಿ ವೇಳೆ ಪರಮೇಶ್ವರ್‌ ಈ ಅಧ್ಯಕ್ಷಗಿರಿಯನ್ನು ಬಿಟ್ಟುಕೊಡಲಿದ್ದಾರೆ.

ಈ ಸ್ಥಾನಕ್ಕೆ ಎಂ.ಟಿ.ಬಿ. ನಾಗರಾಜ್‌, ಬೈರತಿ ಸುರೇಶ್‌, ಎಸ್‌.ಟಿ.ಸೋಮಶೇಖರ್‌ ನಡುವೆ ಪೈಪೋಟಿಯಿದೆ. ತನಗೆ ಸಚಿವ ಸ್ಥಾನ ನೀಡಬೇಕು, ಇಲ್ಲದಿದ್ದರೆ ಕನಿಷ್ಠ ಪಕ್ಷ ಬಿಡಿಎ ಅಧ್ಯಕ್ಷಗಿರಿ ನೀಡಬೇಕು. ಇಲ್ಲದಿದ್ದರೆ ಪಕ್ಷ ತ್ಯಜಿಸುವೆ ಎಂದು ಈಗಾಗಲೇ ಎಂ.ಟಿ.ಬಿ.ನಾಗರಾಜ್‌ ಒತ್ತಡ ನಿರ್ಮಾಣ ಮಾಡಿದ್ದಾರೆ.

ಇನ್ನು ಕಳೆದ ಕಳೆದ ವಿಧಾನಸಭಾ ಚುನಾವಣೆ ವೇಳೆ ಸಿದ್ದರಾಮಯ್ಯ ಅವರ ಪರವಾಗಿ ಸಂಪನ್ಮೂಲ ಕ್ರೋಢೀಕರಣದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಬೈರತಿ ಸುರೇಶ್‌ ತೀವ್ರ ಲಾಬಿ ನಡೆಸಿದ್ದಾರೆ. ಇನ್ನು ಎಸ್‌.ಟಿ ಸೋಮಶೇಖರ್‌, ಮುನಿರತ್ನ ಹಾಗೂ ಬೈರತಿ ಬಸವರಾಜ್‌ ಮೂವರು ಸೇರಿ ಒಂದು ಗುಂಪು ಮಾಡಿಕೊಂಡಿದ್ದು, ಈ ಗುಂಪಿನ ಪರವಾಗಿ ಸೋಮಶೇಖರ್‌ಗೆ ಬಿಡಿಎ ಅಧ್ಯಕ್ಷಗಿರಿ ನೀಡಬೇಕು ಎಂಬ ಒತ್ತಡ ಹಾಕಿದ್ದಾರೆ ಎಂದು ಮೂಲಗಳು ಹೇಳಿವೆ.

ಬಿಡಿಎ ಮಾತ್ರವಲ್ಲದೆ, ಕಾಂಗ್ರೆಸ್‌ಗೆ ದೊರೆಯಲಿರುವ ಪ್ರಮುಖ ನಿಗಮ ಮಂಡಳಿಗಳಾದ ಕೆಯುಡಬ್ಲುಎಸ್‌ಎಸ್‌ಬಿ, ಕೊಳಗೇರಿ ನಿರ್ಮೂಲನಾ ಮಂಡಳಿ, ಗೃಹ ಮಂಡಳಿ, ಕಾವೇರಿ ನೀರಾವರಿ ಅಭಿವೃದ್ಧಿ ನಿಗಮ, ಕೃಷ್ಣಾ ಜಲ ಭಾಗ್ಯ ನಿಗಮ, ಕರ್ನಾಟಕ ಜಲಭಾಗ್ಯ ನಿಗಮ, ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ, ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ, ಹೈದ್ರಾಬಾದ್‌ ಕರ್ನಾಟಕ ಅಭಿವೃದ್ಧಿ ನಿಗಮ, ತುಂಗಭದ್ರ ಜಲಭಾಗ್ಯ ನಿಗಮ, ಕಾಂಪೋಸ್ಟ್‌ ಅಭಿವೃದ್ಧಿ ನಿಗಮ, ಆಹಾರ ನಿಗಮ, ಅಂಬೇಡ್ಕರ್‌ ಅಭಿವೃದ್ಧಿ ನಿಗಮ, ಹಿಂದುಳಿದ ವರ್ಗಗಳ ಅಬಿವೃದ್ಧಿ ನಿಗಮ ಮತ್ತು ಲಂಬಾಣಿ ಅಭಿವೃದ್ಧಿ ನಿಗಮಗಳು ಶಾಸಕರಿಗೆ ದೊರೆಯುವ ಸಾಧ್ಯತೆಯಿದೆ.

click me!